ಬೆಳ್ತಂಗಡಿ: ಬಿಸಿ ಗಾಳಿ ಜತೆಗೆ ಬಿರು ಬಿಸಿಲಿನಿಂದ ಕೂಡಿದ್ದ ವಾತಾವರಣದ ಮಧ್ಯೆ ಬುಧವಾರ ಮುಂಜಾನೆ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ವರುಣ ಕೃಪೆ ತೋರಿದ್ದಾನೆ. ಮಡಂತ್ಯಾರು ಆಸುಪಾಸು ಮಚ್ಚಿನ ಸಹಿತ ಬೆಳ್ತಂಗಡಿ, ಮುಂಡಾಜೆ, ತೋಟತ್ತಾಡಿ, ನಡ, ಲಾಯಿಲ, ಉಜಿರೆ, ಕಲ್ಮಂಜ, ಧರ್ಮಸ್ಥಳ ಗ್ರಾಮಗಳ ಸಹಿತ ತಾಲೂಕಿನ ಕೆಲವು ಕಡೆ ಬುಧವಾರ ಮುಂಜಾನೆ 5ರಿಂದ 9ರ ವರೆಗೂ ಉತ್ತಮ ಮಳೆ ಸುರಿದಿದೆ.
ಮಂಗಳವಾರ ಸಂಜೆಯಿಂದಲೇ ಕೆಲವೆಡೆ ಮೋಡ ಕವಿದ ವಾತಾವರಣ ಕಂಡುಬಂದಿತ್ತಾದರೂ ಮಳೆ ಬರುವ ಮುನ್ಸೂಚನೆ ಇರಲಿಲ್ಲ. ಆದರೆ ಮುಂಜಾನೆ 2ರಿಂದ ಗುಡುಗು, ಸಿಡಿಲು ಆರಂಭವಾಗಿ 5ರ ವೇಳೆಗೆ ಉತ್ತಮ ಮಳೆಯಾಗಿದೆ.
ಮುಂಡಾಜೆ, ಬೆಳ್ತಂಗಡಿ, ಮಚ್ಚಿನ ಮುಂತಾದೆಡೆ ಸುಮಾರು ಅರ್ಧ ತಾಸು ಸುರಿದ ಮಳೆ ಬಳಿಕ ಬಿಡುವು ನೀಡಿ ಮತ್ತೆ ಬೆಳಗ್ಗೆ 7ರಿಂದ 9ರ ವರೆಗೆ ಸಾಮಾನ್ಯವಾಗಿ ಮುಂದುವರಿಯಿತು. ಇದು ವರ್ಷದ ಪ್ರಥಮ ಮಳೆಯಾಗಿದ್ದು, ಬತ್ತಿ ಹೋಗಿದ್ದ ಕೆಲವು ಸಣ್ಣ ಹಳ್ಳಗಳಲ್ಲಿ ನೀರು ಹರಿಯುವ ಮಟ್ಟಿಗೆ ಮಳೆ ಸುರಿದಿದೆ.
ಕಳೆದ ಮೂರು ವರ್ಷಗಳಲ್ಲಿ ತಾಲೂಕಿನಲ್ಲಿ ಮಾರ್ಚ್‌ನಲ್ಲಿ ಆರಂಭವಾದ ಮಳೆ ವರ್ಷಪೂರ್ತಿ ಸುರಿದಿದ್ದರಿಂದ ನೀರಿನ ಕೊರತೆ ಎದುರಾಗಿರಲಿಲ್ಲ. ಇತ್ತೀಚೆಗೆ ಶಿಶಿಲ, ಶಿಬಾಜೆ ಚಾರ್ಮಾಡಿ,ಮೊದಲಾದ ಗ್ರಾಮಗಳಲ್ಲಿ ಕಾಳಿYಚ್ಚು ಕಂಡು ಬಂದಿದ್ದು, ಪ್ರಸ್ತುತ ಮಳೆಯಿಂದಾಗಿ ಬೆಂಕಿ ಶಮನವಾಗಲಿದೆ.