Advertisement

ಹಕ್ಕಿಗಾಗಿ ಸಂಘಟಿತ ಹೋರಾಟ ಅಗತ್ಯ

04:53 PM May 02, 2019 | Naveen |

ರಾಯಚೂರು: ಮೇ 1ರ ಕಾರ್ಮಿಕ ದಿನವನ್ನು ಬುಧವಾರ ನಗರ ಸೇರಿ ಜಿಲ್ಲಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಆಚರಿಸುವ ಮೂಲಕ ದುಡಿವ ವರ್ಗದ ಶ್ರಮಕ್ಕೆ ಗೌರವ ಸಲ್ಲಿಸಿದರು. ಈ ನಿಮಿತ್ತ ವಿವಿಧೆಡೆ ಕಾರ್ಯಕ್ರಮ ನಡೆದರೆ, ಕೆಲವೆಡೆ ರ್ಯಾಲಿ, ಪ್ರತಿಭಟನೆ ನಡೆಸಲಾಯಿತು.

Advertisement

ಸಿಐಟಿಯು ತಾಲೂಕು ಸಮಿತಿ ನೇತೃತ್ವದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ನಿಮಿತ್ತ ಬಹಿರಂಗ ಸಭೆ ಮತ್ತು ರ್ಯಾಲಿ ನಡೆಯಿತು. ನಗರದ ಸಂಘದ ಕಚೇರಿ ಎದುರು ಸಂಘದ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ ಧ್ವಜಾರೋಹಣ ನೆರವೇರಿಸಿದರು.

ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರವೀಣ ರೆಡ್ಡಿ ಗುಂಜಹಳ್ಳಿ ಮಾತನಾಡಿ, ಶ್ರಮದ ಕಾಯಕ ಮಾಡುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸುವ ಕಾರ್ಮಿಕರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ದಕ್ಕುತ್ತಿಲ್ಲ.

ಖಾಸಗಿ ಕಂಪನಿಗಳ ಮಾಲೀಕರು, ಗುತ್ತಿಗೆ ಕಾರ್ಮಿಕರನ್ನು ಶೋಷಿಸುತ್ತಿರುವ ನೀತಿ ಖಂಡನೀಯ. ಕನಿಷ್ಠ ವೇತನವೂ ನೀಡದೆ ಯಾವುದೇ ಸೌಲಭ್ಯ ಒದಗಿಸದ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ದೂರಿದರು.

ಹಕ್ಕುಗಳನ್ನು ಪ್ರಶ್ನಿಸುವುದು ಮಹಾ ಅಪರಾಧ ಎನ್ನುವಂತೆ ವರ್ತಿಸುತ್ತಿದ್ದು, ಕೆಲಸದಿಂದಲೇ ತೆಗೆದುಹಾಕುವ ಬೆದರಿಕೆ ಒಡ್ಡುತ್ತಿದ್ದಾರೆ. ಇದರಿಂದ ಅಸಂಘಟಿತ ಕಾರ್ಮಿಕ ವಲಯ ಇಂದಿಗೂ ಬಲಗೊಳ್ಳುತ್ತಿಲ್ಲ. ಇದು ಇಲ್ಲಿಗೆ ಕೊನೆಗೊಳ್ಳಬೇಕು. ಕಾರ್ಮಿಕರಿಗೆ ಕನಿಷ್ಠ ವೇತನದ ಜತೆಗೆ ಕಾಯ್ದೆಯನ್ವಯ ಸಿಗಬೇಕಾದ ಎಲ್ಲ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ವಿಮಾ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ಎಂ. ಶರಣಗೌಡ ಮಾತನಾಡಿ, ಕಾರ್ಮಿಕರು ತಮ್ಮ ಹಕ್ಕು ಮತ್ತು ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಸಂಘಟಿತರಾಗಿ ಹೋರಾಡಬೇಕು. ಸರ್ಕಾರ ಮತ್ತು ಖಾಸಗಿ ಕಂಪನಿಗಳ ದೌರ್ಜನ್ಯ ಎದುರಿಸಲು ಮುಂದಾಗಬೇಕು. ಸರ್ಕಾರ ಮತ್ತು ಖಾಸಗಿ ಕಂಪನಿಗಳು ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೇ ವಂಚಿಸುತ್ತಿವೆ. ಸೇವಾಭದ್ರತೆ ಕೂಡ ಇಲ್ಲ. ಕಾರ್ಮಿಕರು ಭಯದ ವಾತಾವರಣದಲ್ಲಿಯೇ ಕಾಲದೂಡುವ ಸ್ಥಿತಿ ಇದೆ. ಇದನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಕಾರ್ಮಿಕರು ಹೋರಾಟ ನಡೆಸಬೇಕು ಎಂದರು.

ವಿಭಾಗೀಯ ಕಾರ್ಯದರ್ಶಿ ಎಂ.ರವಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಸುಲೋಚನಾ, ಸಿಐಟಿಯು ತಾಲೂಕು ಕಾರ್ಯದರ್ಶಿ ಡಿ.ಎಸ್‌.ಶರಣಬಸವ ಮಾತನಾಡಿದರು. ಕಚೇರಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಲಾಯಿತು.

ಮುಖಂಡರಾದ ಮಹಾದೇವ ಜಂಬಲದಿನ್ನಿ, ವರಲಕ್ಷ್ಮೀ, ಗುರುರಾಜ ದೇಸಾಯಿ, ಚನ್ನಾರೆಡ್ಡಿ, ಮಲ್ಲಿಕಾರ್ಜುನ, ನಾಗಮ್ಮ, ಕಲ್ಯಾಣಮ್ಮ, ಚನ್ನಬಸವ ಸ್ವಾಮಿ, ಶ್ರೀನಿವಾಸ, ಈರಣ್ಣ ಸ್ವಾಮಿ, ಪಾಲ್ ಪ್ರಸಾದ, ಮಲ್ಲೇಶ ಗಧಾರ್‌, ಶರಣಪ್ಪ, ಭಾಸ್ಕರ, ಮಲ್ಲಿಕಾರ್ಜುನ, ಶಕುಂತಲಾ, ವೆಂಕಟಲಕ್ಷ್ಮೀ, ಗುರುನಾಥ, ರಂಗನಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next