Advertisement

ಬಿಡಾಡಿ ದನಗಳಿಗೆ ಪೊಲೀಸರ ಕಡಿವಾಣ

01:07 PM Jul 27, 2019 | Naveen |

ರಾಯಚೂರು: ರಸ್ತೆ ಮಧ್ಯೆ ಬೇಕಾಬಿಟ್ಟಿ ಅಲೆದಾಡುತ್ತಿದ್ದ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ, ನಗರಸಭೆ ಗುರುವಾರ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ 120ಕ್ಕೂ ಅಧಿಕ ಜಾನುವಾರುಗಳನ್ನು ಕೂಡಿ ಹಾಕಲಾಗಿದೆ.

Advertisement

ನಗರದ ಮಹಿಳಾ ಸಮಾಜದ ಆವರಣದಲ್ಲಿ ಎಲ್ಲ ದನಗಳನ್ನು ಕೂಡಿ ಹಾಕಿದ್ದು, ಶುಕ್ರವಾರ ಸಹ ಕಾರ್ಯಾಚರಣೆ ಮುಂದುವರಿಸಿದೆ. ಬಿಡಾಡಿ ದನಗಳಿಂದ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿತ್ತು. ಈ ನಿಟ್ಟಿನಲ್ಲಿ ಕ್ರಮಕ್ಕೆ ಇಳಿದ ಅಧಿಕಾರಿಗಳ ತಂಡ ಬೇಜವಾಬ್ದಾರಿ ಮಾಲೀಕರಿಗೆ ಬಿಸಿ ಮುಟ್ಟಿಸಿದೆ.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ಮಾತನಾಡಿ, ಈಚೆಗೆ ನಡೆಸಿದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ನಗರದ ನಿವಾಸಿಯೊಬ್ಬರು ಈ ಕುರಿತು ದೂರು ನೀಡಿದ್ದರು. ಅಲ್ಲದೇ, ಸುಗಮ ಸಂಚಾರದ ಹಿನ್ನೆಲೆಯಲ್ಲಿ ನಾವು ಕೂಡ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕುವ ಕುರಿತು ಚಿಂತನೆ ನಡೆಸಿದ್ದೆವು. ಹೀಗಾಗಿ ಗುರುವಾರ ರಾತ್ರಿಯಿಂದಲೇ ನಗರಸಭೆ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 120ಕ್ಕೂ ಅಧಿಕ ಜಾನುವಾರುಗಳನ್ನು ವಶಕ್ಕೆ ಪಡೆದು ಕೂಡಿ ಹಾಕಲಾಗಿದೆ ಎಂದು ವಿವರಿಸಿದರು.

ನಗರದಲ್ಲಿ ಈ ರೀತಿ ರಸ್ತೆಗಳಲ್ಲಿ ಮನಸೊ ಇಚ್ಛೆ ಓಡಾಡುವ 1500-2000 ದನಗಳಿವೆ. ಮಾಲೀಕರು ಕೇವಲ ಹಾಲು ಕರೆದು ಬಳಿಕ ರಸ್ತೆಗೆ ಬಿಡುವ ಕೆಟ್ಟ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಇದರಿಂದ ನಗರದ ಸಂಚಾರಿ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ರಸ್ತೆ ಅಪಘಾತಗಳು ಹೆಚ್ಚುತ್ತವೆ, ದನಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುವಂಥ, ದನಗಳ ಹತ್ಯೆ ಮಾಡುವಂಥ ಘಟನೆ ನಡೆದರೆ ಕೋಮು ಸಂಘರ್ಷಕ್ಕೂ ಆಸ್ಪದ ನೀಡಿದಂತಾಗುವುದರಿಂದ ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಜಾನುವಾರು ಮಾಲೀಕರು ಅವುಗಳನ್ನು ಈ ರೀತಿ ರಸ್ತೆಗಳಲ್ಲಿ ಬಿಡುವುದು ಸರಿಯಲ್ಲ. ಒಂದು ವಾರದೊಳಗೆ ಮಾಲೀಕರು ಬಂದು ತಮ್ಮ ಜಾನುವಾರುಗಳು ಎಂಬುದಕ್ಕೆ ಸೂಕ್ತ ದಾಖಲೆ ನೀಡಿದರೆ ದಂಡ ಹಾಕಿ ಬಿಟ್ಟು ಕೊಡಲಾಗುವುದು. ಯಾರು ಬಾರದಿದ್ದಲ್ಲಿ ಅಂಥ ಜಾನುವಾರುಗಳನ್ನು ಹರಾಜು ಹಾಕಲಾಗುವುದು. ಒಂದು ವೇಳೆ ಮತ್ತದೆ ತಪ್ಪು ಮರುಕಳಿಸಿದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ಮೂರು ತಿಂಗಳು ಜೈಲು ಶಿಕ್ಷೆಗೆ ಗುರಿಪಡಿಸಲು ಕೂಡ ಅವಕಾಶವಿದೆ ಎಂದು ಎಚ್ಚರಿಸಿದರು.

Advertisement

ನಗರಸಭೆ ಪೌರಾಯುಕ್ತ ಮಲ್ಲಿಕಾರ್ಜುನ ಗೋಪಶೆಟ್ಟಿ ಮಾತನಾಡಿ, ಈ ಹಿಂದೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಯಾರು ಎಚ್ಚೆತ್ತುಕೊಂಡಿಲ್ಲ. ತಮ್ಮ ಜಾನುವಾರುಗಳ ಬಿಡಿಸಿಕೊಂಡು ಹೋಗಲು ಬರುವ ಮಾಲೀಕರು ಸೂಕ್ತ ದಾಖಲೆ ಸಲ್ಲಿಸಬೇಕು. ಒಂದು ಸಾವಿರ ರೂ. ವರೆಗೆ ದಂಡ ಹಾಕುವ ಅವಕಾಶವಿದೆ. ಪದೇಪದೇ ತಪ್ಪು ಮರುಕಳಿಸಿದರೆ ಏನು ಕ್ರಮ ತೆಗದುಕೊಳ್ಳಬೇಕು ಎಂಬ ಬಗ್ಗೆ ಜಿಲ್ಲಾಧಿಕಾರಿ ನಿರ್ಧರಿಸುವರು. ಒಂದು ವಾರದವರೆಗೆ ಇಲ್ಲಿಯೇ ಕೂಡಿ ಹಾಕಿ ಮೇವು, ನೀರಿನ ವ್ಯವಸ್ಥೆ ಮಾಡಲಾಗುವುದು. ಪಶು ವೈದ್ಯಾಧಿಕಾರಿಗಳು ಪರಿಶೀಲಿಸುವರು ಎಂದು ತಿಳಿಸಿದರು.

ನಗರಸಭೆ ಅಧಿಕಾರಿ ಶರಣಪ್ಪ, ಸಿಪಿಐ ಉಮೇಶ ಸೇರಿದಂತೆ ಪೊಲೀಸ್‌ ಹಾಗೂ ನಗರಸಭೆ ಸಿಬ್ಬಂದಿ ಇದ್ದರು.

ಸಾರ್ವಜನಿಕರ ಮೆಚ್ಚುಗೆ
ಅಧಿಕಾರಿಗಳ ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ದಾರಿ ಮಧ್ಯೆ ಬೇಕಾಬಿಟ್ಟಿ ದನಗಳು ನಿಂತಾಗ ಸಾಕಷ್ಟು ಜನ ಅಪಘಾತ ಮಾಡಿಕೊಂಡ ನಿದರ್ಶನಗಳಿವೆ. ಅಲ್ಲದೇ, ರಸ್ತೆ ಮಧ್ಯೆದಲ್ಲಿಯೇ ಜಾನುವಾರುಗಳು ಗುದ್ದಾಡಿಕೊಂಡು ಪ್ರಯಾಣಿಕರ ಮೇಲರಗುತ್ತವೆ. ಈಗ ಅವುಗಳ ಹಾವಳಿಗೆ ಕಡಿವಾಣ ಹಾಕುತ್ತಿರುವುದು ಸ್ವಾಗತಾರ್ಹ. ಇದು ಕೇವಲ ಒಂದೆರಡು ದಿನಗಳ ಕ್ರಮವಾಗದೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next