ಗದಗ: ಕೊರೊನಾ ನಿವಾರಣೆಗಾಗಿ ಕಳೆದ ನಾಲ್ಕೈದು ತಿಂಗಳಿಂದ ಸಾರ್ವಜನಿಕರಿಗೆ ಉಚಿತವಾಗಿ ಕಷಾಯ ವಿತರಣೆಯಲ್ಲಿ ತೊಡಗಿರುವ ಇಲ್ಲಿನ ರೈಲ್ವೇ ಸುರಕ್ಷಾ ದಳದ ಅಧಿಕಾರಿಗಳನ್ನು ಪತಂಜಲಿ ಯೋಗ ಸಮಿತಿ ಹಾಗೂ ಮುನ್ಸಿಪಲ್ ಪ್ರೌಢಶಾಲೆ ವಾಯುವಿಹಾರಿಗಳ ಪರಿವಾರದಿಂದ ಸನ್ಮಾನಿಸಲಾಯಿತು.
ರಾಷ್ಟ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎಸ್.ಎನ್. ಬಳ್ಳಾರಿ ಮಾತನಾಡಿ, ಮಾನವೀಯ ಸೇವೆಗಿಂತ ಮತ್ತೂಂದು ಸೇವೆ ಇಲ್ಲ. ಸಾರ್ವಜನಿಕರ ಸೇವೆಯಲ್ಲೇ ದೇವರನ್ನು ಕಾಣಬೇಕು. ಮನುಕುಲವನ್ನು ಕಾಡುತ್ತಿರುವ ಕೊರೊನಾ ಸೋಂಕಿನ ಸಂದರ್ಭದಲ್ಲಿ ಆಸ್ಪತ್ರೆಗಳು ಹಣ ಮಾಡುವಲ್ಲಿ ತೊಡಗಿವೆ. ಹಣದಾಸೆ ವೈದ್ಯರ ಲೋಪದಿಂದಾಗಿ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಏಪ್ರಿಲ್ ತಿಂಗಳಲ್ಲಿ ನಗರದ ರಂಗನವಾಡಿಯಲ್ಲಿ ಒಂದೇ ಪ್ರಕರಣ ಕಂಡುಬಂದಾಗ ಭಯದ ವಾತಾವರಣ ನಿರ್ಮಾಣಗೊಂಡಿತ್ತು. ಇಂದು ಮನೆ ಪಕ್ಕದಲ್ಲೇ ಸೋಂಕು ಕಂಡು ಬಂದರೂ, ಹೆದರುವ ಅಗತ್ಯವಿಲ್ಲ. ಕೊರೊನಾ ಸೋಂಕಿಗೆ ಸೂಕ್ತ ಔಷಧ ಲಭ್ಯವಿಲ್ಲದಿದ್ದರೂ, ಅಗತ್ಯ ಮುಂಜಾಗ್ರತೆ ವಹಿಸಿದರೆ ಸಾಕು. ಸೋಂಕಿನಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ ಎಂದು ಹೇಳಿದರು. ರೈಲ್ವೇ ಪೊಲೀಸ್ ಅ ಧಿಕಾರಿ ವಿ.ಎಚ್. ದಿವಾಕರ ಮಾತನಾಡಿ, ಕೊರೊನಾ ಮನುಷ್ಯನ ಜೀವಕ್ಕೆ ಅಪಾಯವಾಗಿದ್ದರೂ, ಮಾನವೀಯ ಸಂಬಂಧ, ಬಾಂಧವ್ಯಗಳನ್ನು ಬೆಸೆದಿದೆ. ದಿನವಿಡೀ ಮನೆಯಿಂದ ಹೊರಗೆ ಉಳಿಯುತ್ತಿದ್ದ ಜನರನ್ನು ಮನೆಯಲ್ಲೇ ಇರುವಂತೆ ಮಾಡಿದೆ. ಆದರೂ, ಕೊರೊನಾ ಸಂಕಷ್ಟದ ಕಾಲದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು. ಅದರಂತೆ ನಮ್ಮ ಇಲಾಖೆಯ ಮೇಲಾಧಿಕಾರಿಗಳಾದ ಹುಬ್ಬಳ್ಳಿ ಡಿಎಸ್‌ಸಿ ಟಿ.ಬಿ.ಥೋಕ್ಲಾ ಅವರ ಮಾರ್ಗದರ್ಶನದಲ್ಲಿ ಠಾಣೆಯ ಮುಂಭಾಗದಲ್ಲಿ ಪ್ರತಿನಿತ್ಯ 6ರಿಂದ 8 ಗಂಟೆವರೆಗೆ ಸುಮಾರು 100ಕ್ಕೂ ಹೆಚ್ಚು ಜನರಿಗೆ ದಿನಕ್ಕೊಂದರಂತೆ 35ಕ್ಕೂ ಹೆಚ್ಚು ಬಗೆಯ ಕಷಾಯ ವಿತರಿಸಿದ್ದೇವೆ. ಅದಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ಮಾತುಗಳು ಸರಕಾರ ನೀಡುವ ಪ್ರಶಸ್ತಿಗಳಿಂತ ದೊಡ್ಡದಾಗಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಆರ್‌ಪಿಎಫ್ ಅ ಧಿಕಾರಿಗಳ ವಿ.ಎಚ್. ದಿವಾಕರ ಹಾಗೂ ಸಿಬ್ಬಂದಿಗಳಾದ ಎ.ಎ. ಕಲಬುರಗಿ, ಸೋಮಪ್ಪ ಚವ್ಹಾಣ, ಎಸ್.ಆರ್. ಕಾಂಬ್ಳೆ, ಸಿ.ಬಿ. ರಾಘವೇಂದ್ರ, ಟಾಕಪ್ಪ ಲಮಾಣಿ, ಸೈಯದ್ ಸಾಬ್, ಎಂ.ಬಿ. ಮೊಕಾಶಿ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಭಾರತ ಸ್ವಾಭಿಮಾನಿ ಟ್ರಸ್ಟ್‌ನ ಜಿಲ್ಲಾ ಪ್ರಭಾರಿ ರುದ್ರಣ್ಣ ಗುಳಗುಳಿ ಅಧ್ಯಕ್ಷ ವಹಿಸಿದ್ದರು.