Advertisement

ವಾಹನ ಸವಾರರಿಗೆ ಸಮಸ್ಯೆ ಆಗಿದ್ದ ರೈಲ್ವೆ ಯೂಟರ್ನ್

05:31 PM Aug 15, 2021 | Team Udayavani |

ಬಂಗಾರಪೇಟೆ: ಬಂಗಾರಪೇಟೆ-ಕೋಲಾರ ರೈಲ್ವೆ ಹಳಿ ದಾಟಲು ಇದ್ದ ಯೂಟರ್ನ್ ಅನ್ನು ಸ್ಥಗಿತಗೊಳಿಸಿ, ಹಿಂದಿನಂತೆ ನೇರ ಮಾರ್ಗವನ್ನೇ ಮುಂದುವರಿಸುವ ಸಂಬಂಧ ಸಂಸದ ಎಸ್‌.ಮುನಿಸ್ವಾಮಿ ಮಾಡಿದ ಮನವಿ ಮೇರೆಗೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಬಂಗಾರಪೇಟೆಯಿಂದ ಬೂದಿಕೋಟೆ ಮೂಲಕ ಮಾಲೂರು ತಾಲೂಕಿಗೆ ಹಾದುಹೋಗುವ ರಸ್ತೆ ಮಾರ್ಗದಲ್ಲಿಪ್ರತಿನಿತ್ಯ ಸಾವಿರಾರು ವಾಹನ ಸಂಚಾರ ಮಾಡುತ್ತವೆ. ಬೂದಿಕೋಟೆ ಮುಖ್ಯರಸ್ತೆಗೆ ಹಾದು ಹೋಗಲು ಸೇಟ್‌ಕಾಂಪೌಂಡ್‌ ಬಳಿ ಯೂಟರ್ನ್ ಮಾಡಿಕೊಂಡು ವಾಹನಗಳು ಬರಬೇಕಾಗಿತ್ತು. ಇದರಿಂದ ಸವಾರರಿಗೆ ತೀವ್ರ ತೊಂದರೆ ಆಗಿದೆ. ಹಿಂದೆ ಬಂಗಾರಪೇಟೆ-ಕೋಲಾರ ರೈಲ್ವೆ ಹಳಿ ದಾಟಿಕೊಂಡು ವಾಹನಗಳು ಸಂಚಾರ ಮಾಡುತ್ತಿದ್ದವು. ಇದರಿಂದ ವಾಹನ ದಟ್ಟಣೆ ಆಗುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ಕೇಂದ್ರ ರೈಲ್ವೆ ಇಲಾಖೆಯು ನೇರವಾಗಿದ್ದ ಮಾರ್ಗವನ್ನು ಮುಚ್ಚಿ, ಸ್ವಲ್ಪ ದೂರದಲ್ಲಿ ಯೂಟರ್ನ್ ಮಾಡಿಕೊಂಡು ಬರಲು ವ್ಯವಸ್ಥೆ ಮಾಡಿದ್ದರಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಆಗಿದೆ. ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಇದನ್ನೂ ಓದಿ:ಜಗದ್ವಂದ್ಯ ರಾಷ್ಟ್ರವಾಗುವತ್ತ ಮುನ್ನಡೆದ ಭಾರತ : ನಳಿನ್‍ಕುಮಾರ್ ಕಟೀಲ್

ಈ ಮಾರ್ಗದಲ್ಲಿ ಬೂದಿಕೋಟೆ ಹೋಬಳಿ ಅಲ್ಲದೇ, ಮಾಲೂರು ತಾಲೂಕು ಹಾಗೂ ತಮಿಳುನಾಡು ರಾಜ್ಯಗಳಿಗೆ ಭಾರೀ ವಾಹನಗಳು ಸಂಚಾರ ಮಾಡಿದ್ದರಿಂದ ರೈಲ್ವೆ ಇಲಾಖೆಯು ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಯೂಟರ್ನ್ ರಸ್ತೆ ತೀವ್ರವಾಗಿ ಹದೆಗೆಟ್ಟಿತ್ತು. ಕೇಂದ್ರ ರೈಲ್ವೆ ಇಲಾಖೆಯು ಹಲವಾರು ಬಾರಿ ತೇಪೆ ಕೆಲಸ ಮಾಡಿದರೂ ರಸ್ತೆ ಪದೇ ಪದೆ ಗುಂಡಿ ಬಿದ್ದು ಹದಗೆಡುತ್ತಿತ್ತು.

ಬೆಂಗಳೂರಿನ ವಿಭಾಗೀಯ ರೈಲ್ವೆ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಪ್ರವೀಣ್‌, ಶ್ರೀವಾತ್ಸವ್‌ ಧನಂಜಯ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ
ಪರಿಶೀಲಿಸಿದರು. ಕೋಲಾರ ರೈಲ್ವೆ ಹಳಿ ಸುತ್ತು ಹಾಕಿ ಬರುವುದರಿಂದ ಟ್ರಾಫಿಕ್‌ ಸಮಸ್ಯೆ,ಅಪಘಾತ ಹೆಚ್ಚು ಸಂಭವಿಸುತ್ತಿದ್ದ ಬಗ್ಗೆ ಇಲ್ಲಿನ ಸ್ಥಳೀಯರು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನದಟ್ಟು ಆಗುವಂತೆ ಮನವಿ ಮಾಡಿದರು.

Advertisement

ತಹಶೀಲ್ದಾರ್‌ ಎಂ.ದಯಾನಂದ್‌, ಗ್ರಾಮ ಲೆಕ್ಕಿಗ ಪವನ್‌, ಹುಲಿಬೆಲೆ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಹುಣಸನಹಳ್ಳಿ ಎಚ್‌.ಆರ್‌.ಶ್ರೀನಿವಾಸ್‌, ಭಜರಂಗದಳದ ಬಿ.ಪಿ.ಮಹೇಶ್‌, ಬಿಜೆಪಿ ಯುವ ಮೋರ್ಚಾಧ್ಯಕ್ಷ ಬಿಂದು ಮಾಧವ, ರಾಜೇಶ್‌ ಹಾಜರಿದ್ದರು.

ಬಂಗಾರಪೇಟೆ ಜನತೆಗೆಕೊಟ್ಟ ಮಾತಿನಂತೆ ರೈಲ್ವೆ ಗೇಟ್‌ ಸಮಸ್ಯೆ ಬಗೆಹರಿಸಲು ತೀವ್ರ ಪ್ರಯತ್ನ ಮಾಡುತ್ತಿದ್ದೇನೆ. ಈ ಸಂಬಂಧ ರೈಲ್ವೆ ಮಂತ್ರಿಗೆ ಮನವಿ ಮಾಡಿದ್ದೇನೆ. ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದಷ್ಟು ಬೇಗ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
– ಎಸ್‌.ಮುನಿಸ್ವಾಮಿ, ಸಂಸದರು, ಕೋಲಾರ.

Advertisement

Udayavani is now on Telegram. Click here to join our channel and stay updated with the latest news.

Next