Advertisement

ಆಕರ್ಷಣೀಯ ತಾಣವಾಗುತ್ತಿದೆ ರೈಲ್ವೆ ಮ್ಯೂಸಿಯಂ! ಗಮನ ಸೆಳೆವ 113 ವರ್ಷದ ಕಾಟೇಜ್‌ಗಳು

12:21 PM Dec 02, 2020 | sudhir |

ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆಯಲ್ಲಿರುವ ರೈಲ್ವೆ ಮ್ಯೂಸಿಯಂ ಉತ್ತರ ಕರ್ನಾಟಕದ ಪ್ರಮುಖ ಸ್ಥಳವಾಗುತ್ತಿದೆ. ದಿನ ಕಳೆದಂತೆ
ಇಲ್ಲಿಗೆ ಬರುತ್ತಿರುವವರ ಸಂಖ್ಯೆಯಲ್ಲೂ ತೀವ್ರ ಹೆಚ್ಚಳವಾಗುತ್ತಿದ್ದು, ಮೂರು ತಿಂಗಳಲ್ಲಿ 24,357 ಜನರು ಇಲ್ಲಿಗೆ ಭೇಟಿ ನೀಡಿದ್ದಾರೆ.

Advertisement

ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು 2019 ಆಗಸ್ಟ್‌ 9 ರಂದು ವಿಡಿಯೋ ಲಿಂಕ್‌ ಮೂಲಕ ರೈಲ್ವೆ ಮ್ಯೂಸಿಯಂಗೆ ಚಾಲನೆ ನೀಡಿದ್ದರು. ಕೋವಿಡ್‌ -19 ಹಿನ್ನೆಲೆಯಲ್ಲಿ ಸಾರ್ವಜನಿಕರ ಭೇಟಿ ಸೀಮಿತಗೊಳಿಸಿತ್ತು. ಹೀಗಾಗಿ ಮೊದಲ ತಿಂಗಳ ಕೊನೆಗೆ 2,683 ಜನರು ಭೇಟಿ ನೀಡಿದ್ದರು.

ನಿತ್ಯ ಸರಾಸರಿ 140-150 ಜನರು ಹಾಗೂ ವಾರದ ಕೊನೆಯಲ್ಲಿ 400 ಜನರು  ಮ್ಯೂಸಿಯಂಗೆ ಧಾವಿಸುತ್ತಿದ್ದಾರೆ. ದಿನದಿಂದ
ದಿನಕ್ಕೆ ಬರುವವರ ಪ್ರಮಾಣ ಹೆಚ್ಚಾಗುತ್ತಿದ್ದು, ನವೆಂಬರ್‌ ತಿಂಗಳಲ್ಲಿ 6,628 ಜನರು ಭೇಟಿ ನೀಡಿದ್ದಾರೆ. ಇಲ್ಲಿಯವರೆಗೆ 24,357 ಜನರು ಮ್ಯೂಸಿಯಂಗೆ ಆಗಮಿಸಿದ್ದಾರೆ. ಪುಟಾಣಿ ರೈಲಿನ ಪ್ರಯಾಣ ಹಾಗೂ ಆಟಿಕೆ ರೈಲಿನ ಚಾಲನೆಗೆ ಹೆಚ್ಚು ಒಲವು ತೋರುತ್ತಿದ್ದಾರೆ.

ಇದನ್ನೂ ಓದಿ:ಮುಂದುವರಿದ ರೈತರ ಪ್ರತಿಭಟನೆ-ಟ್ರಾಫಿಕ್ ಜಾಮ್: ದೆಹಲಿಯಲ್ಲಿ ತರಕಾರಿ, ಹಣ್ಣುಗಳ ಬೆಲೆ ಏರಿಕೆ

ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಹಾಗೂ ವಿಶೇಷ ರೈಲ್ವೆ ಮ್ಯೂಸಿಯಂ ಆಗಿರುವುದರಿಂದ ಜನರು ಹೆಚ್ಚು ಒಲವು
ತೋರುತ್ತಿದ್ದಾರೆ. ಹಿಂದೆ ರೈಲ್ವೆ ಇಲಾಖೆ ಬಳಸಿದ್ದ ರೈಲುಗಳು, ಸಾಮಗ್ರಿಗಳನ್ನು ಕಣ್ತುಂಬಿಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. 113 ವರ್ಷದ ಹಿಂದಿನ ಕಾಟೇಜ್‌ಗಳು ಪ್ರಮುಖ ಆಕರ್ಷಣೀಯವಾಗಿವೆ. ರೈಲ್ವೆ ಬೋಗಿಯಲ್ಲಿ ನಿರ್ಮಿಸಿರುವ ಥೇಟರ್‌, ಸುರಚಿ ಹೋಟೆಲ್‌ ಹೆಚ್ಚಿನವರ ಪ್ರಿಯವಾದ ಸ್ಥಳಗಳಾಗಿದ್ದು, ಕೋವಿಡ್‌-19 ಹಿನ್ನೆಲೆಯಲ್ಲಿ ಥೇಟರ್‌ ಹಾಗೂ
ಹೋಟೆಲ್‌ ಕಾರ್ಯ ಸ್ಥಗಿತಗೊಳಿಸಲಾಗಿದೆ.

Advertisement

ಮುನ್ನೆಚ್ಚರಿಕಾ ಕ್ರಮವಾಗಿ ಜನರು ಮಾಸ್ಕ್ ಕಡ್ಡಾಯವಾಗಿ ಧರಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕ್ರಮ
ಕೈಗೊಳ್ಳಲಾಗಿದೆ. ಮ್ಯೂಸಿಯಂ ಮಂಗಳವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 12:00 ರಿಂದ ಸಂಜೆ 7:00 ಗಂಟೆ, ಶನಿವಾರ ಹಾಗೂ ರವಿವಾರ ಮಧ್ಯಾಹ್ನ 12:00 ರಿಂದ ರಾತ್ರಿ 8:00 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತದೆ. ಸಾರ್ವತ್ರಿಕ ರಜೆ ಹಾಗೂ ಪ್ರತಿ ಸೋಮವಾರ ಬಂದ್‌ ಮಾಡಲಾಗುತ್ತದೆ. 5-12 ವರ್ಷದ ಮಕ್ಕಳಿಗೆ 10 ರೂ., ಹಿರಿಯರಿಗೆ 20 ರೂ. 5 ವರ್ಷದೊಳಗಿನ
ಮಕ್ಕಳಿಗೆ ಉಚಿತ ಪ್ರವೇಶವಿದೆ.

ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಸ್ಥಳ ಗುರುತಿಸಿ ಮ್ಯೂಸಿಯಂ ಸ್ಥಾಪನೆ ಮಾಡಲಾಗಿದ್ದು, ಇದೊಂದು ಪ್ರೇಕ್ಷಣಿಯ
ಸ್ಥಳವಾಗಿ ಮಾರ್ಪಾಡುತ್ತಿದೆ. ಶಾಲೆ ಕಾಲೇಜುಗಳು ಪುನರಾರಂಭ ಆಗುತ್ತಿದ್ದಂತೆ ಇಲ್ಲಿಗೆ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಇಲ್ಲಿಗೆ ಆಗಮಿಸುವ ಜನರಿಗೆ ಅರ್ಥವಾಗುವ ರೀತಿಯಲ್ಲಿ ಹಿಂದೆ ಬಳಸಿದ ವಸ್ತುಗಳನ್ನು ಜೋಡಿಸಲಾಗಿದ್ದು,
ಇದಕ್ಕೆ ಪೂರಕವಾಗಿ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ ಸಿಂಗ್‌ ಅಭಿಪ್ರಾಯ ಪಟ್ಟಿದ್ದಾರೆಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next