ರಾಯಚೂರು: ಭಾರತೀಯ ಕೃಷಿ ಪದ್ಧತಿ, ಭಾಷೆ, ಸಂಸ್ಕೃತಿ, ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಅದನ್ನು ಸಂಪೂರ್ಣವಾಗಿ ಕಡೆಗಣಿಸಿದ್ದ ಕಾಲವಿತ್ತು. ಅಂತಹ ಕಾಲಘಟ್ಟದಲ್ಲಿ ಭಾರತದ ಹಿರಿಮೆಯನ್ನು ವಿಶ್ವದ ಮುಂದೆ ಹೆಮ್ಮೆಯಿಂದ ಸಾರಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಜಿಲ್ಲಾ
ಧಿಕಾರಿ ಆರ್.ವೆಂಕಟೇಶಕುಮಾರ ಶ್ಲಾಘಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಯುವ ಸಪ್ತಾಹ, ಉಚಿತ ಲ್ಯಾಪ್‌ಟಾಪ್ ವಿತರಣೆ ಹಾಗೂ ಯುವ ಸಬಲೀಕರಣ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಈಗ ಮುಂದುವರಿದ ದೇಶಗಳೆಂದು ಗುರುತಿಸಿಕೊಂಡ ಅಮೇರಿಕ, ಇಂಗ್ಲೆಂಡ್ ಸೇರಿದಂತೆ ಅನೇಕ ದೇಶಗಳ ಜನ ಕಾಡಿನಲ್ಲಿ ಪ್ರಾಣಿಗಳಂತೆ ಬಾಳುತ್ತಿದ್ದ ಕಾಲದಲ್ಲೇ ಭಾರತದಲ್ಲಿ ನಾಗರಿಕತೆ ಬೆಳೆದಿತ್ತು. ಇಷ್ಟೆಲ್ಲ ಇದ್ದರೂ ಬ್ರಿಟಿಷರ ಕಪಿಮುಷ್ಟಿಯಲ್ಲಿ ಬಂಧಿ ಯಾಗಿದ್ದ ನಮ್ಮ ದೇಶದ ಜನ ವಿಶ್ವದ ದೃಷ್ಟಿಗೆ ಕೇವಲ ಗುಲಾಮರಂತೆ ಕಂಡೆವು. ಇಂತಹ ಸಂದರ್ಭದಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡುವ ಮೂಲಕ ವಿಶ್ವ ಮತ್ತೆ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದು, ಇದೇ ಸ್ವಾಮಿ ವಿವೇಕಾನಂದರು ಎಂದರು.
ನಮ್ಮ ಧರ್ಮ-ಸಂಸ್ಕೃತಿಗೆ ಪುನಶ್ಚೇತನ ನೀಡಿದವರು ಸ್ವಾಮಿ ವಿವೇಕಾನಂದರು. ಅವರ ಧೈರ್ಯ, ಸಾಹಸ, ಚಿಂತನೆಗಳು ಹಾಗೂ ವ್ಯಕ್ತಿತ್ವ ನಮಗೆಲ್ಲರಿಗೂ ಮಾದರಿ. ಇಂದಿನ ಮಾಹಿತಿ ಯುಗದಲ್ಲಿ ಗಣಕಯಂತ್ರ ಹಾಗೂ ಮೊಬೈಲ್ ಅನಿವಾರ್ಯ ವಸ್ತುಗಳು. ಇಂಟರ್‌ನೆಟ್ ಒಂದಿದ್ದರೆ ವಿಶ್ವವೇ ಕೈಯಲ್ಲಿದ್ದಂತೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಪದವಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡುತ್ತಿದೆ. ಮನರಂಜನೆ ಅಥವಾ ಕಾಲಹರಣ ಸಂಗತಿಗಳಿಗೆ ಇದನ್ನು ಬಳಸದೇ, ಜ್ಞಾನ ಹಾಗೂ ಕೌಶಲ್ಯ ವೃದ್ಧಿಗಾಗಿ ಬಳಸಬೇಕು. ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಬಳಸುವಂತೆ ತಿಳಿ ಹೇಳಿದರು.
ಸ್ವಾಮಿ ವಿವೇಕಾನಂದ ಆರೋಗ್ಯ ಕೇಂದ್ರದ ಡಾ| ಆನಂದತೀರ್ಥ ಫಡ್ನಿಸ್ ವಿವೇಕಾನಂದರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಬಳಿಕ ರಾಷ್ಟ್ರೀಯ ಯುವ ದಿನದ ಅಂಗವಾಗಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಎಂಲ್‌ಎಸಿ ಎನ್.ಎಸ್.ಭೋಸರಾಜ್ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ದುರ್ಗೇಶ, ಪ್ರೊಬೇಶನರಿ ಐಎಎಸ್ ಅಧಿಕಾರಿ ಯುಕೇಶಕುಮಾರ, ಪ್ರಾಚಾರ್ಯ ಡಾ|
ದಸ್ತಗಿರ್‌ಸಾಬ್ ದಿನ್ನಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.