“ಕೊಡಗು ಮತ್ತು ಕಾವೇರಿ ನದಿಯನ್ನು ಉಳಿಸಿ’ ಎಂಬ ಹೆಸರಿನಲ್ಲಿ ಕೊಡಗಿಗೆ ರೈಲು ಬರುವುದು ಬೇಡ ಎಂಬ ಕೂಗು ಜಿಲ್ಲೆಯಾದ್ಯಂತ ಎದ್ದಿದೆ. ಭಾರಿ ವಿರೋಧದ ನಡುವೆಯೂ ಕೊಡಗು ಜಿಲ್ಲೆ ಮೂಲಕ ಸಾಗುವ ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ಕೇಂದ್ರ ಸರಕಾರದಿಂದ ತಾತ್ವಿಕ ಅನುಮೋದನೆ ಸಿಕ್ಕಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸುಮಾರು 5,052 ಕೋಟಿ ರೂ. ವೆಚ್ಚದ ಈ ರೈಲು ಮಾರ್ಗದ ಯೋಜನೆಗೆ ಕೇರಳ ರೈಲ್ವೇ ಅಭಿವೃದ್ಧಿ ನಿಗಮ ಸಿದ್ಧ ಪಡಿಸಿರುವ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರಕಾರ ಕೆಲವೇ ದಿನಗಳ ಹಿಂದಷ್ಟೆ ಹಸಿರು ನಿಶಾನೆ ತೋರಿದೆ. ಇದು ಕೊಡಗು ಭಾಗದ ಪರಿಸರ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. ನಮ್ಮ ಜಿಲ್ಲೆಗೆ ಯಾವ ರೀತಿಯಲ್ಲೂ ಉಪಯೋಗವಾಗದ ಹಾಗೂ ಅನುಕೂಲಕ್ಕಿಂತ ಅನನುಕೂಲವನ್ನೆ ಸೃಷ್ಟಿಸುವ ಈ ಯೋಜನೆ ಜಿಲ್ಲೆಗೆ ಅಗತ್ಯವಿಲ್ಲ. ಅಲ್ಲದೇ, ನಮ್ಮ ಜಿಲ್ಲೆಯವರಿಗಿಂತ ಹೆಚ್ಚಾಗಿ ಈ ಯೋಜನೆ ಕೇರಳಕ್ಕೆ ಅನುಕೂಲ ಮಾಡಿಕೊಡುತ್ತದೆ.
2 ವರ್ಷಗಳ ಹಿಂದೆ ಮೈಸೂರಿನಿಂದ ಕೇರಳದ ಕೊಯಿ ಕೋಡ್‌ಗೆ ಕೊಡಗು ಜಿಲ್ಲೆಯ ಮೂಲಕ 400 ಕೆ.ವಿ ಹೈಟೆನ್ಷನ್ ವಿದ್ಯುತ್ ಮಾರ್ಗ ರೂಪಿಸುವ ಸಂದರ್ಭ ಕೊಡಗು ಜಿಲ್ಲೆಯಲ್ಲಿ 54 ಸಾವಿರ ಮರಗಳ ನಾಶ ಮಾಡಿದ್ದಾರೆ. ಇದರ ದುಷ್ಪರಿಣಾಮ ವಾಗಿ ಮುಂಗಾರಿನ ಗರಿಷ್ಟ ಅವಧಿಯಲ್ಲಿ ಮಳೆ ಕೊರತೆ ಎದುರಾಗಿದೆ. ಇದಲ್ಲದೆ, ಮುಂಗಾರಿನಲ್ಲಿಯೇ ಕುಡಿಯಲು ನೀರಿಲ್ಲ. ಮತ್ತೂಂದು ಕಡೆ ಕೃಷಿಗೂ ನೀರು ಲಭ್ಯವಿಲ್ಲದೆ ಸಮಸ್ಯೆ ಎದುರಾಗಿದೆ. ಇಂತಹ ವಿಕೋಪ ನಮ್ಮ ಕಣ್ಣೆದುರೇ ಇರುವಾಗ ಮೈಸೂರು-ತಲಚೇರಿ ರೈಲು ಮಾರ್ಗವನ್ನು ರೂಪಿಸಲು ಉದ್ದೇಶಿಸಿರುವುದು ಕೊಡಗು ಜಿಲ್ಲೆಯನ್ನು ವಿನಾಶಕ್ಕೆ ತಳ್ಳುವ ಯೋಜನೆ ಎಂದೆನಿಸದಿರದು. ಈ ಯೋಜನೆ ಅನುಷ್ಠಾನಕ್ಕೆ ಬರಬೇಕಾದರೆ ಕೊಡಗಿನಾದ್ಯಂತ ಲಕ್ಷಾಂತರ ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಈ ಪ್ರದೇಶದ ಪ್ರಾಕೃತಿಕ ಸಂಪತ್ತು ಮತ್ತಷ್ಟು ನಾಶವಾಗುತ್ತದೆ. ಪರಿಸರ ನಾಶದಿಂದ ಕಾಡಾನೆ ಸಮಸ್ಯೆ ಹೆಚ್ಚು ಗಂಭೀರಗೊಳ್ಳುತ್ತದೆ. ಅಲ್ಲದೆ, ಕೊಡಗು ಜಿಲ್ಲೆ ಶೀಘ್ರದಲ್ಲೆ ಪರಿಸರ ನಾಶದಿಂದ ಮರುಭೂಮಿಯಾಗಿ ಪರಿವರ್ತನೆಯಾಗುತ್ತದೆ ಮತ್ತು ಕಾವೇರಿ ನದಿ ಮತ್ತದರ ಉಪ ನದಿ ಸಹ ಬರಡಾಗುವ ಅತಂಕವಿದೆ.
ಕೊಡಗು ಜಿಲ್ಲೆಯ ಮೂಲಕ ನಿರ್ಧರಿಸಿರುವ ರೈಲು ಮಾರ್ಗವನ್ನು ನಿರ್ಮಿಸಲು ಸಾವಿರಾರು ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಮಾರಕ ವಾದ ಈ ಯೋಜನೆಗೆ ಬಳಸುವ ಮೊತ್ತವನ್ನು ಕರ್ನಾಟಕದಲ್ಲಿ ಮಲೆನಾಡು ಪ್ರದೇಶಗಳ ಸುಧಾರಣೆಗೆ ಬಳಸಬಹುದಾಗಿದೆ. ರಸ್ತೆ ಅಭಿವೃದ್ಧಿ, ಅಂತರ್ಜಲವೃದ್ಧಿ, ಪುಷೊದ್ಯಮ, ಜಲಾನಯನ ಮತ್ತು ಅರಣ್ಯ ಪ್ರದೇಶಗಳ ಸುಧಾರಣೆ, ಆನೆ-ಮಾನವ ಸಂಘರ್ಷದ ಶಾಶ್ವತ ಪರಿಹಾರಕ್ಕೆ ವಿನಿಯೋಗಿಸಬಹುದಾಗಿದೆ.
ಕೊಡಗು ಜಿಲ್ಲೆಯಲ್ಲಿ 6 ಲಕ್ಷ ಜನ ವಾಸಿಸುತ್ತಿದ್ದು, ಇಲ್ಲಿಗೆ ಕಳೆದ ವರ್ಷದಲ್ಲಿ 13 ಲಕ್ಷ ಜನ ಪ್ರವಾಸಿಗರು ಭೇಟಿ ನೀಡಿದ್ದಾರೆ. ಹೀಗಾಗಿ ರೈಲ್ವೆ ಮಾರ್ಗ ಅವಶ್ಯಕತೆಯೇ ಇಲ್ಲ. ಒಂದೂವರೆ ಗಂಟೆಯಲ್ಲಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಅವಶ್ಯವಾದರೆ ಜಿಲ್ಲೆಯವರು ತೆರಳಿ ರೈಲ್ವೆ ಸೌಲಭ್ಯ ಬಳಸಲು ಅವಕಾಶವಿದೆ.(ಆದಾಗ್ಯೂ ಕೊಡಗಿಗೆ ರೈಲು ತರಬೇಕೆಂಬ ಯೋಜನೆ ಇಂದು ನಿನ್ನೆಯದಲ್ಲ. 1929ರಲ್ಲಿಯೇ ಇದರ ಬಗ್ಗೆ ಸರ್ವೆಗಾಗಿ ಮೆÂಸೂರಿನ ಗೆಜಿಟಿಯರ್‌ನಲ್ಲಿ ಪ್ರಸ್ತಾಪ ಮಾಡಲಾಗಿತ್ತು, ಅದರೆ ಕೊಡಗು ಗುಡ್ಡಗಾಡು ಪ್ರದೇಶವಾದ್ದರಿಂದ ರೈಲ್ವೆ ಹಳಿಹಾಕುವ ಯೋಜನೆಯನ್ನು ಕೈಬಿಡಲಾಗಿತ್ತು.)
ಈಗಾಗಲೇ ಹಸಿರು ನಿಶಾನೆ ಬಿದ್ದಿರುವ ಬೆನ್ನಲ್ಲೇ ಕೊಡಗು ರಕ್ಷಿಸಿ ಹಾಗೂ ಕಾವೇರಿ ನದಿ ಉಳಿಸಿ ಅಂದೋಲನ ಮೈದಾಳಿದೆ. ಈ ಯೋಜನೆಯಿಂದ ಜಿಲ್ಲೇಯ ಸಣ್ಣ ರೈತರಿಗೆ ತೊಂದರೆಯಾ ಗುತ್ತದೆ. ಜತೆಗೆ ಲಕ್ಷಾಂತರ ಮರಗಳ ಜೊತೆಗೆ ಕೊಡಗಿನ ಸಂಸ್ಕೃತಿಯ ಪ್ರತೀಕವಾದ ಐನ್ ಮನೆಗಳು ನಾಶವಾಗುತ್ತವೆ. ಇನ್ನು ಕೊಡಗಿನ ಒಳಗೆ ರೈಲು ಮಾರ್ಗ ಬಂದರೆ ಸಾಕಷ್ಟು ಭೂಮಿ ಒತ್ತುವರಿಯಾಗುತ್ತದೆ. ಕಾವೇರಿಯೂ ಮಲಿನಗೊಳ್ಳು ತ್ತಾಳೆ. ಇದರಿಂದ ಗಂಭೀರ ಪರಿಣಾಮಗಳನ್ನು ಮುಂದೆ ಎದುರಿಸಬೇಕಾಗುವುದು ಸ್ಥಳೀಯರೇ. ವಲಸಿಗರ ಹರಿವೂ ಹೆಚ್ಚಾಗುತ್ತದೆ. ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ಅದರೆ ಅಭಿವೃದ್ಧಿಯ ಹೆಸರಲ್ಲಿ ಈಗಾಗಲೇ ಸಾವಿರಾರು ಮರಗಳ ಮಾರಣಹೋಮವಾಗಿದೆ. ಅಭಿವೃದ್ಧಿ ಹೆಸರಲ್ಲಿ ಪರಿಸರಕ್ಕೆ ಮಾರಕವಾದ ಇಂಥ ಯೋಜನೆಗಳು ಬೇಕೆ? ಕೊಡಗು ವಿರೋಧಿ ರೈಲು ಯೋಜನೆಯನ್ನು ಪಕ್ಷ, ಜಾತಿ ಭೇದವೆನ್ನದೆ ಎಲ್ಲರೂ ಒಂದಾಗಿ ವಿರೋಧಿಸಬೇಕಾಗಿದೆ.
ಲಕ್ಷಾಂತರ ಮರಗಳು ಮತ್ತು ಕೊಡಗಿನ ಸಂಸ್ಕೃತಿಯ ಪ್ರತೀಕವಾದ ಐನ್ ಮನೆಗಳು ನಾಶವಾಗುತ್ತವೆ. ಕೊಡಗಿನೊಳಗೆ ರೈಲು ಮಾರ್ಗ ಬಂದರೆ ಸಾಕಷ್ಟು ಭೂಮಿ ಒತ್ತುವರಿ ಆಗುತ್ತದೆ. ಕಾವೇರಿಯೂ ಮಲಿನಗೊಳ್ಳು ತ್ತಾಳೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಫೆ. 18ರಂದು ಭಾರೀ ಪ್ರತಿಭಟನೆ ನಡೆಸಲು ಕೊಡಗಿನ ನಾಗರಿಕರು ಮುಂದಾಗಿದ್ದಾರೆ.
ಯಜಾಸ್ ದುದ್ದಿಯಂಡ, ಮೂಡಬಿದಿರೆ