ಹುಬ್ಬಳ್ಳಿ: ಪುಣೆ, ಮೀರಜ್, ಲೋಂಡಾ, ಹುಬ್ಬಳ್ಳಿ, ದಾವಣಗೆರೆ ಡಬ್ಲಿಂಗ್ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ. ಇದರಿಂದ ಕರ್ನಾಟಕ-ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಬ್ಲಿಂಗ್ ಕಾಮಗಾರಿಗಳನ್ನು ಪೂರ್ಣಗೊಳಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ.
2021ರೊಳಗೆ ಬಾಕಿಯಿರುವ ಡಬ್ಲಿಂಗ್ ಕಾಮಗಾರಿ ಪೂರ್ಣಗೊಳಿಸುವ ಗುರಿ ನೀಡಲಾಗಿದೆ ಎಂದರು. ಪ್ರಸ್ತುತ ಪ್ರತಿ ಗಂಟೆಗೆ 75ರಿಂದ 80 ಕಿ.ಮೀ.ವೇಗದಲ್ಲಿ ಸಂಚರಿಸುತ್ತಿರುವ ರೈಲುಗಳ ವೇಗವನ್ನು 110 ಕಿ.ಮೀ.ಗೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆರ್‌ಯುಬಿ-ಆರ್‌ಒಬಿಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರೈಲುಗಳ ವೇಗ ಹೆಚ್ಚಳದಿಂದ ಸಮಯ ಉಳಿತಾಯವಾಗಲಿದೆ ಎಂದರು.
ಬಂದರುಗಳಿಗೆ ರೈಲು ಸಂಪರ್ಕ ಒದಗಿಸುವುದು ಅಗತ್ಯವಾಗಿದ್ದು, ಇದರಿಂದ ರಫ್ತು-ಆಮದಿಗೆ ಅನುಕೂಲವಾಗುತ್ತದೆ. ಶಿವಮೊಗ್ಗದ ಕಾತಗಂಗೂರಿನಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಆರಂಭಿಸಲು ನಿರ್ಧರಿಸಲಾಗಿದೆ ಎಂದರು. ಬಯೋ ಟಾಯ್ಲೆಟ್‌ಗಳಿಂದ ರೈಲು ಪ್ರಯಾಣಿಕರಿಗೆ ಅನುಕೂಲವಾಗಿದ್ದು, ನೈಋತ್ಯ ರೈಲ್ವೆಯ ಎಲ್ಲ ರೈಲುಗಳಲ್ಲಿ ಬಯೋ ಟಾಯ್ಲೆಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ರೈಲು ನಿಲ್ದಾಣಗಳನ್ನು ಇನ್ನಷ್ಟು ಆಕರ್ಷಕಗೊಳಿಸಿ ಮಾದರಿ ನಿಲ್ದಾಣಗಳನ್ನಾಗಿ ರೂಪಿಸಲಾಗುವುದು.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕಿರುವ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ಅಬೆಂಗಳೂರಿಗೆ ಬರುವ ರೈಲುಗಳ ಸ್ವಚ್ಛತೆ ಹಾಗೂ ನಿರ್ವಹಣಾ ಘಟಕವನ್ನು ಬೈಯ್ಯಪ್ಪನಹಳ್ಳಿಗೆ ಸ್ಥಳಾಂತರಿಸಲಾಗುತ್ತಿದೆ. ಇದರಿಂದ ಬೆಂಗಳೂರು ನಿಲ್ದಾಣದಲ್ಲಿ ರೈಲುಗಳ ಸಂಚಾರ ಇನ್ನಷ್ಟು ಸುಗಮಗೊಳ್ಳಲಿದೆ. ರೈಲುಗಳು ಅನಗತ್ಯವಾಗಿ ನಿಲ್ಲುವುದು ತಪ್ಪುತ್ತದೆ ಎಂದು ಹೇಳಿದರು. ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಬೆಂಗಳೂರು ಕಚೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಲಾಗುವುದು ಎಂದರು.