ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಾದೂರು ಗ್ರಾಮದಲ್ಲಿ ರೇಷ್ಮೆ ಹುಳು ಸಾಕಾಣಿಕೆ ಶೆಡ್ ಮೇಲೆ ದಾಳಿ ನಡೆಸಿ ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮ ಮದ್ಯ ಸಹಿತ ಸುಮಾರು 10 ಲಕ್ಷ ರೂಗಳ ಮೌಲ್ಯದ ಮದ್ಯ ತಯಾರಿಕಾ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಡಿಸಿ ನರೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆಯ ಪೋಲಿಸರು ರೇಷ್ಮೆ ಹುಳು ಸಾಕಾಣಿಕೆಯ ಶೆಡ್ ನ್ನು ಅಕ್ರಮ ಮದ್ಯ ತಯಾರಿಕಾ ಕೇಂದ್ರವನ್ನಾಗಿ ಮಾಡಿಕೊಂಡಿದ್ದ ಶಿಡ್ಲಘಟ್ಟ ತಾಲೂಕಿನ ತಾದೂರಿನ ಮಂಜುನಾಥ್ ಎಂಬಾತನನ್ನು ಅಬಕಾರಿ ಪೊಲೀಸರು ಬಂಧಿಸಿ ಈ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಮತ್ತು ಜಾಲವನ್ನು ಭೇದಿಸಲು ತನಿಖೆ ಕೈಗೊಂಡಿದ್ದಾರೆ.
ತಮಿಳುನಾಡಿಗೆ ಸರಬರಾಜು: ಶಿಡ್ಲಘಟ್ಟ ತಾಲೂಕಿನ ತಾದೂರು ಗ್ರಾಮದಲ್ಲಿ ರೇಷ್ಮೆ ಹುಳು ಸಾಕಾಣಿಕೆಯ ಶೆಡ್‍ನಲ್ಲಿ 1290 ಲೀಟರ್ 43 ಕ್ಯಾನ್ ಸ್ಪಿರಿಟ್ (30 ಲೀಟರ್ ಒಳಗೊಂಡಂತೆ ಒಂದು ಕ್ಯಾನ್) ಜೊತೆಗೆ ತಯಾರು ಮಾಡಿದ 70 ಬಾಕ್ಸ್ ನಕಲಿ ಮದ್ಯವನ್ನು ಅಬಕಾರಿ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಮದ್ಯ ತಯಾರು ಮಾಡಲು ಬಳಸುವ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಮೂರು ಬ್ರಾಂಡಿನ ಮದ್ಯವನ್ನು ತಯಾರು ಮಾಡಿ ನೆರೆಯ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿಯನ್ನು ಬಯಲಿಗೆ ಎಳೆದಿದ್ದಾರೆ.
ಇದನ್ನೂ ಓದಿ:ಲವ್ ಮಾಕ್ಟೇಲ್ ಜೋಡಿ ಮದುವೆಗೆ ಮಿಲ್ಕಿ ಬ್ಯೂಟಿ ತಮನ್ನಾ
ಅಬಕಾರಿ ಇಲಾಖೆಯ ಡಿಸಿ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ವಿಶ್ವನಾಥ್, ಫೈರೋಝ್ ಖಾನ್ ಖಲೀದಾರ್, ಸಿಪಿಐ ಲಂಕೆಹನುಮಯ್ಯ, ಮಂಜುನಾಥ್, ಶಂಕರ್ ಪ್ರಸಾದ್, ಮಂಜುಳಾ ಮತ್ತು ಸಿಬ್ಬಂದಿ ಸಾಥ್ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿಯೇ ಮೊದಲ ದೊಡ್ಡ ಅಬಕಾರಿ ದಾಳಿ ಎನ್ನಲಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮದ್ಯ ತಯಾರು ಮಾಡಲು ಒಬ್ಬರು ಇಬ್ಬರಿಂದ ಸಾಧ್ಯವಿಲ್ಲ. ಈ ದಂಧೆಯಲ್ಲಿ ಅನೇಕರು ಶಾಮೀಲಾಗಿದ್ದಾರೆ ಎಂಬ ಸಂಶಯ ಮೂಡಿದ್ದು ಅಬಕಾರಿ ಇಲಾಖೆಯ ಅಧಿಕಾರಿಗಳ ತನಿಖೆಯಿಂದ ಸತ್ಯಾಂಶ ಹೊರಬೀಳಬೇಕಿದೆ.
” ಶಿಡ್ಲಘಟ್ಟ ತಾಲೂಕಿನಲ್ಲಿ ವಶಪಡಿಸಿಕೊಂಡಿರುವ ಮದ್ಯವನ್ನು ನೆರೆಯ ತಮಿಳುನಾಡಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಬ್ಲಾಕ್ ಪೀಯರ್, ಕಾಪರ್ ಬ್ಯಾರೆಲ್,ಎಕ್ಸೆಪ್ರೆಸ್ ಹೆಸರಿನಲ್ಲಿ ಬ್ರಾಂಡಿನ ಅಕ್ರಮ ಮದ್ಯವನ್ನು ಇಲ್ಲಿ ತಯಾರು ಮಾಡುತ್ತಿದ್ದರು. ಇಂದು ಬೆಳಿಗ್ಗೆ 3 ಗಂಟೆಯ ವೇಳೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಆರೋಪಿ ಮಂಜುನಾಥ್ ಎಂಬುವರ ಮನೆಗೆ ದಾಳಿ ಮಾಡಿ ರೇಷ್ಮೆ ಹುಳು ಸಾಕಾಣಿಕೆ ಮನೆಯ ಶೆಡ್ ತೆರೆದಾಗ ಅಕ್ರಮ ಮದ್ಯ ಮತ್ತು ಮದ್ಯವನ್ನು ತಯಾರಿಕೆ ಮಾಡುವ ಎಲ್ಲಾ ವಿಧವಾದ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಅಬಕಾರಿ ಡಿಸಿ ನರೇಂದ್ರ ಕುಮಾರ್ ಹೇಳಿದರು.