ರಾಯಚೂರು: ಅಪಘಾತ ಪ್ರಕರಣಗಳು ಹೆಚ್ಚಾಗಲು ಸಂಚಾರ ನಿಯಮಗಳ ಉಲ್ಲಂಘನೆಯೇ ಪ್ರಮುಖ ಕಾರಣ. ಹೀಗಾಗಿ ವಾಹನ ಸವಾರರು, ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿಯ ಡಿಎಆರ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ವಾಹನ ಸುರಕ್ಷಾ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಸರ್ಕಾರ ಸಂಚಾರ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ಹಾಗೂ ಕಠಿಣ ಶಿಕ್ಷೆ ಜಾರಿಗೊಳಿಸಿದೆ. ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸುವ ಜತೆಗೆ ಪರವಾನಗಿ ಕೂಡ ರದ್ದು ಮಾಡಲಾಗುವುದು. ಹೀಗಾಗಿ ಸವಾರರು ಜಾಗರೂಕತೆಯಿಂದ ವಾಹನ ಓಡಿಸಬೇಕು ಎಂದರು.
ಸಂಚಾರ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಕೇವಲ ನಮ್ಮ ರಕ್ಷಣೆ ಮಾತ್ರವಲ್ಲದೇ ಎದುರಿಗಿರುವ ಪ್ರಯಾಣಿಕರ ಹಿತದೃಷ್ಟಿಯಿಂದಲೂ ಸಂಚಾರ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದರು.
ಪ್ರಯಾಣಿಕರು ಪದೇಪದೆ ತಪ್ಪುಗಳನ್ನು ಮಾಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಲೆಂದೇ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಇನ್ನು ಮುಂದೆ ನಿಯಮ ಉಲ್ಲಂಘಿಸಿದರೆ ಭಾರೀ ಪ್ರಮಾಣದ ದಂಡ ಕಟ್ಟಬೇಕಿದೆ. ಅದರೊಟ್ಟಿಗೆ ಇನ್ನಿತರ ಕ್ರಮಗಳನ್ನು ಎದುರಿಸಬೇಕಿದೆ. ವಾಹನ ಓಡಿಸುವಾಗ ಮೊಬೈಲ್ ಪೋನ್ ಬಳಸುವುದು, ಬೈಕ್ ಮೇಲೆ ಮೂವರು ಹೋಗುವುದು ಸರಿಯಲ್ಲ. ಅದೇ ರೀತಿ ವಿಮಾ ರಹಿತ ವಾಹನ ಚಾಲನೆ ಮಾಡಿದವರಿಗೆ 1000, ನೋಂದಣಿ ರಹಿತ ವಾಹನ ಚಾಲನೆ ಮಾಡಿದರೆ 5000 ದಂಡ ಹಾಕಲಾಗುತ್ತಿದೆ. ಯುವಕರು ವೀಲಿಂಗ್ ಮಾಡುವುದು, ಹುಡುಗಿಯರಿಗೆ ಚುಡಾಯಿಸುವುದು ಕೂಡ ಕಂಡುಬಂದಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಸಭ್ಯತೆಯಿಂದ ನಡೆದುಕೊಳ್ಳುವಂತೆ ತಿಳಿಸಬೇಕು ಎಂದರು.
ಆಟೋ ಚಾಲಕರು ಬೇಕಾಬಿಟ್ಟಿ ಜನರನ್ನು ತುಂಬುವಂತಿಲ್ಲ. ಆರು ಜನರಿಗಿಂತ ಹೆಚ್ಚು ಪ್ರಯಾಣಿಕರಿದ್ದಲ್ಲಿ ವಾಹನ ಸೀಜ್ ಮಾಡಲಾಗುವುದು. ಸರಕು ಸಾಗಿಸುವ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಂತಿಲ್ಲ. ತಪ್ಪುಗಳು ಮರುಕಳಿಸಿದಲ್ಲಿ ಚಾಲನಾ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ವೈದ್ಯರಾದ ಡಾ| ಮಹಾಲಿಂಗಪ್ಪ, ಡಾ| ಸುರೇಶ, ವಿಶ್ವನಾಥ, ವಿವಿಧ ವಲಯಗಳ ಸಿಪಿಐ ಹಾಗೂ ಪಿಎಸ್‌ಐ ಇದ್ದರು.