Advertisement

ಗದಗ-ವಾಡಿ ರೈಲು ನಿಲ್ದಾಣಕ್ಕೆ ಭೂಸ್ವಾಧೀನ : ಎಲ್ಲ ಮನೆಗಳಿಗೂ ಒಂದೇ ಪರಿಹಾರ

08:50 AM Aug 21, 2022 | Team Udayavani |

ಕುಷ್ಟಗಿ: ಗದಗ-ವಾಡಿ ರೈಲು ನಿಲ್ದಾಣಕ್ಕೆ ಭೂಸ್ವಾಧೀನಗೊಂಡ ನಿವೇಶನ ಹಾಗೂ ಮನೆಗಳಿಗೆ ಪರಿಹಾರದ ವಿಷಯದಲ್ಲಿ ರೈಲ್ವೇ ಇಲಾಖೆ ತಗಡಿನ ಮೇಲ್ಚಾವಣೆ ಮನೆಗೂ ಅದೇ ಪರಿಹಾರ ಆರ್ ಸಿಸಿ ಮೇಲ್ಚಾವಣೆ ಮನೆಗೂ ಅದೇ ಪರಿಹಾರ.

Advertisement

ಕುಷ್ಟಗಿ ಪಟ್ಟಣದ ಹೊರವಲಯದ ಅಲೆಮಾರು ಬುಡಕಟ್ಟು ಜನಾಂಗದವರು ವಾಸವಿರುವ ಸಂತ ಶಿಶುನಾಳ ಷರೀಫ್ ನಗರದಲ್ಲಿ ಸ.ನಂ 59/3ರಲ್ಲಿ 109 ಮನೆಗಳಿವೆ. ಈ ಜನವಸತಿ ಪ್ರದೇಶದ ಪಕ್ಕದಲ್ಲಿ ನೈಋತ್ಯ ರೈಲ್ವೇ ಇಲಾಖೆ ಗದಗ(ತಳಕಲ್)-ವಾಡಿ ರೈಲು ಮಾರ್ಗ ಹಾಗೂ ರೈಲು ನಿಲ್ದಾಣ ನಿರ್ಮಿಸಲು ಉದ್ದೇಶಿಸಿದೆ. ರೈಲು ನಿಲ್ದಾಣಕ್ಕಾಗಿ ಅಗತ್ಯವಿರುವ ಜಮೀನು ವಶಪಡಿಸಿಕೊಂಡಿದ್ದು, ಇದರಲ್ಲಿ 35 ಮನೆಗಳು, ಅಂಗನವಾಡಿ, ಸರ್ಕಾರಿ ಶಾಲೆ ಸೇರಿದ್ದು ಈಗಾಗಲೇ ಮನೆ ಹಾಗೂ ನಿವೇಶನಕ್ಕೆ ಅಂದಾಜು ಮೌಲ್ಯಮಾಪನ ಮಾಡಿ ಭೂಸ್ವಾಧೀನ ಮಾಡಿಕೊಂಡು ಪರಿಹಾರ ನೀಡಿದೆ.

ಆದರೆ ಈ ಪರಿಹಾರದ ಹಂಚಿಕೆಯಲ್ಲಿ ತಾರತಮ್ಯ ಮಾಡಿದೆ ಎನ್ನುವುದು ಸ್ಥಳೀಯರ ವಾದ. ನಿವೇಶನ ಜಾಗೆಗೆ ಪ್ರತ್ಯೇಕವಾಗಿ 35 ನಿವಾಸಿಗಳಿಗೆ ತಲಾ 3ಲಕ್ಷ ರೂ. ನೀಡಿದೆ. ಇದರಲ್ಲಿ ತಾರತಮ್ಯ ಮಾಡಿಲ್ಲ. ಆದರೆ ಮನೆಗಳ ವಿಚಾರದಲ್ಲಿ ಬರೋಬ್ಬರಿ ತಾರತಮ್ಯ ಮಾಡಿದೆ. ಆರ್ ಸಿಸಿ ಮೇಲ್ಚಾವಣೆ ಮನೆಗಳಿಗೆ 6 ಮನೆಗಳಿಗೆ ತಲಾ 4.40ಲಕ್ಷ ರೂ. ನೀಡಲಾಗಿದೆ. ಅದೇ ಸಾಲಿನಲ್ಲಿ ಕಟ್ಟಡ ಗೋಡೆ ತಗಡಿನ ಮೇಲ್ಚಾವಣೆಗೂ ಅಷ್ಟೇ ಮೊತ್ತ ನೀಡಿದ್ದಾರೆ. ಸಂಪೂರ್ಣ ತಗಡಿನ 7 ಮನೆಗಳಿಗೆ ಬರೀ 1.80 ಲಕ್ಷರೂ ನೀಡಿದ್ದಾರೆ. ಇವುಗಳ ಪೈಕಿ ಭಾಗಶಃ ಜಾಗೆ ಸ್ವಾಧೀನಗೊಂಡ ಇಬ್ಬರಿಗೆ ತಲಾ 80 ಸಾವಿರ ರೂ. ಪರಿಹಾರ ಬಂದಿದೆ ಎನ್ನುತ್ತಾರೆ ಅಲೆಮಾರು ಬುಡಕಟ್ಟು ಸಮಾಜದ ಅಧ್ಯಕ್ಷ ಮಹಿಬೂಬಸಾಬ್ ಮದಾರಿ. ಈ ತಾರತಮ್ಯ ಪರಿಹಾರಕ್ಕಾಗಿ ಅಸಮಾಧಾನ ವ್ಯಕ್ತವಾಗಿರುವ ಬೆನ್ನಲ್ಲೇ ಸಂಬಂಧಿಸಿದ ರೈಲ್ವೇ ಅಧಿಕಾರಿಗಳನ್ನು ಹಾಗೂ ಭೂ ಸ್ವಾಧೀನ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದ್ದು ಯಾವೂದೇ ಸ್ಪಂಧನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹಾರಕ್ಕಾಗಿ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಕೊಪ್ಪಳ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ನಿರ್ಧರಿಸಿದ್ದು, ಸದರಿ ಸಮಸ್ಯೆಗಳಿಗೆ ಸ್ಪಂಧಿಸಿದರೆ ಸರಿ, ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಮಹಿಬೂಬ್ ಸಾಬ್ ಮದಾರಿ ತಿಳಿಸಿದ್ದಾರೆ.

ರೈಲು ನಿಲ್ದಾಣಕ್ಕೆ ಜಾಗೆ ನೀಡಿದ್ದು, ನಿವೇಶನ ಹಾಗೂ ಮನೆಗಳಿಗೆ ಪ್ರತ್ಯೇಕವಾಗಿ ಪರಿಹಾರ ನೀಡಿದ್ದರಿಂದ ಆ ಮೊತ್ತ ಅಡಚಣೆಗಳಿಗೆ ಬಳಸಿಕೊಂಡಿದ್ದೇವೆ. ಈಗ ಮನೆಯ ನಿವೇಶನ ಖರೀಧಿಸುವಷ್ಟು ಮೊತ್ತ ನಮ್ಮ ಬಳಿ ಉಳಿದಿಲ್ಲ. ಪರಿಹಾರ ವಿಷಯದಲ್ಲೂ ತಾರತಮ್ಯ ಮಾಡಿದ್ದು ಇದರಿಂದ ಕಂಗಾಲಾಗಿದ್ದೇವೆ.
-ಮಹಿಬೂಬಸಾಬ್ ಮದಾರಿ ಅಧ್ಯಕ್ಷ ಅಲೆಮಾರು ಬುಡಕಟ್ಟು ಸಮಾಜ ಕುಷ್ಟಗಿ

Advertisement

Udayavani is now on Telegram. Click here to join our channel and stay updated with the latest news.

Next