ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಹಾವಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮತ್ತಷ್ಟು ಕಟ್ಟುನಿಟ್ಟಿನ ಬಂದೋಬಸ್ತ್ಗೆ ಮುಂದಾಗಿದೆ. ಮುಖ್ಯವಾಗಿ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಸರಕು ಸಾಗಣೆ ವಾಹನಗಳನ್ನು ಕೂಡ ಕಡ್ಡಾಯವಾಗಿ ತಪಾಸಣೆ ಮಾಡಿಯೇ ಬಿಡಲಾಗುತ್ತಿದೆ. ಆಂಧ್ರ, ತೆಲಂಗಾಣ ಭಾಗಕ್ಕೆ ಹೊಂದಿಕೊಂಡಿರುವ ರಾಯಚೂರು ಜಿಲ್ಲೆಯ ಆಸು ಪಾಸಿನ ಜಿಲ್ಲೆಗಳಾದ ಗದ್ವಾಲ್, ಕರೂ°ಲ್, ಮಕ್ತಾಲ್, ನಾರಾಯಣ ಪೇಟೆಯಿಂದ ಬರುವವರ ಸಂಖ್ಯೆ ಹೆಚ್ಚು. ಮಂತ್ರಾಲಯದಿಂದಲೂ ಜಿಲ್ಲಾ ಕೇಂದ್ರಕ್ಕೆ ಸಾಕಷ್ಟು ಜನ ಬರುತ್ತಾರೆ.
ಆಂಧ್ರ, ತೆಲಂಗಾಣದಲ್ಲಿ ಈಗಾಗಲೇ ಕೊರೊನಾ ಅಟ್ಟಹಾಸ ಜೋರಾಗಿದ್ದು, ಜಿಲ್ಲೆಯಲ್ಲಿ ಮಾತ್ರ ಈವರೆಗೂ ಪಾಸಿಟಿವ್ ಪ್ರಕರಣಗಳಿಲ್ಲ. ಹೀಗಾಗಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದಲ್ಲಿ ಸೋಂಕು ಹರಡುವುದನ್ನು ತಡೆಟ್ಟಬಹುದು ಎಂಬ ಕಾರಣಕ್ಕೆ ಕ್ರಮ ವಹಿಸಲಾಗುತ್ತಿದೆ. ಇದೇ ಕಾರಣಕ್ಕೆ ತಾಲೂಕಿನ ಗಿಲ್ಲೇಸೂಗೂರು ಬಳಿ ರಸ್ತೆಗೆ ಅಡ್ಡಲಾಗಿ ಬ್ರಿಕ್ಸ್ ಮೂಲಕ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ, ಸರಕು ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಲಿದೆ. ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೂ ಇದು ಪ್ರಯಾಸದ ಕೆಲಸ ಎಂಬ ಕಾರಣಕ್ಕೆ ತೆರವುಗೊಳಿಸಲಾಗಿದೆ.
ಸಿಂಗನೋಡಿ, ಜೋಗುಳಾಂಬಾ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿದ ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ವಾಹನಗಳನ್ನು ತಪಾಸಣೆ ಮಾಡಿಯೇ ಬಿಡಬೇಕು ಎಂದು ಸೂಚಿಸಿದರು. ಈವರೆಗೂ 65 ಜನರ ಗಂಟಲಿನ ದ್ರವ್ಯ ಹಾಗೂ ರಕ್ತದ ಮಾದರಿ ಪರೀಕ್ಷೆಗಾಗಿ ಲ್ಯಾಬ್‌ಗ ಕಳುಹಿಸಲಾಗಿತ್ತು. ಅದರಲ್ಲಿ 44 ವರದಿಗಳು ನೆಗೆಟಿವ್ ಬಂದಿದ್ದು, 21 ವರದಿ ಬರಬೇಕಿದೆ. ಸರ್ಕಾರಿ ಕ್ವಾರಂಟೈನ್‌ನಲ್ಲಿ 75 ಜನರಿದ್ದಾರೆ. ಜಿಲ್ಲೆಯಿಂದ ಇದೂವರೆಗೆ ಕಳುಹಿಸಲಾದ ವರದಿಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಇನ್ನೂ ಜನಧನ್ ಖಾತೆಗೆ ಜಮಾಗೊಂಡ ಹಣ ಬಿಡಿಸಿಕೊಳ್ಳಲು, ಪಡಿತರ ಪಡೆಯಲು ಜನ ಇನ್ನೂ ಗುಂಪುಗೂಡಿ ನಿಲ್ಲುವುದು ನಿಂತಿಲ್ಲ. ಜಿಲ್ಲಾಡಳಿತ ಎಷ್ಟೇ ಸೂಚಿಸಿದರೂ ಜನ ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ಎಪಿಎಂಸಿ ವಹಿವಾಟು ಕೂಡ ಪುನಃ ಸ್ಥಗಿತಗೊಳಿಸಲಾಗಿದೆ.
ಇನ್ನೂ ಕೊರೊನಾದಿಂದ ಜನ ಅಗತ್ಯ ವಸ್ತುಗಳ ಸಿಗದೇ ಪರದಾಡುತ್ತಿದ್ದು, ಕಷ್ಟಕಾಲಕ್ಕೆ ಸ್ಪಂದಿಸಲು ಸಾಕಷ್ಟು ಸಂಘ ಸಂಸ್ಥೆಗಳು ಮುಂದಾಗುತ್ತಿವೆ. ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ಖಾರ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಕಷ್ಟಕಾಲಕ್ಕೆ ನೆರವಾಗುತ್ತಿದ್ದಾರೆ