ನವದೆಹಲಿ: ದೇಶದಲ್ಲಿನ ಸರಣಿ ರೈಲು ಅಪಘಾತಗಳಿಂದ ಮನನೊಂದ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದು, ಅದಕ್ಕೆ ಪ್ರಧಾನಿಯವರು ಕೆಲವು ದಿನ ಕಾಯುವಂತೆ ತಿಳಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ರೈಲ್ವೆ ಅಪಘಾತದ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಸಚಿವ ಪ್ರಭು ಅವರು, ಈ ಆಕಸ್ಮಿಕ ರೈಲು ಅಪಘಾತಗಳಿಂದ ಜನರ ಸಾವು, ನೋವಿನಿಂದಾಗಿ ನಾನು ತುಂಬಾ ನೋವಿಗೊಳಗಾಗಿದ್ದೆ. ಇದಕ್ಕೆ ಕಾರಣ ನಾನು ಎಂಬ ಪಾಪಪ್ರಜ್ಞೆ ನನ್ನ ಕಾಡುತ್ತಿತ್ತು.
ಈ ಹಿನ್ನೆಲೆಯಲ್ಲಿ ನಾನು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ತಿಳಿಸಿದೆ. ಆದರೆ ಪ್ರಧಾನಿಯವರು ಸ್ವಲ್ಪ ಕಾಲ ಕಾಯುವಂತೆ ಹೇಳಿರುವುದಾಗಿ ಟ್ವೀಟ್ ನಲ್ಲಿ ಬಹಿರಂಗಪಡಿಸಿದ್ದಾರೆ.
ಕೇವಲ 5 ದಿನದೊಳಗೆ ಉತ್ತರಪ್ರದೇಶದಲ್ಲಿ ನಡೆದ 2 ರೈಲು ಹಳಿತಪ್ಪಿದ ಪ್ರಕರಣದ ನಂತರ ಸುರೇಶ್ ಪ್ರಭು ಅವರು ಈ ಟ್ವೀಟ್ ಮಾಡಿದ್ದಾರೆ.