Advertisement
ತಾಲೂಕಿನ ಬಹುನಿರೀಕ್ಷಿತ ಬೇಡಿಕೆಯಾಗಿರುವ ಈ ಯೋಜನೆ ಕಳೆದ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಆಗೊಮ್ಮೆ ಈಗೊಮ್ಮೆ ಚರ್ಚಾ ವಸ್ತುವಾಗುತ್ತಿರುವುದು ಬಿಟ್ಟಲ್ಲಿ ಉಳಿದಂತೆ ಕರಾವಳಿ ಭಾಗದ ಜನಪ್ರತಿನಿಧಿಗಳು ಅನುಷ್ಠಾನಕ್ಕೆ ಸಂಬಂಧಿಸಿ ತೋರಿದ ಆಸಕ್ತಿ ಗೌಣ ಎನ್ನುವುದು ಸ್ಪಷ್ಟವಾಗುತ್ತಿದೆ.
ದ.ಕ. ಜಿಲ್ಲೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಜಿಲ್ಲೆಯ ರೈಲ್ವೇ ಅಭಿವೃದ್ಧಿಗೆ ಸಂಬಂಧಿಸಿ ಜೂ. 27ರಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಮತ್ತು ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಮನವಿ ಸಲ್ಲಿಸಿದ್ದರು. ಇದರಲ್ಲಿ ಅನೆೇಕ ಯೋಜನೆಗಳ ಪ್ರಸ್ತಾವವಿದ್ದರೂ, ಬಹುಬೇಡಿಕೆ ಆಗಿರುವ ಕಾಣಿ ಯೂರು-ಕಾಂಞಂಗಾಡು ಹಳಿ ನಿರ್ಮಾಣದ ಬಗ್ಗೆ ಪ್ರಸ್ತಾವಿಸಿಲ್ಲ. ಇದು ಕಾಣಿಯೂರು- ಕಾಂಞಂಗಾಡು ರೈಲ್ವೇ ಕ್ರಿಯಾ ಯೋಜನೆ ಸಮಿತಿ ಪದಾಧಿಕಾರಿಗಳಿಗೆ ನಿರಾಸೆ ಮೂಡಿಸಿದೆ. ಯೋಜನೆ ಕಡೆಗಣಿಸಲಾಗುತ್ತಿದೆ ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. 91 ಕಿ.ಮೀ. ಉದ್ದ
ಕಾಂಞಂಗಾಡ್ – ಪಾಣತ್ತೂರುವರೆಗೆ 41 ಕಿ.ಮೀ. ಮತ್ತು ಪಾಣತ್ತೂರಿನಿಂದ ಕಾಣಿಯೂರಿಗೆ 50 ಕಿ.ಮೀ. ಒಟ್ಟು 91 ಕಿ.ಮೀ. ಉದ್ದದ ಹಳಿ ನಿರ್ಮಾಣದ ಅಗತ್ಯ ವಿದೆ. ಕಾಂಞಂಗಾಡ್ – ಕೊಟ್ಟೋಡಿ – ಬಳಾಂತೋಡ್ – ಪಾಣತ್ತೂರು – ಕಲ್ಲಪಳ್ಳಿ, ಆಲೆಟ್ಟಿ, ಸುಳ್ಯ ಮೂಲಕ ಕಾಣಿಯೂರು ಬಳಿ ಮಂಗಳೂರು – ಬೆಂಗಳೂರು ರೈಲ್ವೇ ಮಾರ್ಗ ಸಂದಿಸುವ ಯೋಜನೆ ಇದಾಗಿದೆ.
Related Articles
2006-07ರಲ್ಲಿ ಈ ಮಾರ್ಗ ನಿರ್ಮಾಣದ ಕನಸು ಗರಿಗೆದರಿತ್ತು. ಬಳಿಕ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. 2008-09ರ ರೈಲ್ವೇ ಬಜೆಟ್‌ನಲ್ಲಿ ಅಂದಿನ ಸಚಿವ ಲಾಲೂ ಪ್ರಸಾದ್ ಯಾದವ್ ಹಳಿ ಸರ್ವೆಗೆ ಅನುದಾನ ಕಾದಿರಿಸಿದ್ದರು. ಅದರನ್ವಯ ಕಾಞಂಗಾಡ್‌ನಿಂದ ಪಾಣತ್ತೂರುವರೆಗೆ 41 ಕಿ.ಮೀ. ಸಮೀಕ್ಷೆ ನಡೆಯಿತು. 2010-11ರ ಬಜೆಟ್‌ನಲ್ಲಿ ಎರಡನೇ ಹಂತದಲ್ಲಿ ಪಾಣತ್ತೂರಿನಿಂದ ಕಾಣಿಯೂರು ತನಕ 50 ಕಿ.ಮೀ. ಸರ್ವೆಗೆ ಅನುದಾನ ಮೀಸಲಿರಿಸಿದರೂ ಬಳಕೆಗೆ ಸಿಗಲಿಲ್ಲ. 2103-14ನೇ ಸಾಲಿನ ರೈಲ್ವೇ ಬಜೆಟ್‌ನಲ್ಲಿ ಸಚಿವ ಡಿ.ವಿ. ಸದಾನಂದ ಗೌಡ ಅವರು ಕಾಞಂಗಾಡ್-ಕಾಣಿಯೂರು ಪೂರ್ಣ ಸರ್ವೆ ನಡೆಸಲು ಅನುದಾನ ಮೀಸಲಿರಿಸಿದರು. ಅದರಂತೆ 2015ರ ಮಾರ್ಚ್‌ನಲ್ಲಿ ಯೋಜನೆಯ ಸಮೀಕ್ಷೆ ಪೂರ್ತಿ ಮಾಡಿ ವರದಿ ಸಲ್ಲಿಸಲಾಗಿದೆ. ವಿವಿಧ ಕಾರಣಗಳಿಂದ ಆ ಕೆಲಸವೂ ನಿರೀಕ್ಷಿತ ಮಟ್ಟದಲ್ಲಿ ಸಾಗಿಲ್ಲ.
Advertisement
ಅನುದಾನದ ಅಗತ್ಯವಿದೆಕಳೆದ ಜುಲೈನಲ್ಲಿ ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನಾ ಕ್ರಿಯಾ ಸಮಿತಿ ಕೇರಳ ಮುಖ್ಯಮಂತ್ರಿ ಮತ್ತು ಸಚಿವರನ್ನು ಭೇಟಿ ಮಾಡಿ ಅನುದಾನ ನೀಡುವಂತೆ ಒತ್ತಾಯಿಸಿದ ಪರಿಣಾಮ ಕೇರಳ ಸರಕಾರ ಅನುದಾನ ನೀಡಲು ಒಪ್ಪಿಗೆ ನೀಡಿತ್ತು. ಕರ್ನಾಟಕ ಸರಕಾರ ಅನುದಾನ ಕಾದಿರಿಸುವ ಪ್ರಕ್ರಿಯೆಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಕ್ರಿಯಾ ಸಮಿತಿ ವತಿಯಿಂದ ಕೇರಳ ಮತ್ತು ಕರ್ನಾಟಕ ಭಾಗದ ಹೋರಾಟ ಸಮಿತಿ ಮುಖಂಡರು ಮತ್ತು ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ನಡೆದು, ಅದರ ಪ್ರಕಾರ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ನೀಡಿ ಮನವಿ ಸಲ್ಲಿಸಲಾಗಿದೆ. ನಿರಾಸೆಯಾಗಿದೆ; ಗಮನಕ್ಕೆ ತಂದಿದ್ದೇವೆ
ರೈಲ್ವೇ ಸಚಿವರಿಗೆ ಸಲ್ಲಿಸಲಾದ ಪಟ್ಟಿಯಲ್ಲಿ ಕಾಂಞಂಗಾಡು -ಕಾಣಿಯೂರು ರೈಲು ಹಳಿ ನಿರ್ಮಾಣ ಪ್ರಸ್ತಾವಿಸಲಾಗದೆ ಇರುವುದು ನಮಗೆ ನಿರಾಶೆ ತಂದಿದೆ. ಇದು ಮಹತ್ವದ ಬೇಡಿಕೆ. ಪಟ್ಟಿಯಲ್ಲಿ ಇಲ್ಲದಿರುವ ಬಗ್ಗೆ ಸಂದೇಶದ ಮೂಲಕ ಸಂಸದರ ಗಮನಕ್ಕೆ ತರಲಾಗಿದೆ. ಅವರಿಂದ ಸ್ಪಂದನೆ ಬರಬೇಕಷ್ಟೆ. ಈ ವಿಚಾರವನ್ನು ಡಿ.ವಿ. ಸದಾನಂದ ಗೌಡ ಅವರ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ಪರಿಶೀಲಿಸುವ ಭರವಸೆಯನ್ನು ಅವರು ನೀಡಿದ್ದಾರೆ. – ಸುಧಾಕರ ರೈ, ಪ್ರ. ಕಾರ್ಯದರ್ಶಿ, ಕಾಂಞಂಗಾಡ್-ಕಾಣಿಯೂರು ರೈಲ್ವೇ ಯೋಜನಾ ಕ್ರಿಯಾ ಸಮಿತಿ