ಬೆಂಗಳೂರು: ಇತ್ತೀಚೆಗಷ್ಟೇ ಉಪನಗರ ರೈಲು ಯೋಜನೆಯ ಪರಿಷ್ಕೃತ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿತ್ತು. ಇದರ ಬೆನ್ನಲ್ಲೇ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಸುರಂಗದಲ್ಲಿ ನಿರ್ಮಿಸಲು ಚಿಂತನೆ ನಡೆದಿದೆ.
ಜಾಗವೂ ಉಳಿತಾಯ:ಇದು ನಗರದಲ್ಲಿರುವ ‘ನಮ್ಮ ಮೆಟ್ರೋ’ ಸುರಂಗದಷ್ಟು ಆಳಕ್ಕೆ ಹೋಗುವುದಿಲ್ಲ. ಕೇವಲ ರೈಲಿನ ಗಾತ್ರದಷ್ಟು ಅಂದರೆ ಅಬ್ಬಬ್ಟಾ ಎಂದರೆ 8 ಮೀಟರ್‌ನಷ್ಟು ಆಳದಲ್ಲಿ ಕಾಲುವೆ ರೂಪದಲ್ಲಿ ಭೂಮಿಯನ್ನು ಅಗೆದು, ಕಾಂಕ್ರೀಟ್ ಮಾರ್ಗ ನಿರ್ಮಾಣ ಮಾಡಲಾಗುವುದು. ನಂತರ ಅದರ ಮೇಲೆ ಕಾಂಕ್ರೀಟ್ ಹಾಕಿ ಮುಚ್ಚಲಾಗುವುದು. ಇದೊಂದು ರೀತಿ ಕಾಂಕ್ರೀಟ್ ಬಾಕ್ಸ್ ಆಗಿರುತ್ತದೆ. ಖರ್ಚು ಕಡಿಮೆ ಜತೆಗೆ ಜಾಗವೂ ಉಳಿತಾಯ ಆಗುತ್ತದೆ. ಸುರಂಗ ಮಾರ್ಗಕ್ಕೆ ಹೋಲಿಸಿದರೆ, ಇದರಿಂದ ಸಮಯವೂ ಉಳಿತಾಯ ಆಗಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಅಧಿಕಾರಿಯೊಬ್ಬರು ತಿಳಿಸಿದರು.
ಶೀಘ್ರ ಅಂತಿಮ: ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉಪನಗರ ರೈಲು ಮಾರ್ಗವನ್ನು ಭೂಮಿಯ ಒಳಗಡೆ ನಿರ್ಮಿಸುವ ಚಿಂತನೆಯೂ ಇದೆ. ಆದರೆ, ಸುರಂಗ ಮಾರ್ಗ ಇದು ಆಗಿರುವುದಿಲ್ಲ. ರಸ್ತೆ ಕತ್ತರಿಸಿ, ಕಾಮಗಾರಿ ಪೂರ್ಣಗೊಳಿಸಿ ಪುನಃ ಮುಚ್ಚುವಂತೆ ಈ ಮಾರ್ಗ ಇರಲಿದೆ. ಸುರಂಗ ಮಾರ್ಗವಾದರೆ ಕಿ.ಮೀ.ಗೆ 250ರಿಂದ 300 ಕೋಟಿ ರೂ. ಖರ್ಚಾಗುತ್ತದೆ. ಈ ಮಾದರಿ ಅನುಸರಿಸಿದರೆ, ಕೇವಲ 50 ಕೋಟಿ ರೂ. ಆಗುತ್ತದೆ. ಮಾರ್ಗದುದ್ದಕ್ಕೂ 20 ಮೀ.ನಷ್ಟು ಜಾಗ ಉಳಿಯುತ್ತದೆ. ಅದನ್ನು ಭವಿಷ್ಯದಲ್ಲಿ ಯಾವುದಕ್ಕಾದರೂ ಬಳಕೆ ಮಾಡಿಕೊಳ್ಳಬಹುದು. ಇದುವರೆಗೆ ಯಾವ ವಿಧಾನ ಅನುಸರಿಸಬೇಕು ಎಂಬುದು ಅಂತಿಮಗೊಂಡಿಲ್ಲ’ ಎಂದು ಉಪನಗರ ರೈಲು ಯೋಜನೆಯ ವಿಶೇಷಾಧಿಕಾರಿ ಅಮಿತ್ ಗರ್ಗ್ ‘ಉದಯವಾಣಿ’ಗೆ ಮಾಹಿತಿ ನೀಡಿದರು.
ಕೋಲ್ಕತ್ತಾ ಮೆಟ್ರೋ ಯೋಜನೆಯಲ್ಲಿ ಈ ಪ್ರಯೋಗ ಮಾಡಲಾಗಿದೆ. ಅಷ್ಟೇ ಅಲ್ಲ, ‘ನಮ್ಮ ಮೆಟ್ರೋ’ ಯೋಜನೆಯ ಮೊದಲ ಹಂತದಲ್ಲಿ ಕಂಠೀರವ ಕ್ರೀಡಾಂಗಣ ಬಳಿ, ಮಂತ್ರಿಸ್ಕ್ವೇರ್, ಮಕ್ಕಳಕೂಟ ಸೇರಿದಂತೆ ರ್‍ಯಾಂಪ್‌ಗ್ಳು ಇರುವ ಕಡೆಗಳಲ್ಲಿ ಸುಮಾರು 200-250 ಮೀ. ಉದ್ದದಷ್ಟು ರಸ್ತೆ ಕತ್ತರಿಸಿ, ಬಾಕ್ಸ್ ನಿರ್ಮಿಸಿರುವುದನ್ನು ಕಾಣಬಹುದು. ಟನಲ್ಗೂ ಇದಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಈ ಮಾದರಿ ಕೂಡ ಸುರಕ್ಷಿತವಾದುದ್ದಾಗಿದೆ ಎಂದು ನಮ್ಮ ಮೆಟ್ರೋ ಯೋಜನೆಯಲ್ಲಿ ಕಾರ್ಯನಿರ್ವಹಿಸಿದ ಹಿರಿಯ ಎಂಜಿನಿಯರ್ ಸ್ಪಷ್ಟಪಡಿಸಿದರು.
Advertisement
ದೊಡ್ಡಜಾಲ ಹಾಲ್ ಸ್ಟೇಷನ್‌ನಿಂದ ಬರುವ ಉಪನಗರ ರೈಲು ಮಾರ್ಗವು ವಿಮಾನ ನಿಲ್ದಾಣದ ಕಾಂಪೌಂಡ್‌ನಿಂದ ಟರ್ಮಿನಲ್ವರೆಗೆ ಭೂಮಿಯ ಕೆಳಭಾಗದಲ್ಲಿ ತೆಗೆದುಕೊಂಡು ಹೋಗಲು ಉದ್ದೇಶಿಸಲಾಗಿದೆ. ಈ ಮೂಲಕ ನಿಲ್ದಾಣ ಆವರಣದಲ್ಲಿನ ಭೂಮಿಯನ್ನು ಉಳಿಸಿ, ಭವಿಷ್ಯದಲ್ಲಿ ಬಳಸಿಕೊಳ್ಳುವ ದೃಷ್ಟಿಯಿಂದ ಈ ಹೊಸ ವಿಧಾನದಲ್ಲಿ ಮಾರ್ಗ ನಿರ್ಮಾಣ ಮಾಡುವ ಯೋಚನೆ ಇದೆ.
Related Articles
6 ತಿಂಗಳಿಗೊಂದು ಪ್ಲಾನ್; ಬೇಸರ
‘ವಿಮಾನ ನಿಲ್ದಾಣದಿಂದ ಕೇವಲ ನಾಲ್ಕೂವರೆಯಿಂದ ಐದು ಕಿ.ಮೀ. ದೂರ ಇರುವ ರೈಲು ಮಾರ್ಗವನ್ನು ನಿಲ್ದಾಣದ ಟರ್ಮಿನಲ್ಗೆ ವಿಸ್ತರಿಸಲು ಹತ್ತು ವರ್ಷ ಕಳೆದಿದೆ. ಇದುವರೆಗೆ ಯೋಜನೆಯೇ ಅಂತಿಮಗೊಂಡಿಲ್ಲ. ಇನ್ನು ಅದು ಅಂತಿಮಗೊಳ್ಳುವುದು ದೂರದ ಮಾತು. ಆರು ತಿಂಗಳಿಗೊಮ್ಮೆ ಹೀಗೆ ಸಭೆ ಕರೆದು, ಯಾವುದಾದರೂ ಆಲೋಚನೆಯೊಂದನ್ನು ಮುಂದಿಡಲಾಗುತ್ತಿದೆ. ಹೀಗೆ ಮುಂದೂಡುವುದರಿಂದ ಯೋಜನಾ ವೆಚ್ಚ ವಿಸ್ತರಣೆ ಜತೆಗೆ ಸಮಯ ಕೂಡ ವ್ಯರ್ಥವಾಗುತ್ತದೆ’ ಎಂದು ಪ್ರಜಾ ರಾಗ್ ಸಂಸ್ಥೆಯ ಸದಸ್ಯ ಹಾಗೂ ಉಪನಗರ ರೈಲು ಹೋರಾಟಗಾರ ಸಂಜೀವ ದ್ಯಾಮಣ್ಣವರ ಬೇಸರ ವ್ಯಕ್ತಪಡಿಸಿದರು.
● ವಿಜಯಕುಮಾರ್ ಚಂದರಗಿ
Advertisement