Advertisement

ರೈಲ್ವೆ ಸಿಬ್ಬಂದಿ ಅಚಾತುರ್ಯ; ಪ್ರಯಾಣಿಕರನ್ನು ಬಿಟ್ಟು ಹೋದ ಸಿಕಂದರಾಬಾದ್ ಎಕ್ಸ್‌ಪ್ರೆಸ್‌!

11:23 AM Jun 25, 2023 | Team Udayavani |

ಕಲಬುರಗಿ: ಇಲ್ಲಿನ ರೈಲು ನಿಲ್ದಾಣದ ಸಿಬ್ಬಂದಿಗಳ ಅಚಾತುರ್ಯದಿಂದಾಗಿ ಕಲಬುರಗಿಯಿಂದ ಹೈದರಾಬಾದಿಗೆ ತೆರಳಬೇಕಾಗಿದ್ದ ಹಲವಾರು ಪ್ರಯಾಣಿಕರು ರೈಲು ಸಿಗದೆ ಪರದಾಟ ಅನುಭವಿಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

Advertisement

ತೆಲಂಗಾಣದ ಸಿಕಂದರಾಬಾದ್ ಗೆ ತೆರಳಲು ಇಲ್ಲಿನ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ನೂರಾರು ಪ್ರಯಾಣಿಕರನ್ನು ಹುಬ್ಬಳ್ಳಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್‌ ರೈಲು ಬಿಟ್ಟು ಹೋಗಿದೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಸ್ಟೇಷನ್ ಮಾಸ್ತರ ಜತೆ ಜಗಳವಾಡಿ ಮತ್ತೊಂದು ರೈಲಿನಲ್ಲಿ ಕಳುಹಿಸಿ ಕೊಟ್ಟ ಬಳಿಕ ಪ್ರಕರಣ ಸುಖಾಂತ್ಯ ಕಂಡಿದೆ.

ಸಿಬ್ಬಂದಿ ಯಡವಟ್ಟು: ಹುಬ್ಬಳ್ಳಿಯಿಂದ ಶನಿವಾರ ರಾತ್ರಿ 9ಕ್ಕೆ ಹೊರಟಿದ್ದ ರೈಲು ಭಾನುವಾರ ‌ಬೆಳಿಗ್ಗೆ 6.15ಕ್ಕೆ ಕಲಬುರಗಿ ನಿಲ್ದಾಣಕ್ಕೆ ಬರಬೇಕಿತ್ತು. ರೈಲು ಬರಲಿದೆ ಎಂದು ಪ್ರಯಾಣಿಕರು ಪ್ಲಾಟ್ ಫಾರಂ ಸಂಖ್ಯೆ 1ರಲ್ಲಿ ಕಾಯುತ್ತಿದ್ದರು. ಆದರೆ ರೈಲು ನಿಲ್ದಾಣದ ಸಿಬ್ಬಂದಿ ರೈಲು ಯಾವ ಪ್ಲಾಟ್ ಫಾರ್ಮನಲ್ಲಿ ಬರುತ್ತದೆ ಎನ್ನುವ ಮಾಹಿತಿ ನೀಡಿರಲಿಲ್ಲ. ಹೈದರಾಬಾದಿಗೆ ಪ್ರಯಾಣಿಸುವ ಪ್ರಯಾಣಿಕರು ನಂ. 1ರಲ್ಲಿ ನಿಂತಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಬಂದ ರೈಲು ಮತ್ತೊಂದು ಪ್ಲಾಟ್ ಫಾರ್ಮನಲ್ಲಿ ನಿಂತು ತೆರಳಿದೆ. ಇದರಿಂದಾಗಿ ಮುಂಗಡ ಟಿಕೆಟ್ ಬುಕ್ ಮಾಡಿ ಕಾಯುತ್ತಿದ್ದ ನಿಂತಿದ್ದ ಪ್ರಯಾಣಿಕರಿಗೆ ನಿರಾಶೆ ಮತ್ತು ಸಿಟ್ಟು ಬಂದಿದೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ರೈಲ್ವೆ ಸ್ಟೇಷನ್ ಮ್ಯಾನೇಜರ್ ಕಚೇರಿಗೆ ತೆರಳಿ ವಾಗ್ವಾದ ನಡೆಸಿದರು.

ಇದನ್ನೂ ಓದಿ:ಮಣಿಪುರ: ಸಾವಿರಾರು ಮಹಿಳೆಯರಿಂದ ದಾಳಿ: 12 ಉಗ್ರರನ್ನು ಬಿಟ್ಟುಕಳುಹಿಸಿದ ಸೇನೆ

ಪ್ರಯಾಣಿಕ ರೆಹಮಾನ್ ಪಟೇಲ್ ಹೇಳುವಂತೆ, ರೈಲು 6.32ಕ್ಕೆ ಬರಲಿದೆ ಎಂದು ಫಲಕದಲ್ಲಿ ತೋರಿಸುತ್ತಿತ್ತು. ಆದರೆ, ಎಷ್ಟು ಹೊತ್ತಾದರೂ ಬರಲಿಲ್ಲ. ಆ ಮೇಲೆ ರೈಲ್ವೆ ‌ಸಿಬ್ಬಂದಿ ನಂತರ ಬಂದ ಹುಸೇನ್ ಸಾಗರ್ ರೈಲಿನ ಬಗ್ಗೆ ಮಾಹಿತಿ ಅನೌನ್ಸ್ ಮಾಡಿದ ಬಳಿಕವಷ್ಟೇ ನಮ್ಮ ರೈಲು ಹೋಗಿರುವುದು ಗೊತ್ತಾಯಿತು. ಸುಮಾರು 60ಕ್ಕೂ ಹೆಚ್ಚು ಜನ ಹುಬ್ಬಳ್ಳಿ-ಸಿಕಂದರಾಬಾದ್ ರೈಲಿನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು. ಸಕಾಲಕ್ಕೆ ಮೈಕ್ ನಲ್ಲಿ ಮಾಹಿತಿ ನೀಡದೇ ಇದ್ದುದರಿಂದ ಈ ಅಚಾತುರ್ಯ ಸಂಭವಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಈ ವಿಷಯ ಸ್ಟೇಷನ್ ಮಾಸ್ತರ್ ಪಿ.ಎ. ನರಗುಂದಕರ್,ಗೆ ತಿಳಿದಾಗ ವಿಷಾದ ವ್ಯಕ್ತಪಡಿಸಿ,  ಎಲ್ಲ ಪ್ರಯಾಣಿಕರನ್ನು ಹುಸೇನ್ ಸಾಗರ್ ರೈಲಿನಲ್ಲಿ  ಅಧಿಕಾರಿಗಳು ಕಳುಹಿಸಿಕೊಟ್ಟರು‌.

Advertisement

Udayavani is now on Telegram. Click here to join our channel and stay updated with the latest news.

Next