ಕಮಲನಗರ: ಸ್ವಲ್ಪ ಮಳೆಯಾದರೂ ಸಾಕು ಪಟ್ಟಣದ ಈ ಬಡಾವಣೆ ನೀರಿನಿಂದ ಜಲಾವೃತವಾಗುತ್ತದೆ. ತಗ್ಗು ಪ್ರದೇಶದಲ್ಲಿರುವ ಈ ಬಡಾವಣೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದಿರುವುದು ರಸ್ತೆಯನ್ನು ನೀರು ನುಂಗುವುದಷ್ಟೇ ಅಲ್ಲ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗುತ್ತದೆ.
ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1076 ಪಾಸಿಟಿವ್ ಪ್ರಕರಣ|1136 ಸೋಂಕಿತರು ಗುಣಮುಖ
ಇದು ಪಟ್ಟಣದ ಪಟ್ಟಣದ ರೈಲ್ವೆ ಬಡಾವಣೆಯ ದುಸ್ಥಿತಿ. ಪ್ರತಿ ಬಾರಿ ಮಳೆಯಾದರೆ ಸಾಕು ಈ ಪ್ರದೇಶ ಸಣ್ಣ ದ್ವೀಪದಂತಾಗುತ್ತದೆ. ಇನ್ನೂ ರಾತ್ರಿ ಮಳೆ ಸುರಿದರೆ ಮಕ್ಕಳು ಸೇರಿ ನಿವಾಸಿಗಳೆಲ್ಲ ಜಾಗರಣೆ ಮಾಡುವುದು ಸಾಮಾನ್ಯ. ಶನಿವಾರ ರಾತ್ರಿಯಿಡಿ ಭಾರಿ ಮಳೆಯಾಗಿರುವುದರಿಂದ ಬಡಾವಣೆ ಮತ್ತೆ ಜಲಾವೃತವಾಗಿತ್ತು. ವಾಹನ ಸಂಚಾರ ಮಾತ್ರವಲ್ಲ ನಡೆದಾಡಲು ಸಹ ಬಾರದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹೆದ್ದಾರಿ ಪಕ್ಕದಲ್ಲಿರುವ ಈ ಬಡಾವಣೆ ತೀರಾ ತಗ್ಗು ಪ್ರದೇಶಕ್ಕೆಇಳಿದಿದೆ.ಮುಖ್ಯವಾಗಿ ಮಳೆನೀರು ಹೋಗಲು ರಸ್ತೆಯ ಎರಡು ಬದಿಗಳಲ್ಲಿ ಸಮರ್ಪಕ ಒಳ ಚರಂಡಿಗಳ ವ್ಯವಸ್ಥೆ ಇಲ್ಲ. ಇದ್ದರೂ ಹೂಳು ತುಂಬಿಕೊಂಡಿದ್ದು, ಸ್ವಚ್ಛಗೊಳಿಸುವ ಕಾರ್ಯಕ್ಕೆ ಪಂಚಾಯತ ಸಿಬ್ಬಂದಿಗಳು ಮುಂದಾಗುವುದಿಲ್ಲ. ಇದರಿಂದ ರಸ್ತೆ ಮೇಲೆ ನೀರು ನಿಂತು ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಹೀಗಾಗಿ ಈ ಸಮಸ್ಯೆ ನಿವಾಸಿಗಳಿಗೆ ಶಾಶ್ವತ ಎಂಬಂತಾಗಿದೆ.
ಪಟ್ಟಣ ಸೇರಿ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗಿರುವುದು ವರದಿಯಾಗಿದೆ. ನೀರು ಹರಿಯಲು ದಾರಿ ಇಲ್ಲದಿರುವುದರಿಂದ ನಿವಾಸಿಗಳ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ದವಸ, ಧಾನ್ಯಗಳು, ಸಾಮಗ್ರಿಗಳು ನೀರಿನಲ್ಲಿ ನೆನೆದು ಹಾಳಾಗಿವೆ. ಕೆಲವರು ಭಾನುವಾರ ನಸುಕಿನ ಜಾವದಿಂದ ತಮ್ಮ ಮನೆಗಳಲ್ಲಿ ನೀರು ನುಗ್ಗಿರುವುದನ್ನು ತೆಗೆಯಲು ಹರಸಾಹಸ ಪಡುವಂತಾಯಿತು. ಸಂಬಂಧಿತ ಅಧಿಕಾರಿಗಳು ಶೀಘ್ರದಲ್ಲಿ ರಸ್ತೆ ದುರಸ್ತಿ ಹಾಗೂ ಚರಂಡಿ ವ್ಯವಸ್ಥೆ ಮಾಡಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿಸಬೇಕು ಎಂದು ಬಡಾವಣೆಯ ನಾಗರಿಕರು ಒತ್ತಾಯಿಸುತ್ತಾರೆ.
*ಮಹಾದೇವ ಬಿರಾದಾರ