Advertisement

ಮಹಿಳೆ-ಮಕ್ಕಳಿಗೆ ರಕ್ಷಣೆ ಒದಗಿಸಲು ಆಗ್ರಹ

06:35 PM Feb 06, 2020 | Naveen |

ರಾಯಚೂರು: ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಮಹಿಳಾ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಬುಧವಾರ ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಪುರುಷರನ್ನು ಯಾವುದೇ ಕಾರಣಕ್ಕೂ ವಾರ್ಡನ್‌ಗಳಾಗಿ, ಅಧೀಕ್ಷಕರಾಗಿ, ಕಾವಲುಗಾರರನ್ನಾಗಿ, ಅಡುಗೆ ಸಹಾಯಕರ ಹುದ್ದೆಗಳಿಗೆ ನೇಮಕ ಮಾಡಬಾರದು ಎಂದು ಆಗ್ರಹಿಸಿದರು.

ಈಚೆಗೆ ಸಿಂಧನೂರು ಹಾಗೂ ರಾಯಚೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಯಲು ನಿರ್ಲಕ್ಷ್ಯದಿಂದ ನಡೆದುಕೊಂಡಿರುವುದು ಕಾರಣವಾಗಿದೆ. ಬಹುತೇಕ ಸರ್ಕಾರಿ ಸರ್ಕಾರೇತರ ಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಗೆ ಸಮಿತಿಗಳಿಲ್ಲ. ಇರುವ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಅಂಥ ಸಂಸ್ಥೆಗಳ ಸಮಿತಿಗಳ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಹಾಗೂ ಈ ಸಮಿತಿಗಳು ಪ್ರತಿ ತಿಂಗಳು ಸಭೆ ನಡೆಸಿ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಿಳೆಯರು ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದ ಸಂದರ್ಭದಲ್ಲಿ ಸಂತ್ರಸ್ತರೊಂದಿಗೆ ಪೊಲೀಸ್‌ ಹಾಗೂ ಇತರ ಸಂಬಂಧಿಸಿದ ಇಲಾಖೆ ಅ ಧಿಕಾರಿಗಳು ನಡೆದುಕೊಳ್ಳುವ ರೀತಿ ಬದಲಾಗಬೇಕು ಎಂದು ಆಗ್ರಹಿಸಿದರು. ಸುಪ್ರೀಂಕೋರ್ಟ್‌ ಆದೇಶದಂತೆ ಇಂಥ ಪ್ರಕರಣಗಳಲ್ಲಿ ಕೂಡಲೇ ಸಂತ್ರಸ್ತರಿಗೆ ನ್ಯಾಯ ದೊರಕಬೇಕು ಹಾಗೂ ಅನ್ಯಾಯಕ್ಕೊಳಗಾದವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವಾಗಬೇಕು. ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.

Advertisement

ಒಕ್ಕೂಟದ ಸಂಚಾಲಕರಾದ ವಿದ್ಯಾ ಪಾಟೀಲ, ವಿರುಪಮ್ಮ, ಮೋಕ್ಷಮ್ಮ, ಅಮರಮ್ಮ, ಶರೀಪಮ್ಮ, ಅಂಬಮ್ಮ, ರಂಗಮ್ಮ, ಮಾಳಮ್ಮ, ಮರಿಯಮ್ಮ, ಪ್ರಿಯಾಂಕ, ಮಮತಾ, ಸಾವಿತ್ರಮ್ಮ, ಲಕ್ಷ್ಮೀ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next