Advertisement

ರೈಲ್ವೆ ಯೋಜನೆ: ಭೂ ಸ್ವಾಧೀನಕ್ಕೆ ಆದ್ಯತೆ ನೀಡಿ: ಸಿಎಂ ಬೊಮ್ಮಾಯಿ

09:41 PM Nov 19, 2022 | Team Udayavani |

ಬೆಂಗಳೂರು: ರಾಜ್ಯದ ರೈಲ್ವೆ ಯೋಜನೆಗಳಿಗೆ ಅಗತ್ಯವಿರುವ ಭೂ ಸ್ವಾಧೀನಕ್ಕೆ ಮೊದಲ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಅತಿ ಹೆಚ್ಚು ಬೇಡಿಕೆಯ ಹಾಗೂ ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯವಿರುವ ಯೋಜನೆಗಳಿಗೆ ಆದ್ಯತೆ ಮೇರೆಗೆ ಭೂಸ್ವಾಧೀನ ಮಾಡುವಂತೆ ತಾಕೀತು ಮಾಡಿದ್ದಾರೆ.

ರಾಜ್ಯದಲ್ಲಿ ಕೇಂದ್ರ ಸರಕಾರದೊಂದಿಗೆ 50:50 ವೆಚ್ಚ ಹಂಚಿಕೆ ಆಧಾರದಲ್ಲಿ 9 ಹೊಸ ರೈಲು ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಶನಿವಾರ ಕೇಂದ್ರ ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಅವರೊಂದಿಗೆ ರಾಜ್ಯದ ಹಲವು ರೈಲ್ವೆ ಯೋಜನೆಗಳ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಯೋಜನೆಗಳ ತೊಡಕುಗಳ ನಿವಾರಣೆ ಸಂಬಂಧ ಜತೆಗೆ ನಿಗದಿತ ಅವಧಿಯಲ್ಲಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಿ ಉತ್ತಮ ಸಮನ್ವಯ ಸಾಧಿಸುವ ಉದ್ದೇಶದಿಂದ ಅಧಿಕಾರಿಗಳ ತಂಡ ರಚಿಸುವುದಾಗಿ ತಿಳಿಸಿದರು.

9 ಸಾವಿರ ಎಕರೆ ಭೂಸ್ವಾಧೀನ
ರಾಜ್ಯದ 9 ರೈಲ್ವೆ ಯೋಜನೆಗಳಿಗೆ ಒಟ್ಟು 15 ಸಾವಿರ ಎಕ್ರೆ ಭೂಮಿ ಅಗತ್ಯವಿದ್ದು, ಈವರೆಗೆ 9,000 ಎಕ್ರೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. 6,000 ಎಕ್ರೆ ಸ್ವಾಧೀನ ಮಾಡಿಕೊಡಬೇಕಾಗಿದೆ ಎಂದು ಮಾಹಿತಿ ನೀಡಿದರು.

ರೈಲ್ವೆ ಇಲಾಖೆ ಹಾಗೂ ರಾಜ್ಯ ಸರಕಾರಗಳು ರೈಲ್ವೆ ಯೋಜನೆಗಳಿಗೆ ಪರಸ್ಪರ ಪೂರಕವಾಗಿ ಅನುದಾನ ಬಿಡುಗಡೆ ಮಾಡಬೇಕು. ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡುವುದರಿಂದ ನಿಗದಿತ ಕಾಲಾವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯ ಎಂದು ಹೇಳಿದರು.

Advertisement

ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌ ಮಾತನಾಡಿ, ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನ ನಮ್ಮ ಆದ್ಯತೆಯಾಗಿದೆ. ಇದಕ್ಕಾಗಿ ಹೆಚ್ಚಿನ ಸಮನ್ವಯದೊಂದಿಗೆ ರಾಜ್ಯ ಸರಕಾರ ಹಾಗೂ ರೈಲ್ವೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರಕಾರ ಆದ್ಯತೆ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರು ಸಬರ್ಬನ್‌ ರೈಲು ಮಾರ್ಗ, ರೈಲು ಮಾರ್ಗಗಳ ವಿದ್ಯುದೀಕರಣ ಮೊದಲಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಜತೆಗೆ ಗದಗ  ವಾಡಿ, ರಾಯದುರ್ಗ- ತುಮಕೂರು, ಗಿಣಿಗೈರಾ- ರಾಯಚೂರು, ತುಮಕೂರು-ಚಿತ್ರದುರ್ಗ-ದಾವಣಗೆರೆ, ಬಾಗಲಕೋಟೆ- ಕುಡಚಿ, ಕಡೂರು-ಚಿಕ್ಕಮಗಳೂರು-ಬೇಲೂರು, ಹಾಸನ   ಬೇಲೂರು, ಶಿವಮೊಗ್ಗ ರಾಣೆಬೆನ್ನೂರು, ಮಾರಿಕುಪ್ಪಂ-ಕುಪ್ಪಂ, ಬೆಳಗಾವಿ-ಧಾರವಾಡ ಸಹಿತ ಹಲವು ಹೊಸ ರೈಲು ಮಾರ್ಗಗಳಿಗೆ ಸಂಬಂಧಿಸಿ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಕೇಂದ್ರ ಸಚಿವ ಸಚಿವ ಪ್ರಹ್ಲಾದ್‌ ಜೋಷಿ, ಸಂಸದ ಎಸ್‌. ಮುನಿಸ್ವಾಮಿ, ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಮಾರ್ಚ್‌ 2023ರಲ್ಲಿ ಹುಬ್ಬಳ್ಳಿ-ಬೆಂಗಳೂರು ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡುವ ಗುರಿ ಇದೆ. ಆ ಹಿನ್ನೆಲೆಯಲ್ಲಿ ಇದಕ್ಕೆ ಪೂರಕವಾಗಿ ರೈಲು ಮಾರ್ಗ ವಿದ್ಯುದೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಕೆಪಿಟಿಸಿಎಲ್‌ಗೆ ಸೂಚಿಸಲಾಗಿದೆ.
– ಬಸವರಾಜ ಬೊಮ್ಮಾಯಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next