ದೇವನಹಳ್ಳಿ: ತಾಲೂಕಿನಲ್ಲಿ ಮಳೆ ಅವಾಂತರ ಸೃಷ್ಟಿ ಸಿದೆ. ಭಾನುವಾರ ರಾತ್ರಿ ಸುರಿದ ಮಳೆಗೆ ಜನ ತತ್ತರಿಸಿಹೋಗಿದ್ದಾರೆ. ಮಳೆಯಿಂದ ಮನೆಗಳ ಕುಸಿತ, ತೋಟಗಳು ಜಲಾವೃತವಾಗಿದ್ದು, ಅನ್ನ ದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಾಲೂಕಿನ ಅಣ್ಣೇಶ್ವರ ಗ್ರಾಮದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತಡೆಗೋಡೆ ಪಕ್ಕ ದಿಂದ ಹಾಗೂ ಕೆಐಎಡಿಸಿ ವತಿಯಿಂದ ಮಳೆ ನೀರು ಮನೆಗಳಿಗೆ ನುಗ್ಗಿ ರಾತ್ರಿಯಿಡಿ ಮಳೆ ನೀರನ್ನು ಕತ್ತಲಿ ನಲ್ಲಿಯೇ ಹೊರಹಾಕುವಂತೆ ಆಗಿದೆ. ಅಣ್ಣೇಶ್ವರ ಗ್ರಾಪಂ ಕಾಲೋನಿಯಲ್ಲಿ ಮುನಿರತ್ನಮ್ಮ ಎಂಬುವವರ ಮನೆ ಮಳೆಯಿಂದ ಕುಸಿದು ಬಿದ್ದು, ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಯಲ್ಲಿ 9 ಜನ ವಾಸವಾಗಿದ್ದರು. ಅದರಲ್ಲಿ ವಯಸ್ಸಾದ ಅಜ್ಜಿ, ಒಂದು ವರ್ಷದ ಮಗುವಿತ್ತು. ರಾತ್ರಿ 1 ಗಂಟೆಯಲ್ಲಿ ಮನೆಯಿಂದ ಅಜ್ಜಿ, ಮಗು ಇತರರನ್ನು ಸ್ಥಳಾಂತರಿಸ ಲಾಯಿತು.
ಅನಾಹುತದಿಂದ ಮನೆ ಸದಸ್ಯರು ಪಾರಾಗಿದ್ದಾರೆ. ಸ್ಥಳವನ್ನು ತಹಶೀಲ್ದಾರ್ ಶಿವರಾಜ್, ಅಣ್ಣೇಶ್ವರ ಗ್ರಾಪಂ ಅಧ್ಯಕ್ಷ ವೇಣು ಗೋಪಾಲ್, ಗ್ರಾಪಂ ಮಾಜಿ ಅಧ್ಯಕ್ಷರಾದ ಎ.ಚಂದ್ರಶೇಖರ್, ಮಂಜು ನಾಥ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಎ.ಎನ್. ವೆಂಕಟೇಶಪ್ಪ, ಗ್ರಾಪಂ ಸದಸ್ಯ ಮುನಿರಾಜಪ್ಪ, ಮುಖಂಡ ರಾದ ಕಾಂತರಾಜು, ಜಗದೀಶ್, ವೆಂಕಟೇಶ್, ಮನು ಪರಿಶೀಲಿಸಿದರು.
ಸರ್ಕಾರಿ ಪರಿಹಾರ ಸಾಕಾಗಲ್ಲ: ಅಣ್ಣೇಶ್ವರ ಗ್ರಾಮ ದಲ್ಲಿ ಸೇವಂತಿಗೆ, ಸುಗಂದರಾಜ್ ಹೂವು ಸೇರಿ ದಂತೆ ವಿವಿಧ ಹೂವು, ಬೆಳೆಗಳು ಜಲಾವೃತವಾಗಿದ್ದು, ರೈತರು ಬಂದ ಬೆಳೆ ಕೈಗೆ ಬರದಂತೆ ಆಗಿದೆ. ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ಎಂದು ರೈತರು ತಿಳಿಸಿದ್ದಾರೆ.
ಮಳೆಗೆ ಅಪಾರ ನಷ್ಟ: ತಾಲೂಕಿನ ಅಗಲಕೋಟೆ ಗ್ರಾಮ ದಲ್ಲಿ 4 ಮನೆಗಳು, ಕನ್ನಮಂಗಲ ಪಾಳ್ಯ ಗ್ರಾಮ ದಲ್ಲಿ ವಿದ್ಯುತ್ ಕಂಬಗಳು ಬಿದ್ದಿವೆ. ಅದರ ಪಕ್ಕದಲ್ಲಿಯೇ ಕಾಂಪೌಂಡ್ ಕುಸಿದು ಬಿದ್ದಿದೆ. ವಿದ್ಯುತ್ ಕಂಬದ ಪಕ್ಕದಲ್ಲಿದ್ದ ಕಾರು, ಆಟೋ ಜಖಂಗೊಂಡಿದೆ. ಆವತಿ ಗ್ರಾಮದಲ್ಲಿ 1 ಮನೆ ಮೇಲ್ಛಾ ವಣಿ ಕುಸಿದಿದೆ. ಲಾಲಗೊಂಡಹಳ್ಳಿ ಇತರೆ ಕಡೆಗಳಲ್ಲಿ ರಾಜಕಾಲುವೆಗಳ ಒತ್ತುವರಿಯಿಂದಾಗಿ ಜಮೀನುಗಳಲ್ಲಿ ನೀರು ನಿಂತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ.
ಮಳೆಗೆ ಅಂಡರ್ ಪಾಸ್‌ನಲ್ಲಿ ನೀರು ತುಂಬಿ ಕೊಂಡಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ತಾಲೂಕಿನ ಕೆರೆಗಳು ತುಂಬಿ ಕೋಡಿ ಹೋಗುತ್ತಿವೆ. ರಾಜಕಾಲುವೆಗಳು ಒತ್ತುವರಿ ಯಾಗಿದ್ದು ಅಧಿಕಾರಿಗಳು ರಾಜಕಾಲುವೆಗಳ ಸರ್ವೇ ಮಾಡಿಸಿ, ನೀರು ಸರಾಗವಾಗಿ ಹೋಗುವಂತೆ ಆಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.