Advertisement
ರೈಲ್ವೇ ಯಾವಾಗಲೂ ಸಾಮೂಹಿಕ ಸಾರಿಗೆ ಸಾಧನ. ಇಡೀ ಜಗತ್ತು ಈಗ ಸುರಕ್ಷಿತ, ತ್ವರಿತ ಮತ್ತು ಕೈಗೆಟ ಕುವ ಪ್ರಯಾಣಕ್ಕಾಗಿ ರೈಲ್ವೆಯನ್ನು ಅವಲಂಬಿಸಿದೆ. ಮುಂಬಯಿಯಂತಹ ಮಹಾನಗರದಲ್ಲಿ ಈ ರೈಲ್ವೆ ಜನಜೀವನವನ್ನು ನಿರ್ದೇಶಿಸುತ್ತಿದೆ. ಹೀಗಾಗಿ ರೈಲು ಆ ನಗರದ ಜೀವನಾಡಿ ಎನ್ನುತ್ತೇವೆ. ಆರ್ಥಿಕ ಮಾತ್ರವಲ್ಲದೆ ಸಾಮಾಜಿಕ ಸ್ಥಿತಿಗತಿಯನ್ನು ನಿರ್ಧರಿಸುವಲ್ಲೂ ರೈಲ್ವೆಯದ್ದು ಪ್ರಮುಖ ಪಾತ್ರ. ಚೀನಾ, ಜಪಾನ್, ಅಮೆರಿಕದಂತಹ ಮುಂದುವರಿದ ದೇಶಗಳು ರೈಲ್ವೆ ಸಾರಿಗೆಯಲ್ಲಿ ಮಾಡಿರುವ ಸಾಧನೆ ನಿಬ್ಬೆರಗಾಗಿಸುವಂಥದ್ದು. ಆದರೆ ಭಾರತದ ರೈಲ್ವೆಗೆ ಒಂದೂವರೆ ಶತಮಾನಕ್ಕೂ ಹೆಚ್ಚಿನ ಇತಿಹಾಸವಿದ್ದರೂ ರೈಲನ್ನು ಸುರಕ್ಷಿತ ಸಾರಿಗೆಯಾಗಿಸುವಲ್ಲಿ ನಾವು ಕ್ರಮಿಸಿದ್ದು ಕಡಿಮೆ.
ದಿನಕ್ಕೊಂದು ರೈಲು ಅಪಘಾತಕ್ಕೀಡಾಗುತ್ತಿದೆ ಎಂದರ್ಥ. ನೀತಿ ಆಯೋಗದ ವರದಿಯಂತೆ ಹತ್ತರಲ್ಲಿ ಆರು ಅಪಘಾತಗಳಿಗೆ ಸಿಬ್ಬಂದಿಗಳ ನಿರ್ಲಕ್ಷ್ಯ ಕಾರಣ. ಸುರಕ್ಷತೆಗಾಗಿ ರೈಲ್ವೆಯಲ್ಲಿ 7ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿದ್ದಾರೆ. ಈ ಪೈಕಿ ಯಾರಾದರೊಬ್ಬ ಚಿಕ್ಕದೊಂದು ತಪ್ಪು ಮಾಡಿದರೂ ಗಂಡಾಂತರ ತಪ್ಪಿದ್ದಲ್ಲ. ಹಾಗೆಂದು ಇದಕ್ಕೆ ಸಂಪೂರ್ಣ ಸಿಬ್ಬಂದಿಗಳನ್ನೇ ಹೊಣೆಯಾಗಿಸುವುದು ಸರಿಯಲ್ಲ. ಇಲಾಖೆ ಶೇ. 16 ಸಿಬ್ಬಂದಿ ಕೊರತೆಯನ್ನು ಅನುಭವಿಸುತ್ತಿದೆ. ಅಂದರೆ ಇರುವ ಸಿಬ್ಬಂದಿಗಳ ಮೇಲೆ ಹೆಚ್ಚುವರಿ ಹೊರೆ ಎಂದು ಅರ್ಥ. ರೈಲು ಚಾಲಕರು ಸರಾಸರಿಯಾಗಿ 12ರಿಂದ 16 ತಾಸು ಕೆಲಸ ಮಾಡಬೇಕಾಗುತ್ತದೆ. ಅದೂ ಶೌಚಾಲಯ, ಸರಿಯಾದ ಆಹಾರ, ವಿಶ್ರಾಂತಿ ಇಲ್ಲದ ಸ್ಥಿತಿಯಲ್ಲಿ. ಎಲ್ಲರೂ ಅವರಿಂದ ಅತ್ಯುತ್ತಮ ನಿರ್ವಹಣೆಯನ್ನು ಬಯಸುತ್ತಾರೆಯೇ ವಿನಾ ಅವರಿಗೆ ಕನಿಷ್ಠ ಮೂಲಸೌಲಭ್ಯಗಳನ್ನು ನೀಡುವ ಬಗ್ಗೆ ಚಿಂತಿಸುವುದಿಲ್ಲ. ಇದು ಚಾಲಕರೂ ಸೇರಿದಂತೆ ಕೆಳ ಹಂತದಲ್ಲಿ ದುಡಿಯುವ ಎಲ್ಲ ನೌಕರರ ಕತೆ
.
ಕಳೆದ ವರ್ಷ ಬೆನ್ನುಬೆನ್ನಿಗೆ ಮೂರ್‍ನಾಲ್ಕು ರೈಲು ಅವಘಡ ಸಂಭವಿಸಿದಾಗ ವಿಶ್ವಬ್ಯಾಂಕ್ ಭಾರತೀಯ ರೈಲ್ವೆ ಸುರಕ್ಷೆಗಾಗಿ ಸಲಹೆ ರೂಪದಲ್ಲಿ ಮಾರ್ಗದರ್ಶಿಯೊಂದನ್ನು ನೀಡಿತ್ತು. ಇದೇನು ಕೋಟಿಗಟ್ಟಲೆ ರೂಪಾಯಿ ವೆಚ್ಚದ ಸಲಹೆಗಳಲ್ಲ. ನಮಗೆಲ್ಲ ತಿಳಿದಿರುವಂಥದ್ದೇ. ರೈಲುಗಳಿಗೆ ಮಂದ ಬೆಳಕಿನಲ್ಲೂ ಸ್ಪಷ್ಟವಾಗಿ ದಾರಿ ಕಾಣುವ ಡಿಚ್ ಲೈಟ್ ಅಳವಡಿಸಿ, ರೈಲು ಕಾರ್ಮಿಕರಿಗೆ ದೂರದಿಂದಲೇ ಕಾಣಿಸುವಂತಹ ಉಡುಪುಗಳನ್ನು ನೀಡಿ, ಎಲ್ಲ ರೈಲುಗಳಿಗೆ ಅಗ್ನಿಶಮನ ವ್ಯವಸ್ಥೆ ಅಳವಡಿಸಿ ಮತ್ತು ಸಿಬ್ಬಂದಿಗಳಿಗೆ ಅಗ್ನಿಶಮನ ತರಬೇತಿ ನೀಡಿ, ಲೆವೆಲ್ ಕ್ರಾಸ್ ಮತ್ತು ಕಾಲ್ದಾರಿಗಳಿಗೆ ದೂರದಿಂದಲೇ ಕಾಣಿಸುವಂತಹ ಬಣ್ಣ ಬಳಿಯಿರಿ, ರೈಲು ಅಪಘಾತಗಳ ತನಿಖೆ ನಡೆಸುವ ಅಧಿಕಾರಿಗಳಿಗೆ ಉತ್ತಮ ತರಬೇತಿ ನೀಡಿ, ಮೈನ್‌ಲೈನ್‌ಗೆ ವಾರದಲ್ಲಿ 4 ತಾಸು ನಿರ್ವಹಣಾ ಸಮಯ ಮೀಸಲಿಡಿ ಮತ್ತು ಅಪಾಯವನ್ನು ಗ್ರಹಿಸುವ ಸಲುವಾಗಿ ಸುರಕ್ಷಾ ನಿರ್ವಹಣೆಯನ್ನು ನಿಗದಿತ ಕಾಲಾವಧಿಗೊಮ್ಮೆ ಮಾಡುತ್ತಾ ಇರಿ, ರೈಲ್ವೆಗೆ ಸ್ವತಂತ್ರ ಸುರಕ್ಷಾ ನಿಯಂತ್ರಕರನ್ನು ನೇಮಿಸಿ ಎಂಬಿತ್ಯಾದಿ ಸಾಮಾನ್ಯ ಸಲಹೆಗಳೇ ಇದರಲ್ಲಿ ಇದ್ದದ್ದು. ಕನಿಷ್ಠ ಈ ಪೈಕಿ ಕೆಲವು ಸಲಹೆಗಳನ್ನಾದರೂ ಪರಿಣಾಮಕಾರಿಯಾಗಿ ಅನುಷ್ಠಾನಿಸಿದರೆ ಚಾಲಕನಿಲ್ಲದೆ ರೈಲು ಚಲಿಸುವುದು, ಎಂಜಿನ್ ಇಲ್ಲದೆ ಓಡುವಂತಹ ಅವಘಡಗಳನ್ನು ಕಡಿಮೆ ಮಾಡಬಹುದು. ಇಂಥ ತೀರ್ಮಾನಗಳು ತುರ್ತಾಗಿ ಜಾರಿಯಾದರೆ ಮಾತ್ರ ಮೌಲ್ಯ.