ರಾಯಚೂರು: “ನಾವು ನಿಮ್ಮವರು, ನೀವು ನಮ್ಮವರು ಎನ್ನುವ ವಾತಾವರಣ ಇದ್ದರೆ ಮಾತ್ರ ಅಧ್ಯಾತ್ಮಿಕ ಚಿಂತನೆ ಸಾಧ್ಯವಾಗುತ್ತದೆ’ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ ಹೇಳಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ನೆಮ್ಮದಿ, ಸಂತೋಷ, ಪ್ರೀತಿ ಹಾಗೂ ವಿಶ್ವಾಸ ಬೇಕು. ಯಾವುದೇ ಕೆಲಸ ಮಾಡಿದರೂ ಅದರಿಂದ ಯಶಸ್ಸು ಪಡೆಯುವ ಉದ್ದೇಶ ಇರುತ್ತದೆ. ಜೀವನದಲ್ಲಿ ಏನೇನು ಬಯಸುತ್ತೇವೆಯೋ ಅದನ್ನು ಒದಗಿಸಿಕೊಡುವ ಶಕ್ತಿ ಅಧ್ಯಾತ್ಮ. ಮನುಷ್ಯನಲ್ಲಿ ಹುದುಗಿರುವ ಶಕ್ತಿಯೇ ಅಧ್ಯಾತ್ಮ ಎಂದರು.
ಆತ್ಮ, ಜೀವಕ್ಕೆ ಪ್ರಾಮುಖ್ಯತೆ ಕೊಡುವುದು ಅಧ್ಯಾತ್ಮ. ಗೊಂದಲದಲ್ಲಿರುವ ಮನಸ್ಸಿಗೆ ಸೃಜನಾತ್ಮಕತೆ, ಉತ್ಸಾಹ ಕೊಡುವುದೆ ಅಧ್ಯಾತ್ಮ. ಚಿಂತೆಯಲ್ಲಿದ್ದವರಿಗೆ ಚಿಂತನೆ ಸಾಧ್ಯವಿಲ್ಲ. ಆಗಿ ಹೋಗಿರುವ ಬಗ್ಗೆ ಆಕ್ರೋಶ, ಆಗಬಹುದಾದರ ಬಗ್ಗೆ ಅಶಂಕೆ ಮೂಡುತ್ತದೆ. ಭೂತ-ಭವಿಷ್ಯ ಮಧ್ಯದ ಹೊಯ್ದಾಟವು ಮನಸ್ಸಿನಿಂದ ದೇಹದಲ್ಲಿ ವಿಷಮತೆ ಉತ್ಪಾದಿಸುತ್ತದೆ. ಇದರಿಂದ ಶರೀರದಲ್ಲಿ ಆಲಸ್ಯ, ಸಿಟ್ಟು ಮೂಡುತ್ತದೆ ಎಂದರು.
40 ವರ್ಷಗಳಿಂದ ಆರ್ಟ್ ಆಫ್ ಲಿವಿಂಗ್‌ನಿಂದ 156 ದೇಶಗಳಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಸಾಕಷ್ಟು ಜನರು ಪರಿವರ್ತನೆ ಆಗಿದ್ದಾರೆ. ಹಸಿದವರು ಹೋಟೆಲ್ ಹುಡುಕಾಡುತ್ತಾರೆ. ಹಾಗೆಯೇ ಮನಸ್ಸಿಗೆ ಬೇಗುದಿ, ಕೋಪ, ಹಿಂಸಾತ್ಮಕ ಪ್ರವೃತ್ತಿಗೆ ಬಂದಾಗ ಎಲ್ಲಿಗೆ ಹೋಗಬೇಕು ಎನ್ನುವ ಪ್ರಶ್ನೆ ಇದೆ. ಪೂರ್ವಜರ ಕಾಲದಲ್ಲಿ ದೇವಸ್ಥಾನಗಳು ಕೌನ್ಸೆಲಿಂಗ್ ಕೇಂದ್ರಗಳಾಗಿದ್ದವು. ಪೂಜಾರಿಗಳು ಕೌನ್ಸಲರ್‌ಗಳಾಗಿದ್ದರು ಎಂದರು.
ಜ್ಞಾನ ಕೇಂದ್ರಗಳಲ್ಲಿ ಕುಳಿತುಕೊಳ್ಳಬೇಕು. ಅಲ್ಲಿಂದ ಸಮಾಧಾನ ತಂದುಕೊಳ್ಳಬೇಕು. ಇಂಥ ಕೆಲಸವನ್ನು ಸಾಕಷ್ಟು ಮಠ, ಮಾನ್ಯಗಳು ಮಾಡುತ್ತಿವೆ. ಧ್ಯಾನ ಮಾಡಿದಾಗ ಹಿಂಸಾ ಪ್ರವೃತ್ತಿ ದೂರವಾಗುತ್ತದೆ. ಇದನ್ನು ಕಲಿಸುವುದಕ್ಕೆ ಆರ್ಟ್ ಆಫ್ ಲಿವಿಂಗ್‌ನಿಂದ ಹ್ಯಾಪಿನೆಸ್ ಸೆಂಟರ್ ನಡೆಸಲಾಗುತ್ತಿದೆ ಎಂದರು.
ಕುಲಸಚಿವ ಡಾ| ಎಂ.ಜಿ. ಪಾಟೀಲ, ಡಾ| ಎಸ್.ಕೆ. ಮೇಟಿ, ಡಾ| ಬಿ.ಎಂ.ಚಿತ್ತಾಪುರ, ಆಡಳಿತ ಮಂಡಳಿ ಸದಸ್ಯ ತ್ರಿವಿಕ್ರಮ ಜೋಶಿ ಇದ್ದರು. ಡಾ| ಪ್ರಮೋದ ಕಟ್ಟಿಮನಿ ನಿರೂಪಿಸಿದರು.