ರಾಯಚೂರು: ನೂತನ ಶೈಕ್ಷಣಿಕ ವರ್ಷ ಆರಂಭದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಗುರುವಾರ ಶಿಕ್ಷಣ ಇಲಾಖೆ ಶಾಲಾ ಪ್ರಾರಂಭೋತ್ಸವವನ್ನು ಅದ್ಧೂರಿಯಾಗಿ ನೆರವೇರಿಸಿತು.
ಜೂ.1ರಂದೇ ಅದ್ಧೂರಿಯಾಗಿ ತಳಿರು ತೋರಣಗಳಿಂದ ಸಿಂಗರಿಸಿ ಶಾಲಾ ಪ್ರಾರಂಭೋತ್ಸವಕ್ಕೆ ನಿರ್ಧರಿಸಲಾಗಿತ್ತು. ಆದರೆ, ಬಿಸಿಲಿನ ತಾಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಜೂ.5ರವರೆಗೆ ಬೇಸಿಗೆ ರಜೆ ವಿಸ್ತರಿಸಿದ ಹಿನ್ನೆಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಮುಂದೂಡಲಾಗಿತ್ತು. ಗುರುವಾರ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವ ನೆರವೇರಿಸಲಾಯಿತು.
ತಾಲೂಕಿನ ಕುಕನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಸರ್ಕಾರ ಮಕ್ಕಳು ಚೆನ್ನಾಗಿ ಓದಲಿ ಎಂಬ ಕಾರಣಕ್ಕೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ನೀಡುತ್ತಿದೆ. ನೀವು ಚೆನ್ನಾಗಿ ಓದಬೇಕು. ಪುಸ್ತಕಗಳನ್ನು ಮುಂದಿನ ವರ್ಷದವರೆಗೆ ಕಾಪಾಡಿ ಹಿಂದಿರುಗಿಸಿದರೆ ಮುಂಬರುವ ವಿದ್ಯಾರ್ಥಿಗಳಿಗೆ ನೀಡಲು ಅನುಕೂಲವಾಗಲಿದೆ. ಎಲ್ಲರೂ ಗಿಡ ಮರಗಳನ್ನು ಬೆಳೆಸುವ ಸಂಪ್ರದಾಯ ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಎಲ್ಲ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜತೆಗೆ ಸಿರಾ, ಉಗ್ಗಿ ಸೇರಿ ವಿವಿಧ ಸಿಹಿ ಪದಾರ್ಥಗಳನ್ನು ಮಾಡಿ ಮಕ್ಕಳಿಗೆ ಉಣಬಡಿಸಲಾಯಿತು.
ಮುಖ್ಯಶಿಕ್ಷಕ ಹನುಮಂತಪ್ಪ, ಸಹಶಿಕ್ಷಕರಾದ ಚಂದ್ರಶೇಖರ, ಶರಭಮ್ಮ, ಫೈಮಿದಾ ಬೇಗಂ, ರಮೇಶ ಭಂಡಾರಿ, ಸುರೇಶ, ಎಸ್‌ಡಿಎಂಸಿ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.