ರಾಯಚೂರು: ಇಡೀ ಗ್ರಾಮಸ್ಥರೇ ನಮ್ಮ ಊರಲ್ಲಿ ಮದ್ಯ ಮಾರುವುದು ಬೇಡ. ನೀವು ತಂದು ಮಾರಾಟ ಮಾಡಬೇಡಿ ಎಂದರೂ ಕೆಲ ಪ್ರಭಾವಿಗಳು ಅಕ್ರಮ ಮಾರಾಟ ದಂಧೆ ನಿಲ್ಲಿಸುತ್ತಿಲ್ಲ. ಇದರಿಂದ ಮಂಗಳವಾರ ಮದ್ಯ ಪೂರೈಕೆಗೆ ಆಗಮಿಸಿದ್ದ ವಾಹನವನ್ನು ಗ್ರಾಮಸ್ಥರು ತಡೆದು ಪ್ರತಿಭಟಿಸಿದ ಘಟನೆ ನಡೆದಿದೆ.
ತಾಲೂಕಿನ ಎಲೆ ಬಿಚ್ಚಾಲಿಯಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಮಾನ್ಯತೆ ಹೊಂದಿದ ಯಾವುದೇ ಮದ್ಯದಂಗಡಿ ಇರದಿದ್ದರೂ ಗ್ರಾಮದ ಕಿರಾಣಿ ಅಂಗಡಿ, ಪಾನ್‌ಶಾಪ್‌ಗ್ಳಲ್ಲಿ ಎಲ್ಲ ರೀತಿಯ ಮದ್ಯ ಸಿಗುತ್ತಿದೆ. ಇದರಿಂದ ಗ್ರಾಮದ ಯುವಕರು ಕೂಡ ಹಾಳಾಗುತ್ತಿದ್ದು, ನಮ್ಮೂರಿಗೆ ಮದ್ಯ ಸರಬರಾಜು ಮಾಡದಂತೆ ಗ್ರಾಮಸ್ಥರು ಮಾಡಿದ ಮನವಿಗೆ ಇಲಾಖೆ ಯಾವುದೇ ಕಡಿವಾಣ ಹಾಕುತ್ತಿಲ್ಲ.
ಗ್ರಾಮದಲ್ಲಿ ಸಂಜೆಯಾದರೆ ಪರಿಸ್ಥಿತಿ ಭಿನ್ನವಾಗುತ್ತಿದೆ. ಮತ್ತಿನಲ್ಲಿ ತೇಲಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವರು ದುಡಿದು ಬಂದ ಹಣವನ್ನೆಲ್ಲ ಮದ್ಯಕ್ಕೆ ಇಡುತ್ತಿದ್ದು, ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ. ಅಲ್ಲದೇ, ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರುವುದರಿಂದ ಮಹಿಳೆಯರು ಅಂಗಡಿಗಳಿಗೆ ಹೋಗುವುದು ಕಷ್ಟ ಎನ್ನುವಂತಾಗಿದೆ. ಈ ಹಿಂದೆಯೇ ಇದಕ್ಕೆ ಕಡಿವಾಣ ಹಾಕುವಂತೆ ಮಾಡಿದ ಒತ್ತಾಯಕ್ಕೆ ಕೆಲಕಾಲ ಪರಿಸ್ಥಿತಿ ಹತೋಟಿಗೆ ಬಂದಿತ್ತು. ಈಗ ಪುನಃ ಅಂಥದ್ದೇ ಸಮಸ್ಯೆ ಎದುರಾಗಿದ್ದು, ಬೇಡ ಎಂದರೂ ಕೆಲವರೂ ಅಕ್ರಮವಾಗಿ ಮದ್ಯ ಮಾರುತ್ತಿದ್ದಾರೆ ಎಂದು ದೂರುತ್ತಾರೆ ಗ್ರಾಮಸ್ಥರು.
ಇದರಿಂದ ಬೇಸತ್ತ ಗ್ರಾಮಸ್ಥರು ಈ ಹಿಂದೆ ಅಬಕಾರಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಠಾಣೆಗೂ ದೂರು ನೀಡಿದ್ದಾರೆ. ಒಂದು ವಾರ ಇದಕ್ಕೆ ಕಡಿವಾಣ ಹಾಕಲಾಗಿತ್ತು. ಈಗ ಪುನಃ ಅಕ್ರಮ ಮದ್ಯ ಮಾರಾಟ ಶುರುವಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮದ ಪುರುಷರು, ಮಹಿಳೆಯರು ವಾಹನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ಗ್ರಾಪಂ ಅಧ್ಯಕ್ಷ ಭೀಮಣ್ಣ, ತಾಪಂ ಸದಸ್ಯ ಎಚ್.ರಮೇಶ, ಮುಖಂಡರಾದ ಮಹಾಂತಪ್ಪ, ಹನುಮಂತ ನಾಯಕ, ಶ್ರೀನಿವಾಸ ನಾಯಕ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.