ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ರೈಲ್ವೇ ವಿಕಾಸ್ ನಿಗಮ್ ಲಿಮಿಟೆಡ್ ಸಂಸ್ಥೆಯನ್ನು ಭಾರತೀಯ ರೈಲ್ವೇ ನಿರ್ಮಾಣ ಲಿಮಿಟೆಡ್ (ಐಆರ್‌ಸಿಒಎನ್) ಸಂಸ್ಥೆಯಲ್ಲಿ ಹಾಗೂ ರೈಲ್ ಟೆಲ್ ಸಂಸ್ಥೆಯನ್ನು ಇಂಡಿಯನ್ ರೈಲ್ವೇ ಕೆಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್‌ನಲ್ಲಿ (ಐಆರ್‌ಸಿಟಿಸಿ) ವಿಲೀನಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
ಜತೆಗೆ ಕೇಂದ್ರ ಸರಕಾರಿ ಸ್ವಾಮ್ಯದ ಬ್ರಾತ್‌ವೈಟ್ ಆ್ಯಂಡ್ ಕಂಪೆನಿ ಲಿ. ಸಂಸ್ಥೆಯನ್ನು ರೈಲ್ ಇಂಡಿಯಾ ಆ್ಯಂಡ್ ಎಕನಾಮಿಕ್ ಸರ್ವೀಸ್ (ರೈಟ್ಸ್) ಸಂಸ್ಥೆಯ ತೆಕ್ಕೆಗೆ ತರಲು ನಿರ್ಧರಿಸಲಾಗಿದೆ. ಈ ಎಲ್ಲ ನಿರ್ಧಾರಗಳನ್ನು ಶೀಘ್ರವೇ ಅನುಷ್ಠಾನಕ್ಕೆ ತರುವಂತೆ ರೈಲ್ವೇ ಇಲಾಖೆಗೆ ಕೇಂದ್ರ ಸರಕಾರದ ಪ್ರಧಾನ ಕಾರ್ಯದರ್ಶಿ ಕಚೇರಿಯಿಂದ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ರೈಲ್ವೇ ಇಲಾಖೆಯ ಆಡಳಿತ ಸರಳಗೊಳಿಸುವ ಉದ್ದೇಶದಿಂದ ಕೇಂದ್ರ ಹಣಕಾಸು ಇಲಾಖೆಯ ಮುಖ್ಯ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಅವರು ಕೇಂದ್ರ ಸರಕಾರಕ್ಕೆ ಮಾಡಿದ್ದ ಶಿಫಾರಸುಗಳನ್ವಯ ಸರಕಾರ ಈ ನಿರ್ಧಾರಕ್ಕೆ ಬಂದಿದೆ.
ಆಡಳಿತ ಸುಧಾರಣೆಗೆ ಕೇವಲ ಮೇಲ್ಕಂಡ ಸಾರ್ವಜನಿಕ ಸಂಸ್ಥೆಗಳ ವಿಲೀನವಷ್ಟೇ ಅಲ್ಲ, ಇನ್ನೂ ಹಲವಾರು ಸುಧಾರಣಾತ್ಮಕ ಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ರೈಲ್ವೇ ಇಲಾಖೆಯ ಸಿಬಂದಿಯ ಮಕ್ಕಳಿಗಾಗಿ ರೈಲ್ವೇ ಇಲಾಖೆ ನಡೆಸುತ್ತಿರುವ ದೇಶದ ಒಟ್ಟು 94 ಶಾಲೆಗಳನ್ನು ಕೇಂದ್ರೀಯ ವಿದ್ಯಾಲಯಗಳ ವ್ಯಾಪ್ತಿಗೆ ತರುವುದು, 125 ರೈಲ್ವೇ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಅವುಗಳ ಸೇವೆಯನ್ನು ಕೇವಲ ರೈಲ್ವೇ ಇಲಾಖೆ ಸಿಬಂದಿಗೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ಸಿಗುವಂತೆ ಮಾಡಲು ತೀರ್ಮಾನಿಸಲಾಗಿದೆ. ಅಗತ್ಯವಿರುವ ಕಡೆಗೆ, ಈ ಶಾಲೆಗಳನ್ನು ಹಾಗೂ ಆಸ್ಪತ್ರೆಗಳನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ.