Advertisement

ಸಬ್ಸಿಡಿ ಬಿತ್ತನೆ ಬೀಜ ವಿತರಣೆಗೆ ಕಡಿವಾಣ

11:05 AM Jun 14, 2019 | Naveen |

ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು:
ಸಣ್ಣ, ಅತಿ ಸಣ್ಣ ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸರ್ಕಾರ ಪ್ರತಿ ವರ್ಷ ಸಬ್ಸಿಡಿ ದರದಲ್ಲಿ ವಿತರಿಸುತ್ತಿದ್ದ ಬಿತ್ತನೆ ಬೀಜಗಳನ್ನು ಈ ಬಾರಿ ಕಡಿತಗೊಳಿಸುವ ನಿರ್ಧಾರಕ್ಕೆ ಮುಂದಾಗಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

Advertisement

ಪ್ರತಿ ಎಕರೆಗೆ ಶೇ.33ರಷ್ಟು ಮಾತ್ರ ಬಿತ್ತನೆ ಬೀಜ ವಿತರಿಸಬೇಕು ಎಂಬ ನಿಯಮ ಕಟ್ಟುನಿಟ್ಟು ಜಾರಿಗೆ ಸೂಚನೆ ಬಂದಿದೆ. ಇದು ಮೊದಲಿನಿಂದಲೂ ಇತ್ತಾದರೂ ಪರಿಣಾಮಕಾರಿಯಾಗಿ ಜಾರಿಗೊಳಿಸಿರಲಿಲ್ಲ. ಐದು ಎಕರೆವರೆಗೆ ಮಾತ್ರ ಬಿತ್ತನೆ ಬೀಜಕ್ಕೆ ಸಬ್ಸಿಡಿ ನೀಡುವ ಪದ್ಧತಿ ಇತ್ತು. ಎಕರೆಗೆ ಐದು ಕೆಜಿಯಂತೆ ಕನಿಷ್ಠ 25 ಕೆಜಿ ನೀಡಲಾಗುತ್ತಿತ್ತು. ಆದರೆ, ಈ ವರ್ಷ ಸರ್ಕಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಶೇ.33ಕ್ಕಿಂತ ಹೆಚ್ಚು ಬಿತ್ತನೆ ಬೀಜಗಳನ್ನು ಸಬ್ಸಿಡಿ ದರದಲ್ಲಿ ನೀಡುವಂತಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರಿಂದ ರೈತರಿಗೆ ಅಗತ್ಯದಷ್ಟು ಬಿತ್ತನೆ ಬೀಜ ಸಿಗದಿರುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಪ್ರತಿ ರೈತರಿಗೆ 3 ಪ್ಯಾಕೆಟ್ಗಿಂತ ಕಡಿಮೆ ಬಿತ್ತನೆ ಬೀಜ ಸಿಗಬಹುದು.

ಇಲಾಖೆ ವಾದವೇನು?: ರೈತರು ತಾವು ಬೆಳೆದ ಬೆಳೆಯಲ್ಲಿ ಮುಂದಿನ ವರ್ಷ ಬಿತ್ತನೆಗೆಂದು ಬೀಜಗಳನ್ನು ತೆಗೆದಿಡಬೇಕು. ಆದರೆ, ಕಳೆದ ಕೆಲ ವರ್ಷಗಳಿಂದ ರೈತರು ಬಿತ್ತನೆ ಬೀಜ ದಾಸ್ತಾನು ಮಾಡುವುದನ್ನೇ ಬಿಟ್ಟಿದ್ದಾರೆ. ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟನ್ನೂ ಸಬ್ಸಿಡಿಯಲ್ಲೇ ಕೇಳುತ್ತಿದ್ದಾರೆ. ಕೆಲ ದೊಡ್ಡ ರೈತರು ಸಣ್ಣ ರೈತರ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಪಡೆಯುತ್ತಿದ್ದಾರೆ. ಈಗ ಎಲ್ಲವೂ ಆನ್‌ಲೈನ್‌ನಲ್ಲೇ ಮಾಡಲಾಗುತ್ತಿದ್ದು, ಎಷ್ಟು ಎಕರೆ ಬಿತ್ತನೆಯಾಗಿದೆ ಎಂಬುದು ತಂತ್ರಾಂಶದಿಂದ ಗೊತ್ತಾಗುತ್ತದೆ. ಇದರಿಂದ ಸರ್ಕಾರ ಹೆಚ್ಚುವರಿ ಬೀಜ ನೀಡಲು ಮೀನ ಮೇಷ ಮಾಡುತ್ತಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ರೈತರಲ್ಲಿಲ್ಲ ಬಿತ್ತನೆ ಬೀಜ: ಕಳೆದೆರಡು ವರ್ಷಗಳಿಂದ ಸತತ ಬರಕ್ಕೆ ತುತ್ತಾಗಿದ್ದು, ಉತ್ತಮ ಇಳುವರಿಯೇ ಬಂದಿಲ್ಲ. ಬೆಳೆ ಮಾರಿ ಬಂದ ಹಣದಲ್ಲಿ ಸಾಲ ತೀರಿಸಲು ಕೂಡ ಆಗಿಲ್ಲ. ಅಂಥದ್ದರಲ್ಲಿ ಬಿತ್ತನೆಗಾಗಿ ಬೀಜ ಎಲ್ಲಿಂದ ತೆಗೆದಿಡಲು ಸಾಧ್ಯ ಎಂಬುದು ರೈತರ ವಾದ. ಮುಂಚೆಯೆಲ್ಲ ರೈತರೇ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳುತ್ತಿದ್ದ ಪರಿಪಾಟವಿತ್ತು. ಈಚೆಗೆ ಕೃಷಿ ಇಲಾಖೆಯಿಂದಲೇ ಗುಣಮಟ್ಟದ ಬಿತ್ತನೆ ಬೀಜ ವಿತರಿಸುತ್ತಿರುವ ಕಾರಣ ರೈತರು ದಾಸ್ತಾನು ಮಾಡುವುದನ್ನೇ ಬಿಟ್ಟಿದ್ದಾರೆ. ಈಗ ಏಕಾಏಕಿ ಇಂಥ ನಿರ್ಧಾರಕ್ಕೆ ಮುಂದಾಗಿರುವ ಸರ್ಕಾರದ ನಡೆ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಗುಣಮಟ್ಟದ್ದೇ ಸಮಸ್ಯೆ: ಜಿಲ್ಲೆಯಲ್ಲಿ 3,32,033 ಭೂ ಹಿಡುವಳಿದಾರರಿದ್ದರೆ, 1,11,859 ಸಣ್ಣ ಹಾಗೂ 1,01,422 ಅತಿ ಸಣ್ಣ ಭೂ ಹಿಡುವಳಿದಾರರಿದ್ದಾರೆ. ಜಿಲ್ಲೆಗೆ ಒಟ್ಟಾರೆಯಾಗಿ 38,690 ಕ್ವಿಂಟಲ್ ಬಿತ್ತನೆ ಬೀಜಗಳ ಅಗತ್ಯವಿದ್ದು, ಈಗಾಗಲೇ ಸರ್ಕಾರದಿಂದ 8,677 ಕ್ವಿಂಟಲ್ ಪೂರೈಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಕೆಎಸ್‌ಎಸ್‌ಸಿಯಲ್ಲಿ 4,620 ಕ್ವಿಂಟಲ್, ಎನ್‌ಎಸ್‌ಸಿಯಲ್ಲಿ 7,500 ಕ್ವಿಂಟಲ್ ಹಾಗೂ ಖಾಸಗಿಯಲ್ಲಿ 5,500 ಕ್ವಿಂಟಲ್ ದಾಸ್ತಾನಿದೆ. ಆದರೆ, ಇಲಾಖೆ ಯಾವುದೇ ಕಾರಣಕ್ಕೂ ಅನಧಿಕೃತ ಕಂಪನಿಗಳ ಬಿತ್ತನೆ ಬೀಜ ಖರೀದಿಸಬೇಡಿ ಎಂದು ಹೇಳುತ್ತಿದೆ. ಖಾಸಗಿಯಲ್ಲಿ ಖರೀದಿಸಿದ ಬಿತ್ತನೆ ಬೀಜ ಸೂಕ್ತ ಇಳುವರಿ ನೀಡುವುದಿಲ್ಲ. ನಾನಾ ರೋಗಗಳಿಗೆ ತುತ್ತಾಗುವುದರಿಂದ ರೈತರು ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಆದರೆ, ಈಗ ಇಲಾಖೆಯೇ ಅಗತ್ಯದಷ್ಟು ಬಿತ್ತನೆ ಬೀಜ ನೀಡಲು ಮೀನ ಮೇಷ ಎಣಿಸುತ್ತಿರುವುದು ವಿಪರ್ಯಾಸ.

ತೂಕ ಮಾಡಿ ಕೊಡಲಾದೀತೆ?
ಸರ್ಕಾರ ಹೇಳುವ ನಿಯಮದ ಪ್ರಕಾರ ಎಕರೆಗೆ ಶೇ.33ರಷ್ಟು ಮಾತ್ರ ಬಿತ್ತನೆ ಬೀಜ ನೀಡಬೇಕಾದರೆ 5 ಕೆಜಿ ತೂಕದ ಪ್ಯಾಕೆಟ್‌ಗಳನ್ನು ಒಡೆದು ತೂಕ ಮಾಡಿ ನೀಡಬೇಕಾಗುತ್ತದೆ. ಒಂದೆರಡು ಎಕರೆ ಹೊಂದಿರುವ ಸಣ್ಣ ಹಿಡುವಳಿದಾರರಿಗೆ ನಿಯಮಾನುಸಾರ ನೀಡುವುದು ಕಷ್ಟ. ಒಡೆದ ಪ್ಯಾಕೆಟ್‌ಗಳಿಂದ ಬಿತ್ತನೆ ಬೀಜ ಪಡೆಯಲು ರೈತರು ಅನುಮಾನಿಸುತ್ತಾರೆ. ಹೊಸ ಚೀಲದಿಂದಲೇ ನೀಡುವಂತೆ ಒತ್ತಾಯಿಸುತ್ತಾರೆ. ಸರ್ಕಾರ ಇಂಥ ನಿಯಮ ಜಾರಿ ಮಾಡುವ ಮುನ್ನ ಬೇಡಿಕೆಯನುಸಾರ ವಿವಿಧ ತೂಕಗಳ ಪ್ಯಾಕೆಟ್‌ಗಳನ್ನು ಸಿದ್ಧಪಡಿಸಬೇಕು. ನಾವು ಇಲ್ಲಿ ತಕ್ಕಡಿ ಹಿಡಿದು ತೂಕ ಮಾಡಿಕೊಂಡು ಕೂಡಲಾಗುತ್ತದೆಯೇ ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ.
ಹಿಂದೆಯೇ ಈ ನಿಯಮ ಇತ್ತಾದರೂ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಆದರೆ, ರೈತರು ತಮ್ಮ ಬಿತ್ತನೆ ಬೀಜ ತಾವೇ ಉತ್ಪಾದಿಸಬೇಕು ಎಂಬ ಕಾರಣಕ್ಕೆ ಸರ್ಕಾರ ಈ ವರ್ಷದಿಂದ ಶೇ.33ರಷ್ಟು ಮಾತ್ರ ಬೀಜ ನೀಡುವಂತೆ ಸೂಚಿಸಿದೆ. ತೀರ ಸಣ್ಣ ರೈತರಿಗೆ ಒಂದೆರಡು ಪ್ಯಾಕೆಟ್ ನೀಡಲು ನಿರ್ಧರಿಸಲಾಗಿದೆ. ಆದರೆ, ಐದು ಎಕರೆ ಇರುವ ರೈತರಿಗೆ ಮೂರಕ್ಕಿಂತ ಅಧಿಕ ಪ್ಯಾಕೆಟ್ ಸಿಗುವುದು ಕಷ್ಟ. ಸತತ ಬರ ಇರುವ ಕಾರಣ ರೈತರಲ್ಲಿ ಬಿತ್ತನೆ ಬೀಜ ದಾಸ್ತಾನಿಲ್ಲ. ನಿಯಮ ಸಡಿಲಿಸಿ ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಡಾ| ಆರ್‌.ಜಿ.ಸಂದೀಪ,
ಸಹಾಯಕ ಕೃಷಿ ನಿರ್ದೇಶಕರು, ರಾಯಚೂರು
Advertisement
Advertisement

Udayavani is now on Telegram. Click here to join our channel and stay updated with the latest news.

Next