Advertisement

ಗ್ರಾಪಂಗಳಿಗೆ ಆರ್‌ಒ ನಿರ್ವಹಣೆ ಸವಾಲು

12:31 PM Mar 05, 2020 | Naveen |

ರಾಯಚೂರು: ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವಂತಾಗಿದೆ ಜಿಲ್ಲಾ ಪಂಚಾಯಿತಿ ಗ್ರಾಮೀಣ ನೀರು ಸರಬರಾಜು ವಿಭಾಗದ ಸ್ಥಿತಿ. ನಿರ್ವಹಣೆ ಕಾಣದೆ ಮೂಲೆಗುಂಪಾಗಿರುವ ನೀರು ಶುದ್ಧೀಕರಣ ಘಟಕಗಳ ಹೊಣೆಯನ್ನು ಈಗ ಗ್ರಾಮ ಪಂಚಾಯಿತಿಗಳಿಗೆ ನೀಡುವ ಮೂಲಕ ಮತ್ತೂಂದು ಸಾಹಸಕ್ಕೆ ಮುಂದಾಗಿದೆ.

Advertisement

ನೀರು ಶುದ್ಧೀಕರಣ ಘಟಕಗಳ ವಿಚಾರ ಪ್ರಸ್ತಾಪಿಸುತ್ತಲೇ ದೊಡ್ಡದೊಂದು ಚರಿತ್ರೆ ತೆರೆದುಕೊಳ್ಳುತ್ತದೆ. ಒಂದು ಕಾಲಕ್ಕೆ ಪ್ರತಿ ಸಭೆಯಲ್ಲೂ ಈ ಯೋಜನೆ ವೈಫಲ್ಯದ್ದೇ ಸದ್ದು ಕೇಳಿ ಬರುತ್ತಿತ್ತು. ಜಿಲ್ಲೆಯಲ್ಲಿ ನೀರು ಶುದ್ಧೀಕರಣ ಘಟಕ ನಿರ್ವಹಣೆ ವಿಚಾರದಲ್ಲಿ ಜಿಲ್ಲಾಡಳಿತ ದೊಡ್ಡ ವೈಫಲ್ಯ ಕಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಒಟ್ಟಾರೆ ಜಿಲ್ಲೆಯಲ್ಲಿ 613 ಶುದ್ಧ ನೀರು ಘಟಕಗಳನ್ನು ಅಳವಡಿಸಿದ್ದು, 400 ಸಕ್ರಿಯವಾಗಿವೆ. 113 ಘಟಕಗಳು ನಿರ್ವಹಣೆ ಇಲ್ಲದೆ ಸಂಪೂರ್ಣ ಸ್ಥಗಿತಗೊಂಡಿದ್ದರೆ, ಕೆಲವೊಂದು ಇದ್ದೂ ಇಲ್ಲದಂತಿರುವುದು ಪ್ರಸ್ತುತ ವರದಿ. ಹಾಗಂತ ಉಳಿದ ಎಲ್ಲ ಘಟಕಗಳು ಸಕ್ರಿಯ ಎಂದಲ್ಲ. ಅವು ಕೂಡ ನಾನಾ ಕಾರಣಗಳಿಂದ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಕೆಲವೊಂದು ಘಟಕಗಳನ್ನು ತಿಪ್ಪೆ ಗುಂಡಿಗಳ ಬಳಿ, ಬಹಿರ್ದೆಸೆ ಮಾಡುವ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಅಂಥ ಘಟಕಗಳಿಂದ ಬಳಕೆಗೂ ನೀರು ತರಲು ಹಿಂದೇಟಾಕುವ ಜನತೆ, ಕುಡಿಯಲು ಬಳಸುವುದು ದೂರದ ಮಾತು.

ಇನ್ನು ಕೆಟ್ಟು ನಿಂತ ಘಟಕಗಳ ನಿರ್ವಹಣೆಗಾಗಿ ಜಿಲ್ಲಾ ಪಂಚಾಯಿತಿಯಿಂದ ಮೂರು ಬಾರಿ ಟೆಂಡರ್‌ ಕರೆದರೂ ಯಾವ ಸಂಸ್ಥೆಗಳು ಪಾಲ್ಗೊಂಡಿಲ್ಲ. ವಿಧಿ  ಇಲ್ಲದೇ ಆಯಾ ಗ್ರಾಮ ಪಂಚಾಯಿತಿಗಳಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಸಣ್ಣಪುಟ್ಟ ದುರಸ್ತಿಗಳಿರುವ 100ಕ್ಕೂ ಅಧಿಕ ಘಟಕಗಳನ್ನು ಪಂಚಾಯಿತಿಗಳಿಗೆ ಹಸ್ತಾಂತರಿಸಿದ್ದು, ದುರಸ್ತಿ ಮಾಡಿಕೊಂಡು ಸೇವೆ ನೀಡುವಂತೆ ಸೂಚಿಸಲಾಗಿದೆ. ಇನ್ನು 50ಕ್ಕೂ ಅಧಿಕ ಘಟಕಗಳು ಸಂಪೂರ್ಣ ಹಾಳಾಗಿದ್ದು, ಅವುಗಳನ್ನು ಬದಲಿಸಬೇಕಿದೆ. ಅದಕ್ಕೂ ಪ್ರತ್ಯೇಕ ಟೆಂಡರ್‌ ಕರೆದು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಜಿಪಂ ಸಿಇಒ.

ಮುಂಚೆಯಿಂದಲೂ ಸಮಸ್ಯೆ
ಜಿಲ್ಲೆಯಲ್ಲಿ ಈ ಶುದ್ಧೀಕರಣ ಘಟಕ ಅಳವಡಿಕೆಯಿಂದಲೂ ಸಮಸ್ಯೆಗಳೇ ಇವೆ. ಆರಂಭದಲ್ಲಿ ಘಟಕಗಳ ಅಳವಡಿಕೆ ಮಾಡಿ ನಿರ್ವಹಿಸಬೇಕಿದ್ದ ಸಂಸ್ಥೆ ನಿಷ್ಕಾಳಜಿಯಿಂದಲೇ ಸಾಕಷ್ಟು ಘಟಕಗಳು ಮೂಲೆಗುಂಪಾಗಿವೆ. ಆ ಸಂಸ್ಥೆಗಳಿಗೆ ಸೂಕ್ತ ಎಚ್ಚರಿಕೆ ನೀಡಿದರೂ ಎಚ್ಚೆತ್ತುಕೊಳ್ಳದ ಕಾರಣ ಅವುಗಳಲ್ಲಿ ಎರಡು ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಮತ್ತೂಂದು ಸಂಸ್ಥೆಗೆ ದಂಡ ಹಾಕಲಾಗಿದೆ. ಈಗ ನಿರ್ವಹಣೆಗೆ ಮಾಡಲು ಬನ್ನಿ ಎಂದರೆ ಯಾವ ಸಂಸ್ಥೆಗಳು ಬರುತ್ತಿಲ್ಲ. ಅದಕ್ಕೆ ಕಾರಣ ಶುದ್ಧೀಕರಣ ಘಟಕಗಳು ಸುಸಜ್ಜಿತ ರೀತಿಯಲ್ಲಿಲ್ಲ. ಈಗ ಅದಕ್ಕೆ ಕೈ ಹಾಕಿದರೆ ಮೈ ಮೇಲೆ ನಷ್ಟ ಎಳೆದುಕೊಂಡಂತೆ ಎನ್ನುತ್ತಾರೆ ಗುತ್ತಿಗೆದಾರರೊಬ್ಬರು.

Advertisement

ಪ್ರತಿ ಘಟಕಕ್ಕೆ 3 ಸಾವಿರ ರೂ. 
ಗುತ್ತಿಗೆ ಸಂಸ್ಥೆಗಳು ನಿರ್ವಹಣೆ ಮುಗಿದ ಕೂಡಲೇ ಘಟಕಗಳನ್ನು ಇಲಾಖೆಗೆ ಹಸ್ತಾಂತರಿಸಿವೆ. ಈಗ ನಿರ್ವಹಣೆಗೆ ಯಾವುದೇ ಸಂಸ್ಥೆಗಳು ಮುಂದೆ ಬಾರದ ಕಾರಣ ಪ್ರತಿ ಘಟಕಕ್ಕೆ ಮೂರು ಸಾವಿರ ರೂ.ನಂತೆ ಪಂಚಾಯಿತಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರತ್ಯೇಕ ಖಾತೆ ತೆರೆದು ನೇರವಾಗಿ ಹಣ ಜಮಾ ಮಾಡಲು ನಿರ್ಧರಿಸಲಾಗಿದೆ. ಘಟಕಗಳಲ್ಲಿ ಸಣ್ಣಪುಟ್ಟ ದುರಸ್ತಿಗಳನ್ನು ಪಂಚಾಯಿತಿಗಳೇ ಮಾಡಿಕೊಳ್ಳಬೇಕಿದೆ. ದೊಡ್ಡ ಮಟ್ಟದ ದುರಸ್ತಿ ಕಾರ್ಯಗಳಿದ್ದಲ್ಲಿ ಅಂದಾಜುಪಟ್ಟಿ ಸಲ್ಲಿಸಿದಲ್ಲಿ ಸರ್ಕಾರವೇ ಹಣ ನೀಡಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪಂಚಾಯಿತಿಗಳಿಗೆ ಸೂಕ್ತ ನಿರ್ದೇಶನ ನೀಡಿ ಅಂದಾಜುಪಟ್ಟಿ ತರಿಸಿಕೊಳ್ಳಲಾಗುತ್ತಿದೆ.

ಬೇಕಾಬಿಟ್ಟಿ ಸ್ಥಾಪನೆ
ಆರ್‌ಒ ಪ್ಲಾಂಟ್‌ಗಳ ವೈಫಲ್ಯಗಳ ಹಿಂದೆ ಗ್ರಾಮ ಪಂಚಾಯಿತಿಗಳ ನಿಷ್ಕಾಳಜಿಯೂ ಕಾರಣ. ಘಟಕ ಸ್ಥಾಪನೆಗೆ ಸ್ಥಳ ಒದಗಿಸುವಾಗ ಜನರಿಗೆ ಅನುಕೂಲಕರ ಸ್ಥಳ ಗುರುತಿಸದೆ ಕಂಡ ಕಂಡಲ್ಲಿ ಸ್ಥಳ ನಿಗದಿ ಮಾಡಲಾಗಿದೆ. ತಾಲೂಕಿನ ಗದಾರ್‌ ಗ್ರಾಮದಲ್ಲಿ ತಿಪ್ಪಗುಂಡಿ ಪಕ್ಕ ಸ್ಥಳ ನೀಡಿದರೆ, ಮರ್ಚೆಡ್‌ ಗ್ರಾಮದಲ್ಲಿ ಬಹಿರ್ದೆಸೆಗೆ ಹೋಗುವ ಸ್ಥಳದಲ್ಲಿ ನೀಡಲಾಗಿದೆ. ಡಿ ರಾಂಪುರ ಗ್ರಾಮದಲ್ಲಿ ಎರಡು ಕಿಮೀ ದೂರದಲ್ಲಿ ಸ್ಥಳ ನೀಡಲಾಗಿದೆ. ಕೆಲವೆಡೆ ವಿದ್ಯುತ್‌ ಸಂಪರ್ಕ ಸಮಸ್ಯೆ ಇದೆ. ಹೀಗೆ ಮನಬಂದಂತೆ ಘಟಕಗಳನ್ನು ಸ್ಥಾಪಿಸಿರುವುದು ಯೋಜನೆ ವೈಫಲ್ಯಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ 400ಕ್ಕೂ ಅಧಿಕ ನೀರು ಶುದ್ಧೀಕರಣ ಘಟಕಗಳನ್ನು ಸಂಬಂ ಧಿಸಿದ ಸಂಸ್ಥೆಗಳು ನಿರ್ವಹಣೆ ಮಾಡುತ್ತಿವೆ. ಉಳಿದವುಗಳಲ್ಲಿ 100ಕ್ಕೂ ಅಧಿಕ ಘಟಕಗಳ ನಿರ್ವಹಣೆ ಹೊಣೆ ಪಂಚಾಯಿತಿಗೆ ನೀಡಲಾಗಿದೆ. ಸಣ್ಣಪುಟ್ಟ ದುರಸ್ತಿಗಳಿದ್ದು, ಮಾಡಿಕೊಳ್ಳಲು ಸೂಚಿಸಲಾಗಿದೆ. 50ಕ್ಕೂ ಅಧಿಕ ಘಟಕಗಳನ್ನು ಸಂಪೂರ್ಣ ಬದಲಿಸಬೇಕಿದೆ. ಅದಕ್ಕೂ ಟೆಂಡರ್‌ ಕರೆದು ಕ್ರಮ ಕೈಗೊಳ್ಳಲಾಗಿದೆ. ಸಾಧ್ಯವಾದಷ್ಟು ಈ ಬೇಸಿಗೆಯಲ್ಲಿ ಉತ್ತಮ ಸೇವೆ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು.
ಲಕ್ಷ್ಮೀ ಕಾಂತರೆಡ್ಡಿ,
ಜಿಪಂ ಸಿಇಒ

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next