ರಾಯಚೂರು: ಪರಿಶಿಷ್ಟ ಪಂಗಡ ಸಮುದಾಯಕ್ಕೆ ನೀಡಿರುವ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಬೇಕು, ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಸದಸ್ಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ವಾಲ್ಮೀಕಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಡಿಸಿ ಕಚೇರಿ ಎದುರು ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪರಿಶಿಷ್ಟ ಪಂಗಡ ಜನಸಂಖ್ಯೆ ಸಾಕಷ್ಟು ವೈದ್ಧಿಯಾಗಿದೆ. ಈಗಿರುವ ಶೇ.3ರಷ್ಟು ಮೀಸಲಾತಿ ಸೌಲಭ್ಯ ಸಾಲುವುದಿಲ್ಲ. ಅಲ್ಲದೇ, ಕುತಂತ್ರದಿಂದ ಕೆಲ ಜಾತಿಗಳನ್ನು ಎಸ್‌ಟಿ ಸೇರಿಸುವ ಹುನ್ನಾರ ನಡೆದಿದೆ. ನಮಗೆ ಶಿಕ್ಷಣ, ಉದ್ಯೋಗದಲ್ಲಿ ಶೇ.7.5ರಷ್ಟು ಮೀಸಲಾತಿ ನೀಡದ ಹೊರತು ಸಮಾಜದ ಪ್ರಗತಿ ಸಾಧ್ಯವಿಲ್ಲ ಎಂದರು.
ಇದೇ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುತ್ತಿದೆ. ರಾಜ್ಯದಲ್ಲಿ ಎಸ್‌ಟಿ ಜನಸಂಖ್ಯೆ 42 ಲಕ್ಷಕ್ಕೂ ಅಧಿಕವಾಗಿದೆ. ಅಂದರೆ ಶೇ.6.95ರಷ್ಟು ಇದೇ ಸಮಾಜದ ಜನರಿದ್ದಾರೆ. ಅದರ ಜತೆಗೆ ಕಳೆದ 8 ವರ್ಷದಲ್ಲಿ ಆ ಪ್ರಮಾಣ ಶೇ.7.5ರಷ್ಟು ತಲುಪಿರುವ ಸಾಧ್ಯತೆ ಇದೆ. ಆದರೆ, ನೇಮಕಾತಿ, ಬಡ್ತಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಗಳಲ್ಲಿ ಕೇವಲ ಶೇ.3ರಷ್ಟು ಮೀಸಲಾತಿ ನಿಗದಿ ಮಾಡಿದ್ದು, ಸಾಕಷ್ಟು ಜನರಿಗೆ ಅನ್ಯಾಯವಾಗುತ್ತಿದೆ ಎಂದರು.
ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಹಾವಳಿ ಹೆಚ್ಚಾಗಿದೆ. ಆರ್ಥಿಕ ಸ್ಥಿತಿವಂತರು ಕೂಡ ಎಸ್‌ಟಿ ಹೆಸರಿನಲ್ಲಿ ಸೌಲಭ್ಯ ಪಡೆಯುತ್ತಿದ್ದಾರೆ. ಇಂಥ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಜಾತಿ ಪ್ರಮಾಣ ಪತ್ರ ವಿತರಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. .
ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ, ಹಿರಿಯ ವಕೀಲ ಪಾಂಡುರಂಗ ನಾಯಕ, ಜೆಲ್ಲಿ ತಿಮ್ಮಪ್ಪ ನಾಯಕ, ಈಶಪ್ಪ, ರಂಗಣ್ಣ ನಾಯಕ, ಕೆ.ಶಿವಕುಮಾರ ನಾಯಕ, ಕೊಟ್ರೇಶ್ವರ ಕೋರಿ, ಮುಖಂಡರಾದ ಇತರರು ಪಾಲ್ಗೊಂಡಿದ್ದರು.