Advertisement

ರೈಲೆ ಅಂಡರ್‌ ಪಾಸ್‌ ಬಳಕೆ ಜನಸ್ನೇಹಿ ಆಗಿರಲಿ : ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ಸೂಚನೆ

12:38 PM Jan 05, 2022 | Team Udayavani |

ದೇವನಹಳ್ಳಿ: ರೈಲ್ವೆ ಅಂಡರ್‌ ಪಾಸ್‌ಗಳಲ್ಲಿ 15 ಅಡಿಗಳಿಗೂ ಹೆಚ್ಚು ಮಳೆಯ ನೀರು ನಿಂತು ಬಹಳಷ್ಟು ಹಳ್ಳಿಗಳು ಸಂಪರ್ಕ ಕಳೆದುಕೊಂಡು ಭವಣೆ ಅನುಭವಿ ಸಿದ್ದ ಬಗ್ಗೆ ಸದನದಲ್ಲಿ ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ, ವೆಂಕಟರಮಣಯ್ಯ ಗಮನ ಸೆಳೆದಿದ್ದರಿಂದ ವಸತಿ ಸಚಿವ ವಿ.ಸೋಮಣ್ಣ ವಿಶೇಷ ರೈಲಿನಲ್ಲಿ ಬಂದು ಅಂಡರ್‌ ಪಾಸ್‌ಗಳನ್ನು ವೀಕ್ಷಣೆ ಮಾಡಿದರು.

Advertisement

ತಾಲೂಕಿನ ಯರ್ತಿಗಾನಹಳ್ಳಿ, ಡಾಬಾಗೇಟ್‌, ದೇವನಹಳ್ಳಿ ರೈಲು ನಿಲ್ದಾಣ, ಅಕ್ಕುಪೇಟೆ ಬುಳ್ಳಹಳ್ಳಿ, ಇರಿಗೇನಹಳ್ಳಿ ರೈಲ್ವೆ ಅಂಡರ್‌ ಪಾಸ್‌ ವೀಕ್ಷಣೆ ಮಾಡಿದ ಅವರು, ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಈ ಬಗ್ಗೆ ಏನೇನು ಕ್ರಮ ಕೈಗೊಂಡಿದ್ದೀರಿ ಎನ್ನುವ
ಕುರಿತು ಎರಡು ದಿನಗಳಲ್ಲಿ ವರದಿ ನೀಡಬೇಕು. ನಾನು ಹುಚ್ಚನಿದ್ದಂತೆ ತಲೆ ಕೆಟ್ಟರೆ ಎಂತಹ ಕ್ರಮ ಕೈಗೊಳ್ಳಲಿಕ್ಕೂ ಹಿಂದೆ ಸರಿಯಲ್ಲ, ಈ ಭಾಗದಲ್ಲಿ 25ಕ್ಕೂ ಹೆಚ್ಚು ಕಡೆಗಳಲ್ಲಿ ಇದೇ ರೀತಿಯಾಗಿ ಸಮಸ್ಯೆಯಾಗಿದೆ.

ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಈ ಭಾಗದ ಶಾಸಕರು ಸದನದಲ್ಲಿ ಧ್ವನಿಯೆತ್ತಿದ್ದರಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು, ವಿಶೇಷ ರೈಲಿನಲ್ಲೇ ಬಂದು ವೀಕ್ಷಣೆ ಮಾಡುವಂತಾಗಿದೆ. ಅಧಿಕಾರಿಗಳು ತ್ವರಿತವಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಅಗತ್ಯ ಕ್ರಮ ಕೈಗೊಳ್ಳುತ್ತೇವೆ: ರೈಲ್ವೆ ಅಂಡರ್‌ ಪಾಸ್‌ ಗಳಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳ ಬೇಕು. ತ್ವರಿತವಾಗಿ ಜನರಿಗೆ ಅನುಕೂಲವಾಗುವಂತೆ ಮಾಡಬೇಕು. ಇಚ್ಛಾಶಕ್ತಿಯ ಕೊರತೆಯಿಂದ ತಪ್ಪುಗಳಾಗಿವೆ. ಚಿಕ್ಕಬಳ್ಳಾಪುರ, ಕೋಲಾರ, ಗ್ರಾಮಾಂತರ ಜಿಲ್ಲೆಗಳಲ್ಲಿ ಈ ಸಮಸ್ಯೆಯಾಗಿವೆ. ಕೂಡಲೇ ಪರಿಹಾರ ಮಾಡಲಿದ್ದೇವೆ. ಸರ್ವಿಸ್‌ ರಸ್ತೆಗಳನ್ನು ನಿರ್ಮಾಣ ಮಾಡಲಿಕ್ಕೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇದನ್ನೂ ಓದಿ : ಒಮಿಕ್ರಾನ್ ಹೆಚ್ಚಳವಾದರೂ ಅಂತರರಾಜ್ಯ ಗಡಿ ಬಂದ್ ಇಲ್ಲ: ಸಚಿವ ಡಾ.ಅಶ್ವತ್ಥನಾರಾಯಣ

Advertisement

ಅಧಿಕಾರಿಗಳಿಗೆ ಸೂಚನೆ: ಐವಿಸಿ ರಸ್ತೆಗೆ ಸಂಪರ್ಕ ಪಡೆಯುವ 50 ಹಳ್ಳಿಗಳ ಜನರಿಗೆ ರೈಲ್ವೆ ಅಂಡರ್‌ ಪಾಸ್‌ನಿಂದ ತೊಂದರೆಯಾಗುತ್ತಿದೆ. ಎಂತಹ ಮಳೆ ಬಂದರೂ ನೀರು ನಿಲ್ಲದಂತಾಗಬೇಕು. ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡಿರುವ ದೊಡ್ಡಜಾಲ, ಆವತಿ, ವೆಂಕಟಗಿರಿಕೋಟೆ, ನಂದಿ ಗ್ರಾಮದಲ್ಲಿನ ರೈಲ್ವೆ ನಿಲ್ದಾಣಗಳು ಶಿಥಿಲಗೊಂಡಿದ್ದು, ಈ ಪಾರಂಪರಿಕ ಕಟ್ಟಡಗಳನ್ನು ಪಾರಂಪರಿಕತೆಗೆ ಧಕ್ಕೆಯಾಗದಂತೆ ನವೀಕರಿಸಲು ಅಧಿಕಾರಿಗಳಿಗೆ ಸೂಚಿಸಿದರು.

5 ಲಕ್ಷ ಮನೆ ಮಂಜೂರು: ರಾಜ್ಯದಲ್ಲಿ 5 ಲಕ್ಷ ಮನೆಗಳು ಕೊಟ್ಟಿದ್ದೇವೆ. ನಾವು ಪಾರದರ್ಶಕತೆಯನ್ನು ತಂದು, ಬಡವನಿಗೆ ಮನೆ ನೀಡುವ ಕೆಲಸ ಮಾಡುತ್ತಿದ್ದೇವೆ. ಒಂದೊಂದು ಪಂಚಾಯಿತಿಗೆ 30-50 ಮನೆ ಗಳು ಕೊಡಲಿಕ್ಕೆ ವ್ಯವಸ್ಥೆ ಮಾಡಿದ್ದೇವೆ. ಫ‌ಲಾನುಭವಿಗಳಿಗೆ 3 ಹಂತಗಳಲ್ಲಿ ಹಣ ಬಿಡುಗಡೆಯಾಗಲಿದೆ. 1 ಲಕ್ಷ ಮನೆಗಳು ನಗರ ಪ್ರದೇಶಗಳಿಗೆ 4 ಲಕ್ಷ ಮನೆಗಳು
ಗ್ರಾಮಾಂತರ ಪ್ರದೇಶಗಳಿಗೆ ನಿಗದಿಪಡಿಸಿದ್ದೇವೆ ಎಂದರು.

ಆಯ್ತು ಕೊಡೋಣ ಬನ್ರಿ: ನಗರ ಪ್ರದೇಶಗಳಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ. ನೀವ್ಯಾಕೆ ಸುಳ್ಳು ಹೇಳ್ತಿದ್ದೀರಿ, ನಾವು ಸದಸ್ಯರಾಗಿದ್ದು, ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಾವು ಏನು ಹೇಳಬೇಕು ಅವರಿಗೆ ಎಂದು ಪುರಸಭಾ ಸದಸ್ಯ ಜಿ.ಎ.ರವೀಂದ್ರ ಸಚಿವ ವಿ.ಸೋಮಣ್ಣ ಅವರನ್ನು ಪ್ರಶ್ನಿಸಿದರು. ಆಯ್ತು ಕೊಡೋಣ ಬನ್ರಿ, ಯಾರಿಗೆ ಕೊಟ್ಟಿಲ್ಲ ಪಟ್ಟಿ ಕೊಡ್ರಿ ಎಂದು ಮುಂದೆ ಹೊರಟರು.

ಸುಗಮವಾಗಿ ಓಡಾಡುವಂತೆ ಆಗಬೇಕು: ಶಾಸಕ ಎಲ್‌.ಎನ್‌. ನಾರಾಯಣಸ್ವಾಮಿ ಮಾತನಾಡಿ, ರೈಲ್ವೆ ಇಲಾಖೆ ಮಾಡಿರುವ ಅವೈಜ್ಞಾನಿಕ ಅಂಡರ್‌ ಪಾಸ್‌ ಗಳಿಂದ ಜನಸಾಮಾನ್ಯರು ತಾಲೂಕಿನಲ್ಲಿ ಸಮಸ್ಯೆ ಎದುರಿಸುತ್ತಿದ್ದರು. ಸುತ್ತಮುತ್ತಲಿನ ಗ್ರಾಮಸ್ಥರು ಈ ಅಂಡರ್‌ ಪಾಸ್‌ಗಳಲ್ಲಿ ಹೋಗುವುದೇ ಕಷ್ಟವಾಗುತ್ತಿತ್ತು. ಜನರ ಸಮಸ್ಯೆ ಅರಿತು ಸದನದಲ್ಲಿ ಪ್ರಶ್ನಿಸಿದ್ದೆ.
ತ್ವರಿತವಾಗಿ ಕಾಮಗಾರಿ ಪೂರ್ಣಗೊಂಡು ಜನಸಾಮಾನ್ಯರು ಸುಗ ಮವಾಗಿ ಓಡಾಡುವಂತೆ ಆಗಬೇಕು ಎಂದು ಹೇಳಿದರು. ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರಮೂರ್ತಿ, ರೈಲ್ವೆ ಇಲಾಖೆ ಮುಖ್ಯ ಅಭಿಯಂತರ ಲಕ್ಷ್ಮಣ್‌ ಸಿಂಗ್‌, ಮುಖ್ಯ ಎಂಜಿನಿಯರ್‌ ಪ್ರಭು, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌,
ಅಪರ ಜಿಲ್ಲಾಧಿಕಾರಿ ವಿಜಯ. ಈ. ರವಿಕುಮಾರ್‌, ಜಿಪಂ ಸಿಇಒ ರೇವಣಪ್ಪ, ಉಪವಿಭಾಗಾಧಿಕಾರಿ ಅರುಳ್‌ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next