ಬೇಲೂರು: ರೈಲ್ವೆ ಇಲಾಖೆಯಲ್ಲಿ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಗುರುಪೂರ್ಣಿಮಾ ಮತ್ತು ಗುರು ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ 20 ವರ್ಷಗಳಿಂದ ರಾಜ್ಯ ಸೇರಿ ದೇಶದ ಹಲವಾರು ರೈಲ್ವೆ ಯೋಜನೆಗಳು ಪೂರ್ಣ ಗೊಳ್ಳದೆ ನನೆಗುದಿಗೆ ಬಿದ್ದು ಅಂತಹ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವರು ಸೂಚನೆ ನೀಡಿದ್ದು, ಈಗಾಗಲೇ ಯಾವ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುದನ್ನು ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸುಮಾರು 11 ಸಾವಿರ ಕೋಟಿ ವೆಚ್ಚದಲ್ಲಿ ಹಲವಾರು ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಡಿದ್ದು ಅದರಲ್ಲಿ ಹಾಸನ – ಬೇಲೂರು ರೈಲ್ವೆ ಮಾರ್ಗ 1994 ರಿಂದ ನನೆಗುದಿಗೆ ಬಿದ್ದಿದೆ. ಇದಲ್ಲದೆ ಸುಮಾರು 11 ಸಾವಿರ ಲೈನ್‌ಗಳನ್ನು ನಿರ್ಮಾಣ ಮಾಡಲಿದ್ದು ರಾಯದುರ್ಗ-ತುಮಕೂರು, ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗಗಳಲ್ಲಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿ, ರೈಲ್ವೆ ಸಚಿವರಾದ ಸೋಮಣ್ಣನವರು ಪ್ರವಾಸಿ ತಾಣವಾದ ಹಳೇ ಬೀಡಿಗೆ ರೈಲ್ವೆ ಯೋಜನೆ ನೀಡಬೇಕು. ಅಲ್ಲದೇ ತಾಲೂಕಿನಲ್ಲಿ ಹಲವಾರು ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದು ಯೋಜನೆಗಳನ್ನು ಪೂರ್ಣಗೊಳಿಸಿ ತಾಲೂಕಿನ ಜನರಿಗೆ ಶಾಶ್ವತ ನೀರಾವರಿ ಯೋಜನೆ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ.ಸುರೇಶ್, ಕಾಂಗ್ರೆಸ್ ಮುಖಂಡ ರಾಜಶೇಖರ್, ಮಾಜಿ ಸಂಸದ ಜವರೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಬಿಜೆಪಿ ವಕ್ತಾರ ಚಂದ್ರಶೇಖರ್, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಂಜುನಾಥ್, ಅಖಿಲ ಭಾರತ ವೀರಶೈವ ಮಹಾ ಸಭಾ ಜಿಲ್ಲಾಧ್ಯಕ್ಷ ಪರಮೇಶ್ವರ್, ಇತರರಿದ್ದರು.