Advertisement

ರೈಲ್‌ ಸ್ಕೂಲ್‌

06:05 AM Dec 22, 2018 | |

ಸರ್ಕಾರಿ ಶಾಲೆ ಅಂದರೆ ಹೀಗೂ ಇರುತ್ತಾ ಅನ್ನೋ ರೀತಿಯಲ್ಲಿದೆ ಬನಹಟ್ಟಿಯ ಈ ಕೆಎಚ್‌ಡಿಸಿ ಕಾಲೋನಿ ಶಾಲೆ. ಅದರ ಮುಂದೆ ನಿಂತರೆ ಯಾವುದೋ ರೈಲ್ವೇ ಫ್ಲಾಟ್‌ಫಾರಂನಲ್ಲಿ ನಿಂತಂತೆ ಭಾಸವಾಗುತ್ತದೆ. ಕ್ಲಾಸ್‌ ರೂಂ, ಗೋಡೆ, ಬಾಗಿಲು, ಕಿಟಕಿ ಎಲ್ಲವೂ ಥೇಟ್‌ ರೈಲಿನಂತೆಯೇ ಕಂಗೊಳಿಸುತ್ತಿದೆ. ಒಟ್ಟಾರೆ, ಬಾಗಲಕೋಟೆಯ ಶಾಲೆಗೆ ಒಂದು ರೈಲು ಬಂದಿದೆ. 

Advertisement

 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮೆಟ್ರೋ ರೈಲು ನೋಡುವುದೇ ಕನಸಿನ ಮಾತು. ಅಂಥದ್ದರಲ್ಲಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಕೆ.ಎಚ್‌.ಡಿ.ಸಿ ಕಾಲೋನಿಯಲ್ಲಿರುವ ಸರಕಾರಿ ಕನ್ನಡ ಶಾಲೆಗೇ ಒಂದು ವಿಶೇಷ ರೈಲು ಬಂದು ನಿಂತಿದೆ !

 ಹೌದು, ಶಾಲೆಯ ಮುಂದೆ ನಿಂತರೆ ರೈಲ್ವೇ ಪ್ಲಾಟ್‌ಫಾರಂನಲ್ಲಿ ನಿಂತಂತೆಯೇ ಆಗುತ್ತದೆ. ಬೋಗಿ, ಕಿಟಕಿಗಳೆಲ್ಲಾ ಥೇಟ್‌ ಅಂತವೇ. ಶಾಲೆಯ ದ್ವಾರಗಳೂ ಕೂಡ ರೈಲ್ವೇ ಬಾಗಿಲಂತೆಯೇ ಗೋಚರವಾಗುತ್ತದೆ. ಕಾರ್ಯಾಲಯ ನಿಲ್ದಾಣ, ಸಭಾಂಗಣ ನಿಲ್ದಾಣ-ಈ ರೀತಿಯ ಹೆಸರುಗಳು ಬೇರೆ.  ಸಧ್ಯ ಮೆಟ್ರೋ ಬಣ್ಣ ಬಳಿದುಕೊಂಡು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಈ ಶಾಲೆ ಯಶಸ್ವಿಯಾಗಿದೆ.  ಖಾಸಗಿ ಶಾಲೆಗಳ ಆರ್ಭಟದ ಮಧ್ಯೆ ಸರಕಾರಿ ಶಾಲೆಗಳು ಕಳೆಗುಂದುತ್ತಿವೆ ಎಂಬ ಮಾತು ನಾಡಿನುದ್ದಕ್ಕೂ ಕೇಳಿಬರುವಾಗಲೇ ಈ  ಸರ್ಕಾರಿ ಶಾಲೆ ಮಾತ್ರ ಎಲ್ಲ ವಿಭಾಗಗಳಲ್ಲಿಯೂ ಖಾಸಗಿ ಶಾಲೆಗಳಿಗೆ ಸವಾಲಾಗಿ ನಿಂತಿದೆ. 

ಬೋಗಿ ಕ್ಲಾಸ್‌ರೂಂ
ಶಾಲೆಯ ಗೋಡೆಯ ಮೇಲೆ ರೈಲಿಗೆ ಸಂಬಂದಪಟ್ಟ ಅಲ್ಲಲ್ಲಿ ಕಾಣುವ ಬರಹಗಳು ಆಕರ್ಷಣೀಯವಾಗಿವೆ. ಮಕ್ಕಳು, ಬೆಳಗ್ಗೆ ಶಾಲೆ ಆರಂಭದ ಗಂಟೆ ಬಾರಿಸುವುದೇ ತಡ, ಥಟ್‌ ಅಂತ ಮೆಟ್ರೋ ರೈಲಿನ ಎದುರು ಓಡಿ ಬಂದು ಪ್ರಾರ್ಥನೆಗೆ ನಿಲ್ಲುತ್ತಾರೆ. ಅದು ಮುಗಿದ ತಕ್ಷಣ ಮೆಟ್ರೋ ರೈಲನ್ನು ಹತ್ತಲು ಮಕ್ಕಳು ಸರದಿಯಲ್ಲಿ ಸಜ್ಜಾಗಿ ನಿಂತು ಬಿಡುತ್ತಾರೆ. ಶಾಲೆಗೆ ಕಾಲಿಡುವುದೂ, ರೈಲ್ವೇ ಬೋಗಿ ಹತ್ತುವುದು ಎರಡೂ ಒಂದೇ ರೀತಿಯ ಫೀಲಾಗುತ್ತದೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಶಾಲೆಗೆ ಬರುವುದು ಅಂದರೆ ಖುಷಿಯೋ ಖುಷಿ. 

Advertisement

ಶಾಲೆಯ ನಿತ್ಯ ಪ್ರಾರ್ಥನೆ ವೇಳೆಯಲ್ಲಿ ಪಂಚಾಂಗ ಪಠಣ ನಡೆಯುತ್ತದೆ. ಜೊತೆಗೆ, ಪ್ರಚಲಿತ ವಿದ್ಯಮಾನಗಳ ಹಾಗೂ ರಸಪ್ರಶ್ನೆಯಂಥ ಕಾರ್ಯಕ್ರಮಗಳನ್ನು ನಡೆಸಿ, ವಿಜೇತ ಮಕ್ಕಳಿಗೆ ಪೊÅàತ್ಸಾಹಿಸುವ ಕಾರ್ಯ ನಡೆಯುತ್ತದೆ.  ಇದರಿಂದ ಮಕ್ಕಳಿಗೆ ಪ್ರಾರ್ಥನೆಯ ವೇಳೆಯಲ್ಲಿ ಅನೇಕ ಮಾಹಿತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಜ್ಞಾನದ ಕಣಜಗಳಾದ ಗಣಕಯಂತ್ರ, ಗ್ರಂಥಾಲಯ, ಕ್ರೀಡಾ ಕೋಣೆಗಳೂ ವ್ಯವಸ್ಥಿತವಾಗಿದ್ದು, ವಿದ್ಯಾರ್ಥಿಗಳು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.   ಪ್ರಸ್ತುತ ಈ ಶಾಲೆಯಲ್ಲಿರುವ  ಶಿಕ್ಷಕರುಗಳಾದ  ಮುಖ್ಯ ಗುರು ಬಿ.ಎಂ.ಪಾಟೀಲ, ಸಹ ಶಿಕ್ಷಕಿಯರಾದ ಬಿ. ವಿ. ತೆಗ್ಗಿ, ಎಸ್‌.ಬಿ.ಗೋಲಭಾವಿ, ಎಸ್‌.ಪಿ.ಮಿರ್ಜಿ, ಎಚ್‌.ಜಿ.ಜೀರಂಕಲಗಿ, ಗೀತಾ ಎಸ್‌,  ಶಿಕ್ಷಕ ಪಿ.ವಾಯ್‌.ಕರಡಿ ಇದ್ದಾರೆ. 

ಹಸಿರ ಸಿರಿ 
 ಶಾಲೆಯ ಆವರಣದಲ್ಲಿ ಇನ್ನೂರಕ್ಕೂ ಹೆಚ್ಚು ಗಿಡ-ಮರಗಳು ಇವೆ. ಮಕ್ಕಳು ಇಲ್ಲಿನ ಮರಗಳ ನೆರಳಲ್ಲಿ ಆಟ ವಾಡುತ್ತಾರೆ, ಊಟ ಮಾಡುತ್ತಾರೆ. ಶಾಲೆಯ ಆವರಣದಲ್ಲಿ ಬೆಳೆದ ತರಕಾರಿಯನ್ನು ಬಿಸಿ ಊಟಕ್ಕೆ ಬಳಸುತ್ತಾರೆ.  ಇಲ್ಲಿ ಬೆಳೆದ ಗಿಡಗಳನ್ನು ಬಳಸಿ ಕಸಬರಗಿಯನ್ನು ತಯಾರಿಸುತ್ತಾರೆ.  ಅದನ್ನು ಶಾಲಾ ಆವರಣದಲ್ಲಿನ ಕಸ ಗೂಡಿಸಲು ಬಳಸುತ್ತಾರೆ. 

ಶಾಲೆ ಗೋಡೆಗೆ ಮೆಟ್ರೋ ರೈಲಿನಂತೆ ಬಣ್ಣ ಬಳಿದಿರುವುದರಿಂದ ಮಕ್ಕಳನ್ನು  ಆಕರ್ಷಿಸಲು ಸಾಧ್ಯವಾಗಿದೆ. ಸೌಂದರ್ಯವಷ್ಟೇ ಮುಖ್ಯವಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಡೆಯೂ ನಾವು ಗಮನ ಕೊಟ್ಟಿದ್ದೇವೆ  ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಬಿ. ಮೋರಟಗಿ.

ಬನಹಟ್ಟಿಯ ನಾಗರಿಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರ ಸಹಕಾರದಿಂದ ಇಂದು ಈ ಶಾಲೆ ಎಲ್ಲ ಶಾಲೆಗಳಿಂತ ವಿಭಿನ್ನವಾಗಿ  ಗುರುತಿಸಿಕೊಂಡಿದೆ. ಈ ಶಾಲೆಗೆ 2003 ರಲ್ಲಿ ವರ್ಗ ಬೋಧನಾ ಪ್ರಶಸ್ತಿ, 2005 ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಶಸ್ತಿ ಮತ್ತು  ಕಲಿಕಾ ಖಾತ್ರಿ ಶಾಲೆ, 2007 ರಲ್ಲಿ ಶಾಲಾ ಗುಣಮಟ್ಟ ಪ್ರಶಸ್ತಿ, 2016 ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ , 2017 ರಲ್ಲಿ ಪರಿಸರ ಮಿತ್ರ ಹಳದಿ ಶಾಲೆ ಪ್ರಶಸ್ತಿಗಳು ಲಭಿಸಿವೆ. 

 ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next