ವಿಜಯಪುರ: ದೇಶಾದ್ಯಂತ ಶತಮಾನದಷ್ಟು ಹಳೆಯದಾದ ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆಗೆ ಪುನರುಜ್ಜೀವನ, ರೈಲ್ವೆ ಹಳಿಗಳ ನವೀಕರಣ, ಸಂಪೂರ್ಣ ಕಲ್ಲಿದ್ದಲು ಮುಕ್ತಗೊಳಿಸಿ ವಿದ್ಯುತ್ ಜಾಲ ವಿಸ್ತರಣೆ ಸೇರಿದಂತೆ ರೈಲ್ವೆ ಇಲಾಖೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪಿಯೂಸ್ ಗೋಯಲ್ ಹೇಳಿದರು.
ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಲ್ಲಿ ಸುಮಾರು 70 ಸಾವಿರ ಕಿಮೀ ರೈಲ್ವೆ ಜಾಲ ವಿದ್ಯುದ್ದೀಕರಣ ಮಾಡುವ ಅಗತ್ಯವಿದೆ. ಇದರಿಂದ 10,500 ಕೋಟಿ ರೂ. ಹಣ ಉಳಿತಾಯದ ಜೊತೆಗೆ ಕಲ್ಲಿದ್ದಲಿನಿಂದ ಉಂಟಾಗುತ್ತಿದ್ದ ಪರಿಸರ ಹಾನಿಗೂ ಕಡಿವಾಣ ಬೀಳಲಿದೆ ಎಂದರು.
ದೇಶದಲ್ಲಿ ಅಧಿಕ ಸಮಯ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ರೈಲ್ವೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳದ ಕಾರಣ ದೇಶಾದ್ಯಂತ ಇನ್ನೂ ಒಂದೇ ಮಾರ್ಗದ ವ್ಯವಸ್ಥೆ ಇದೆ. ಇದೀಗ ನಮ್ಮ ಸರ್ಕಾರ ಜೋಡು ಮಾರ್ಗ ನಿರ್ಮಾಣದ ಜೊತೆಗೆ ಹಾಲಿ ಮಾರ್ಗಗಳ ನವೀಕರಣಕ್ಕೆ ಯೋಜನೆ ರೂಪಿಸಿದೆ. ಮಾನವ ರಹಿತ ರೈಲ್ವೆ ಕ್ರಾಸಿಂಗ್ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ರೈಲ್ವೆ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಯೋಜಿಸಿದೆ ಎಂದರು.
ಇದಲ್ಲದೇ ಮುಂಬೈ-ಅಹದಾಬಾದ್ ಮಧ್ಯೆ ಬುಲೆಟ್ ಟ್ರೇನ್ ಮಾರ್ಗ ನಿರ್ಮಿಸಲು ಈಗಾಗಲೇ ಯೋಜನೆ ಅನುಷ್ಠಾನಗೊಳಿಸಿದೆ. ಇದಕ್ಕಾಗಿ ಜಪಾನ್ ದೇಶದೊಂದಿಗೆ ಯೋಜನೆ ರೂಪಿಸಿದ್ದು, ಶೂನ್ಯ ಬಡ್ಡಿ ದರದ ಹಾಗೂ 15 ವರ್ಷಗಳ ಬಳಿಕ ಮರುಪಾವತಿ ಇದೆ. ಸದರಿ ಯೋಜನೆ ಪೂರ್ಣಗೊಳ್ಳುತ್ತಲೇ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲು ಬುಲೆಟ್ ಟ್ರೇನ್ ಸೌಲಭ್ಯ ಕಲ್ಪಿಸಲಾಗುತ್ತದೆ.
ಸಮಯದ ಉಳಿತಾಯ ಇಂದಿನ ಅಗತ್ಯವಾಗಿರುವ ಕಾರಣ ಬುಲೆಟ್ ಟ್ರೇನ್ ಪ್ರಯಾಣ ವೆಚ್ಚ ಹೆಚ್ಚಳ ಎಂಬ ವಾದ ಸರಿಯಲ್ಲ. ಭಾರತದ ಪಶ್ಚಿಮ ರಾಜ್ಯಗಳಿಗೆ ಸಂಪರ್ಕ ನೇರ ಕಲ್ಪಿಸಲು ವಿಜಯಪುರ ಮಾರ್ಗವಾಗಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ ರಾಜ್ಯಗಳ ರೈಲು ಸಂಪರ್ಕಕ್ಕಾಗಿ ಹಮ್ ಸಫರ್ ರೈಲು ಸಂಚಾರ ಆರಂಭಿಸಲು ನಮ್ಮ ಸರ್ಕಾರ ನಿರ್ಧರಿಸಲಾಗಿದೆ. ಈ ರೈಲು ಸಂಚಾರದ ಬಗ್ಗೆ ಅಗತ್ಯವಾದ ಆಡಳಿತಾತ್ಮಕ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಫೆ.19ರಂದು ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಲ್ಲಿ 1 ಲಕ್ಷ ಹುದ್ದೆಗಳ ನೇಮಕ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ. ಇದಲ್ಲದೇ ರೈಲ್ವೆ ಇಲಾಖೆ ಆಧುನೀಕರಣ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆ ಅಗತ್ಯಕ್ಕೆ ತಕ್ಕಂತೆ ಹುದ್ದೆಗಳ ನೇಮಕದ ಕುರಿತು ಸಮೀಕ್ಷೆ ನಡೆಸಿ ಶೀಘ್ರವೇ ಸಿಬ್ಬಂದಿ ಕೊರತೆ ನೀಗುವ ಕೆಲಸ ಮಾಡಲಾಗುತ್ತದೆ ಎಂದರು.