Advertisement

ಮಳೆಯಾದ್ರೆ ಈ ರಸ್ತೆ ಜಲಾವೃತ!

05:07 PM Jul 04, 2022 | Team Udayavani |

ಗುಳೇದಗುಡ್ಡ: ಮಳೆಯಾದರೆ ಸಾಕು ಪಟ್ಟಣದ ಹೊಸ ಅಂಬಾಭವಾನಿ ದೇವಸ್ಥಾನ ಹತ್ತಿರ ಇರುವ ರಸ್ತೆ ನೀರಿನಿಂದ ಜಲಾವೃತವಾಗಿ ಬಿಡುತ್ತಿದ್ದು, ಇಲ್ಲಿನ ಜನರಿಗೆ ಸಾಕಷ್ಟು ತೊಂದರೆಯಾಗಿದೆ.

Advertisement

ಈ ಸಮಸ್ಯೆ ಸರಿಪಡಿಸಲು ಪುರಸಭೆಯವರಿಗೆ ಕಳೆದ 2-3 ವರ್ಷಗಳಿಂದ ಹೇಳುತ್ತ ಬಂದಿದ್ದರೂ ಸಮಸ್ಯೆ ಮಾತ್ರ ಇದುವರೆಗೂ ಬಗೆಹರಿದಿಲ್ಲ. ಈ ವಾರ್ಡ್‌ ಪುರಸಭೆ ಅಧ್ಯಕ್ಷರ ವ್ಯಾಪ್ತಿಗೆ ಬರುತ್ತಿದ್ದು, ಅಧ್ಯಕ್ಷರ ವಾರ್ಡ್‌ನ ಸಮಸ್ಯೆಯೇ ಹೀಗಾದರೆ ಉಳಿದ ವಾರ್ಡ್‌ನ ಗತಿ ಏನು ಎನ್ನುವಂತಾಗಿದೆ.

2-3 ಲೇಔಟ್‌ ಸಂಪರ್ಕ ರಸ್ತೆ: ನಗರದ ಎರಡ್ಮೂರು ಲೇಔಟ್‌ಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಮಳೆಗಾಲ ಬಂತೆಂದರೆ ಸಾಕು ಈ ರಸ್ತೆ ಕೆರೆಯಂತಾಗಿ ಬಿಡುತ್ತದೆ. ರಸ್ತೆ ಮೇಲೆ ನೀರು ನಿಲ್ಲುವ ಬಗ್ಗೆ ಸ್ಥಳಿಯರು ರೋಸಿ ಹೋಗಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೆಲ್ಲ ಪ್ರತಿಭಟನೆ ಮಾಡುವುದು, ಮನವಿ ಕೊಡುವುದು ಮಾಡಿ ಸಾಕಾಗಿದೆ. ಆದರೆ ಯಾರೊಬ್ಬರು ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ನಮಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂದು ಅಲ್ಲಿನ ನಾಗರಿಕರು ದೂರಿದ್ದಾರೆ.

ಕ್ರಮಕ್ಕೆ ಆಗ್ರಹ

ರಸ್ತೆ ನಿರ್ಮಿಸಿ ರಸ್ತೆ ಮಧ್ಯೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕೆಂದು ಗೀತಾ ಚಲ್ಲಾ, ಕವಿತಾ ಸೂಡಿ, ಉತ್ತರವ್ವ ರಂಜಣಗಿ, ಶೋಭಾ ರಂಜಣಗಿ, ಪರವಿನ ವಂದಾಲ, ಕಮಲವ್ವ ಕೆಲೂಡಿ, ಆರತಿ ಬಂಗಾರಶೆಟ್ಟರ, ಮಲ್ಲು ರಂಜಣಗಿ, ನಿರ್ಮಲಾ ಸೂಡಿ ಆಗ್ರಹಿಸಿದ್ದಾರೆ.

Advertisement

ವಿದ್ಯುತ್‌ ಸಂಪರ್ಕ

ಇದೇ ರಸ್ತೆ ಪಕ್ಕದಲ್ಲಿರುವ ನೇಕಾರ ನಗರದ ಕೆಲವು ಪ್ರದೇಶಗಳಲ್ಲಿ ಬೀದಿ ದೀಪಗಳ ಸಂಪರ್ಕ ಇಲ್ಲದಿರುವುದರಿಂದ ಅಲ್ಲಿನ ನಿವಾಸಿಗಳು ನಿತ್ಯವೂ ಕತ್ತಲಲ್ಲಿ ಸಂಚರಿಸುವಂತಾಗಿದೆ. ಬೀದಿದೀಪ ಇಲ್ಲದಿರುವುದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಸಂಚರಿಸಲು ಭಯಪಡುವಂತಾಗಿದೆ. ಹಲವು ಬಾರಿ ಮನವಿ ಮಾಡಿದ್ದೇವೆ ಆದರೂ ಗಮನ ಹರಿಸುತ್ತಿಲ್ಲ ಎಂದು ಹಸನಸಾಬ ಮುಚಾಲಿ, ಫಾರುಕ ವಂದಾಲ, ಅಂಬಾಸಾ ಕಾಟವಾ, ನಾಗಪ್ಪ ಅಣಿ ದೂರಿದ್ದಾರೆ.

ಸೊಳ್ಳೆಗಳ ಉತ್ಪತ್ತಿ

ರಸ್ತೆ ತುಂಬೆಲ್ಲ ನೀರು ನಿಲ್ಲುತ್ತಿರುವುದರಿಂದ ದಿನಗಳದಂತೆ ನೀರು ಮಲೀನಗೊಂಡು ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿದೆ. ಸೊಳ್ಳೆಗಳ ಕಾಟ ಮಿತಿ ಮೀರಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ ಎಂಬುದು ಜನರ ಅಳಲು.

ಹೊಸ ಅಂಬಾಭವಾನಿ ದೇವಸ್ಥಾನ ಹತ್ತಿರದ ರಸ್ತೆ ಮೇಲೆ ನೀರು ನಿಲ್ಲದಂತೆ ರಸ್ತೆ ನಿರ್ಮಿಸಲಾಗುವುದು. ಈ ಬಗ್ಗೆ ಗಮನ ವಹಿಸಿ ಅಲ್ಲಿನ ಸಮಸ್ಯೆ ಬಗೆಹರಿಸುವೆ.  –ಎಫ್‌.ಎನ್‌.ಹುಲ್ಲಿಕೇರಿ, ಪುರಸಭೆ ಮುಖ್ಯಾಧಿಕಾರಿ, ಗುಳೇದಗುಡ್ಡ

ಅಂಬಾಭವಾನಿ ದೇವಸ್ಥಾನ ಹತ್ತಿರ ಇರುವ ರಸ್ತೆ ಅಭಿವೃದ್ಧಿಗೆ ಈಗಾಗಲೇ 10 ಲಕ್ಷ ರೂ. ಮೀಸಲಿರಿಸಿದ್ದು, ತಾತ್ಕಾಲಿಕವಾಗಿ ಗರಸು ಹಾಕಿ ನೀರು ಮುಂದೆ ಹೋಗುವಂತೆ ಮಾಡುತ್ತೇವೆ. ಟೆಂಡರ್‌ ಕರೆದ ಕೂಡಲೇ ರಸ್ತೆ ನಿರ್ಮಿಸಲಾಗುವುದು. –ಯಲ್ಲವ್ವ ಗೌಡರ, ಪುರಸಭೆ ಅಧ್ಯಕ್ಷೆ, ಗುಳೇದಗುಡ್ಡ

-ಮಲ್ಲಿಕಾರ್ಜುನ ಕಲಕೇರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next