ಒಡಿಶಾ: ಕೋವಿಡ್ ಸಮಯದಲ್ಲಿ ಅನೇಕರ ಬದುಕು ದುಸ್ಥಿತಿಗೆ ತಲುಪಿತ್ತು. ಸಾವಿರಾರು ಮಂದಿ ಇದ್ದ ಕೆಲಸವನ್ನು ಕಳೆದುಕೊಂಡು ಆರ್ಥಿಕವಾಗಿ ಕುಸಿದರು. ಒಡಿಶಾದ ಗಂಜಾಂ ಜಿಲ್ಲೆಯ 31 ವರ್ಷದ ಸಿ.ಎಚ್. ನಾಗೇಶು ಪಾತ್ರೋ ಅವರ ಜೀವನವೂ ಕೋವಿಡ್ ಸಮಯದಲ್ಲಿ ಇಂಥದ್ದೇ ಸ್ಥಿತಿಯಲ್ಲಿತ್ತು.
ನಾಗೇಶು ಕೆಲಸ ಕಳೆದುಕೊಂಡು ಕೋವಿಡ್ ಸಮಯದ ಲಾಕ್ ಡೌನ್ ನಲ್ಲಿ ಗ್ರಾಮದ ಬಡ ಮಕ್ಕಳಿಗೆ ಶಿಕ್ಷಣನ್ನು ಹೇಳುವ ಕಾಯಕವನ್ನು ಮಾಡುತ್ತಾರೆ. ಉಚಿತವಾಗಿ ಮಕ್ಕಳಿಗೆ ಟ್ಯೂಷನ್ ಕೊಡುತ್ತಾರೆ. ಪರಿಸ್ಥಿತಿ ನಿಧಾನವಾಗಿ ಸರಿಯಾಗುತ್ತಿದೆ ಎನ್ನುವಾಗಲೇ ಟ್ಯೂಷನ್ ತರಗತಿಯನ್ನು ಕೋಚಿಂಗ್ ಸೆಂಟರ್ ಆಗಿ ಮಾರ್ಪಡಿಸುತ್ತಾರೆ. ಕೋಚಿಂಗ್ ಸೆಂಟರ್ ನಲ್ಲಿ 8 -12 ತರಗತಿಯ ಮಕ್ಕಳಿಗೆ ಉಚಿತವಾಗಿ ಟ್ಯೂಷನ್ ಕೊಡಲು ಆರಂಭಿಸುತ್ತಾರೆ.
ನಾಗೇಶು ಅವರ ಟ್ಯೂಷನ್ ತರಗತಿಯಲ್ಲಿ ಹತ್ತಾರು ಮಕ್ಕಳಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪಾಠ ಹೇಳಲು ನಾಲ್ಕು ಶಿಕ್ಷಕರೂ ಇದ್ದಾರೆ. ಅವರಿಗೆ ತಿಂಗಳ ಸಂಬಳ ನೀಡಬೇಕು. ಅದಕ್ಕಾಗಿ ನಾಗೇಶು ಯಾರಿಂದಲೂ ಹಣ ಕೇಳುವುದಿಲ್ಲ. ಬೆಳಗ್ಗೆ ಕಾಲೇಜುವೊಂದರಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸಕ್ಕೆ ಹೋಗಿ ಸಂಜೆಯ ವೇಳೆಗೆ ಟ್ಯೂಷನ್ ಕೊಟ್ಟು ರಾತ್ರಿ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಲಂಗೇಜ್ ಗಳನ್ನು ಎತ್ತಿಕೊಂಡು ಹೋಗುವ ಕೂಲಿ ಕೆಲಸವನ್ನು ಮಾಡುತ್ತಾರೆ. ಇದರಿಂದ ಬಂದ ಹಣವನ್ನೇ ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡುತ್ತಿರುವ ಶಿಕ್ಷಕರಿಗೆ ಸಂಬಳವಾಗಿ ನೀಡುತ್ತಿದ್ದಾರೆ ನಾಗೇಶು.
ಇದನ್ನೂ ಓದಿ: 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ತೆರಳಿದ ವಿಮಾನ: ಬೆಂಗಳೂರು ಏರ್ಪೋರ್ಟ್ ನಲ್ಲಿ ಘಟನೆ
Related Articles
ಕುಟುಂಬದ ಬಡತನದಿಂದ 2006 ರಲ್ಲಿ ನಾಗೇಶು ತಮ್ಮ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸುತ್ತಾರೆ. ಆ ಬಳಿಕ ಸೂರತ್ ಗೆ ತೆರಳಿ ಅಲ್ಲಿ ಮಿಲ್ ವೊಂದರಲ್ಲಿ ಕೆಲಸ ಮಾಡುತ್ತಾರೆ. ಹೈದಾರಾಬಾದ್ ನ ಮಾಲ್ ವೊಂದರಲ್ಲಿ ಒಂದಷ್ಟು ತಿಂಗಳು ಕೆಲಸ ಮಾಡಿ, ಮತ್ತೆ ರೈಲ್ವೇ ನಿಲ್ದಾಣದಲ್ಲಿ ಕೂಲಿಯನ್ನು ಮಾಡುತ್ತಾ, 12 ವರ್ಷದ ಬಳಿಕ ಎಂಎ ಪದವಿಯನ್ನು ಕೂಲಿ ಕೆಲಸ ಮಾಡುತ್ತಲೇ ಮುಗಿಸುತ್ತಾರೆ.
ರಾತ್ರಿ ಕೂಲಿ ಮಾಡುತ್ತಾ, ಬೆಳಗ್ಗೆ ಶಿಕ್ಷಕನಾಗಿ ಕೆಲಸ ಮಾಡಿ, ಸಂಜೆ ಟ್ಯೂಷನ್ ಕೊಟ್ಟು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ನಾಗೇಶು ಅವರ ಕಥೆಯನ್ನು ಕೇಳಿ ನೆಟ್ಟಿಗರು ತಲೆಬಾಗಿ ನಮಸ್ಕರಿಸಿದ್ದಾರೆ.