Advertisement

ಅಂತೂ ಸಿಂಧನೂರಿಗೆ ಸಿಗಲಿದೆ ರೈಲು ದರ್ಶನ ಭಾಗ್ಯ

03:37 PM Nov 09, 2021 | Team Udayavani |

ಸಿಂಧನೂರು: ಸ್ವಾತಂತ್ರ್ಯ ನಂತರದಿಂದ ಈವರೆಗೂ ರೈಲು ಮುಖವನ್ನೇ ನೋಡದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಮುಂದಿನ ವರ್ಷ ಜೂನ್‌ ನಲ್ಲಿ ರೈಲು ನೋಡುವ ಮುನ್ಸೂಚನೆ ದಟ್ಟವಾಗಿದೆ.

Advertisement

ಮೆಹಬೂಬನಗರ- ಗಿಣಿಗೇರಾ ಮಾರ್ಗದ ರೈಲ್ವೆ ಯೋಜನೆ ವ್ಯಾಪ್ತಿಗೆ ಒಳಪಡುತ್ತಿರುವ ತಾಲೂಕಿನಲ್ಲಿ ನ.10ರಂದು ರೈಲ್ವೆ ಸ್ಟೇಷನ್‌ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮ ನಿಗದಿಯಾಗಿದೆ. ಈ ಮಾರ್ಗದಲ್ಲಿ ರೈಲ್ವೆ ಹಳಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗಿಣಿಗೇರಾದಿಂದ ಗಂಗಾವತಿಯವರೆಗೆ ಈಗಾಗಲೇ ರೈಲು ಸಂಚಾರ ಆರಂಭವಾಗಿದೆ. ಅದನ್ನು ಕಾರಟಗಿವರೆಗೂ ವಿಸ್ತರಿಸಿ ರೈಲು ಓಡಿಸುವುದಕ್ಕೆ ವಿಧ್ಯುಕ್ತ ಚಾಲನೆ ನೀಡಲು ಸಿದ್ಧತೆ ಆರಂಭವಾಗಿದೆ.

ಭೂಮಿಪೂಜೆ ಭಾಗ್ಯ

ಅಂದಾಜು 1,720 ಕೋಟಿ ರೂ. ವೆಚ್ಚದ 165 ಕಿ.ಮೀ ಉದ್ದದ ಗಿಣಿಗೇರಾ ಮೆಹಬೂಬನಗರ ರೈಲ್ವೆ ಮಾರ್ಗಕ್ಕಾಗಿ 2006ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿತ್ತು. ಆಮೆ ವೇಗದಲ್ಲಿ ಭೂಸ್ವಾಧೀನ ನಡೆದ ಹಿನ್ನೆಲೆಯಲ್ಲಿ ಸಿವಿಲ್‌ ಕೆಲಸಕ್ಕೂ ಹಿನ್ನಡೆಯಾಗಿತ್ತು. ಗಿಣಿಗೇರಾ ಮಾರ್ಗದಿಂದ ಹಾಗೂ ಕೊನೆ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದ ಕಡೆಗಳಲ್ಲಿ ರೈಲ್ವೆ ಹಳಿ, ಸೇತುವೆ, ಸ್ಟೇಷನ್‌ ನಿರ್ಮಾಣಕ್ಕೆ ಚಾಲನೆ ನೀಡಿದ್ದರಿಂದ ಕಾರಟಗಿವರೆಗೂ ರೈಲು ಓಡುವ ಅವಕಾಶ ದೊರಕಿದೆ. ಇದರೊಟ್ಟಿಗೆ ಸಿಂಧನೂರು ನಗರದ ಸಮೀಪದಲ್ಲೇ ರೈಲ್ವೆ ಸ್ಟೇಷನ್‌ ನಿರ್ಮಿಸಲು ನ.10ರಂದು ಭೂಮಿಪೂಜೆ ನೆರವೇರಿಸುವ ಕಾರ್ಯಕ್ರಮ ನಿಗದಿಯಾಗಿದೆ.

ಜೂ.22ಕ್ಕೆ ಸಿಂಧನೂರಿಗೂ ರೈಲು:

Advertisement

ಕಾರಟಗಿಯಿಂದ- ಸಿಂಧನೂರಿಗೂ ರೈಲು ವಿಸ್ತರಿಸುವ ಕುರಿತಂತೆ ಈಗಾಗಲೇ ಅಧಿಕಾರಿಗಳೊಂದಿಗೆ ಸಂಸದ ಸಂಗಣ್ಣ ಕರಡಿ ಚರ್ಚಿಸಿದ್ದಾರೆ. ದಾವಣಗೆರೆ ದಕ್ಷಿಣ ಪಶ್ಚಿಮ ರೈಲ್ವೆ ನಿರ್ಮಾಣ ವಿಭಾಗದ ಅಧಿಕಾರಿಗಳು ಈಗಾಗಲೇ ಜೂ.22ರ ವೇಳೆಗೆ ಸಿಂಧನೂರುವರೆಗೆ ರೈಲು ವಿಸ್ತರಿಸುವ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ರೈಲ್ವೆ ಮಾರ್ಗ ನಿರ್ಮಾಣ, ಸ್ಟೇಷನ್‌ ಮತ್ತು ಸೇತುವೆ ಕಾಮಗಾರಿಗಳ ಕಾಲಮಿತಿ ಆಧರಿಸಿ ಈ ಭರವಸೆ ವ್ಯಕ್ತಪಡಿಸಿದ್ದಾರೆ. ಲೆಕ್ಕಾಚಾರದಂತೆ ಕಾಮಗಾರಿ ವೇಗದಲ್ಲಿ ಸಾಗಿದರೆ, ಮುಂದಿನ ವರ್ಷ ಜೂನ್‌ನಲ್ಲೇ ಸಿಂಧನೂರು ತಾಲೂಕಿನ ಜನರಿಗೆ ಸ್ವಗ್ರಾಮದಿಂದಲೇ ರೈಲಿನಲ್ಲಿ ರಾಜಧಾನಿ ತಲುಪುವ ಕನಸು ನನಸಾಗಲಿದೆ.

ಇದನ್ನೂ ಓದಿ: ‘ಪದ್ಮಶ್ರೀ’ ಬಗ್ಗೆ ದಿಲ್ಲಿಯಿಂದ ಕರೆ ಬಂತು ಮಂಜಮ್ಮ ಪ್ರತಿಕ್ರಿಯೆ ಹೀಗಿತ್ತು !

ಬೆಳಗ್ಗೆ 11 ಗಂಟೆಗೆ ಗಂಗಾವತಿ- ಕಾರಟಗಿ ಮಾರ್ಗದಲ್ಲಿ ರೈಲು ಉದ್ಘಾಟನೆ, ಮಧ್ಯಾಹ್ನ 3 ಗಂಟೆಗೆ ಸಿಂಧನೂರಿನಲ್ಲಿ ರೈಲ್ವೆ ಸ್ಟೇಷನ್‌ ಕಾಮಗಾರಿ ಭೂಮಿಪೂಜೆ ನಿಗದಿಯಾಗಿದೆ. ಯಾವುದೇ ಹಣಕಾಸಿನ ಸಮಸ್ಯೆಯಿಲ್ಲ. ಜೂ.22ಕ್ಕೆ ಸಿಂಧನೂರುವರೆಗೂ ರೈಲು ಓಡಾಟ ಆರಂಭವಾಗಲಿದೆ. -ಮೋಹನ್‌ಕುಮಾರ್‌, ಎಇಇ, ದಕ್ಷಿಣ ಪಶ್ಚಿಮ ರೈಲ್ವೆ ನಿರ್ಮಾಣ ವಿಭಾಗ, ದಾವಣಗೆರೆ

ನಾಳೆ ಕಾರಟಗಿ-ಹುಬ್ಬಳ್ಳಿ ರೈಲಿಗೆ ಚಾಲನೆ ನೀಡಲಿದ್ದು, ಸಿಂಧನೂರು ಸ್ಟೇಷನ್‌ಗೂ ಭೂಮಿಪೂಜೆ ನಡೆಯಲಿದೆ. ಜೂನ್‌ನಲ್ಲಿ ಸಿಂಧನೂರವರೆಗೆ ರೈಲು ಬರಲಿದೆ. ನನ್ನ ಅವಧಿ ಮುಗಿಯುವುದರೊಳಗೆ ರಾಯಚೂರು ತನಕ ರೈಲು ಓಡಿಸುವ ಗುರಿ ಹೊಂದಲಾಗಿದೆ. ಮಹತ್ವದ ಯೋಜನೆ ಯಶಸ್ವಿಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಹಿಂದಿನ ಸಿಎಂ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಸಹಕಾರವೇ ಮುಖ್ಯ ಕಾರಣ. -ಸಂಗಣ್ಣ ಕರಡಿ, ಸಂಸದ, ಕೊಪ್ಪಳ

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next