Advertisement

ಕೋಟಿ ಸುರಿದರೂ ಸುಧಾರಿಸದ ರಸ್ತೆ

03:55 PM Dec 12, 2019 | Naveen |

ಸಿದ್ದಯ್ಯಸ್ವಾಮಿ ಕುಕನೂರು

Advertisement

ರಾಯಚೂರು: ಜಿಲ್ಲಾ ಪಂಚಾಯಿತಿ ಅಧೀನದ ರಸ್ತೆಗಳ ದುರಸ್ತಿಗೆ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂ. ಅನುದಾನ ನೀಡುತ್ತಿದ್ದರೂ ರಸ್ತೆಗಳ ಚಿತ್ರಣ ಮಾತ್ರ ಬದಲಾಗಿಲ್ಲ. ಈ ಬಾರಿಯೂ 43.76 ಕೋಟಿ ರೂ. ಹೆಚ್ಚುವರಿ ಅನುದಾನ ಜತೆಗೆ ನೆರೆಯಿಂದ ಹಾನಿಗೀಡಾದ ರಸ್ತೆಗಳ ದುರಸ್ತಿಗೆ 10 ಕೋಟಿ ರೂ.ಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲಾಗಿದೆ.

ರಸ್ತೆಗಳ ದುರಸ್ತಿಗೆ ಸರ್ಕಾರ ಕೋಟ್ಯಂತರ ರೂ. ಮಂಜೂರು ಮಾಡುತ್ತಿದ್ದರೂ ರಸ್ತೆಗಳಿಗೆ ಅರೆಕಾಸಿನ ಮಜ್ಜಿಗೆಯಂತಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ರಸ್ತೆಗಳ ಸ್ಥಿತಿ ಸುಧಾರಿಸಿಲ್ಲ. ಪ್ರತಿವರ್ಷ ಕೇವಲ ನಿರ್ವಹಣೆ ಹೆಸರಲ್ಲಿ ಹಣ ಮಾತ್ರ ಖರ್ಚಾಗುತ್ತಿದೆ. ಇನ್ನು ಈಚೆಗೆ ಕೃಷ್ಣಾ ಹಾಗೂ ತುಂಗಭದ್ರಾ ನದಿಗೆ ಪ್ರವಾಹ ಬಂದ ಕಾರಣ ಅಲ್ಲಲ್ಲಿ ರಸ್ತೆಗಳು ಹಾಳಾಗಿವೆ. ಆರಂಭದಲ್ಲಿ ಮಳೆ ಇಲ್ಲದಿದ್ದರೂ ನೆರೆ ಮಾತ್ರ ಜೋರಾಗಿತ್ತು. ಉಭಯ ನದಿಗಳು ತುಂಬಿ ಹರಿದ ಪರಿಣಾಮ ನದಿ ಪಾತ್ರದ ಭಾಗದಲ್ಲಿ ಒಂದಷ್ಟು ಹಾನಿ ಸಂಭವಿಸಿದೆ. ಹೀಗಾಗಿ ಜಿಲ್ಲಾ ಪಂಚಾಯಿತಿಯಿಂದ ವಿಶೇಷ ಸರ್ವೇ ನಡೆಸಲಾಗಿದೆ. 72 ಕಿ.ಮೀ. ರಸ್ತೆ ಹಾಳಾಗಿದೆ ಎಂದು ವರದಿ ಸಿದ್ಧಪಡಿಸಲಾಗಿದೆ.

ಮಾನ್ವಿ ತಾಲೂಕಿನಲ್ಲೇ 26 ಕಿಮೀ ರಸ್ತೆ ಹಾಳಾಗಿದೆ. ಇದಕ್ಕಾಗಿ ಪ್ರತ್ಯೇಕ 10 ಕೋಟಿ ರೂ. ಮಂಜೂರು ಮಾಡಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎನ್ನುತ್ತವೆ ಮೂಲಗಳು. ಐದು ತಾಲೂಕುಗಳಲ್ಲಿ 1,560 ಕಿಮೀ ಡಾಂಬರ್‌ ರಸ್ತೆ, 544 ಕಿಮೀ ಜಲ್ಲಿ ರಸ್ತೆ ಹಾಗೂ 4,768 ಕಿಮೀ ಕಚ್ಚಾ ರಸ್ತೆ ಇದೆ. ಒಟ್ಟಾರೆ 6,873 ಕಿಮೀ ರಸ್ತೆಯಿದೆ. ಈ ಹಿಂದೆ ನಿರ್ವಹಣೆಗೆ ನಿರೀಕ್ಷಿತ ಅನುದಾನ ಬಿಡುಗಡೆಯಾಗದ ಕಾರಣ ಯಾವ ರಸ್ತೆಗಳು ಸುಸ್ಥಿತಿಯಲ್ಲಿಲ್ಲ ಎಂದು ಜಿಪಂ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆಯಲ್ಲಿ ವಿವರಿಸಿದ್ದು, 2020-21ನೇ ಸಾಲಿನ ಕ್ರಿಯಾಯೋಜನೆ ಸಿದ್ಧಪಡಿಸಿ 43 ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವಂತೆ ಕೋರಿದ್ದಾರೆ.

ವಾರ್ಷಿಕ ದುರಸ್ತಿಗೆ 52.69 ಕೋಟಿ: ಒಂದು ಕಿಮೀ ಡಾಂಬರ್‌ ರಸ್ತೆ ದುರಸ್ತಿಗೆ 1.5 ಲಕ್ಷ ರೂ. ಅಗತ್ಯವಿದ್ದು, 23.41 ಕೋಟಿ ರೂ. ಬೇಕಿದೆ. ಜಲ್ಲಿ ರಸ್ತೆ ದುರಸ್ತಿಗೆ ಕಿಮೀಗೆ ಒಂದು ಲಕ್ಷ ರೂ. ಅಗತ್ಯವಿದ್ದು, 5.44 ಕೋಟಿ ರೂ. ಬೇಕಿದೆ. ಅದರಂತೆ ಒಂದು ಕಿಮೀ ಮರಂ, ಮಣ್ಣಿನ ರಸ್ತೆ ದುರಸ್ತಿಗೆ 50 ಸಾವಿರ ರೂ. ಅಗತ್ಯವಿದ್ದು, 23.84 ಕೋಟಿ ರೂ. ಬೇಕಿದೆ. ಒಟ್ಟಾರೆ ನಿರ್ವಹಣೆಗೆ ಪ್ರತಿ ವರ್ಷ 52.69 ಕೋಟಿ ರೂ.ಅನುದಾನ ಅಗತ್ಯವಿದೆ ಎನ್ನುವುದು ಅಧಿಕಾರಿಗಳ ವಿವರಣೆ.

Advertisement

8.93 ಕೋಟಿ ರೂ. ಲಭ್ಯ: 2019-20ನೇ ಸಾಲಿನಲ್ಲಿ 30:54 ಯೋಜನೆಯಡಿ 5 ಕೋಟಿ ರೂ. ಹಾಗೂ 30:54 ಯೋಜನೇತರ ಅಡಿ 3.93 ಕೋಟಿ ರೂ. ಸೇರಿ 8.93 ಕೋಟಿ ರೂ. ಲಭ್ಯವಿದೆ. ಆದರೆ, ಇದು ರಸ್ತೆಗಳ ನಿರ್ವಹಣೆಗೆ ಸಾಲಲ್ಲ. ಹೀಗಾಗಿ ಹೆಚ್ಚುವರಿ 43.76 ಕೋಟಿ ರೂ. ಹಣ ಮಂಜೂರು ಮಾಡುವಂತೆ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ದುರಸ್ತಿ ಬಗ್ಗೆ ಬೇಸರ: ಲೆಕ್ಕದಲ್ಲಿ ಮಾತ್ರ ಜಿಲ್ಲಾಡಳಿತ ಪ್ರತಿ ವರ್ಷ ರಸ್ತೆಗಳ ದುರಸ್ತಿ ಮಾಡಲಾಗಿದೆ ಎಂದು ತೋರಿಸುತ್ತಿದೆ. ಆದರೆ, ವಾಸ್ತವದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳೇ ಆಗುತ್ತಿಲ್ಲ ಎಂದು ದೂರುತ್ತಾರೆ ಸಾರ್ವಜನಿಕರು. ಎಷ್ಟೋ ರಸ್ತೆಗಳು ಡಾಂಬರ್‌ ಕಿತ್ತು ಹೋಗಿದ್ದರೂ ಕೇಳ್ಳೋರಿಲ್ಲ. ಮರಂ ರಸ್ತೆಗಳು ಮಳೆ ಬಂದರೆ ಪ್ರಯಾಣಿಕರ ಜೀವಕ್ಕೆ ಕಂಟಕವಾಗಿ ಪರಿಣಮಿಸುತ್ತಿವೆ. ಆದರೆ, ಅಧಿ ಕಾರಿಗಳು ಮಾತ್ರ ರಸ್ತೆ ದುರಸ್ತಿ ಮಾಡಿಸಲಾಗಿದೆ ಎಂದು ವರದಿಯಲ್ಲಿ ಹೇಳುತ್ತಾರೆ.

ನೆರೆಯಿಂದ ಜಿಲ್ಲೆಯಲ್ಲಿ 72 ಕಿಮೀಗೂ ಅಧಿಕ ರಸ್ತೆ ಹಾಳಾಗಿದೆ. ಮಾನ್ವಿಯಲ್ಲಿ 17-18 ರಸ್ತೆಗಳು ಹಾಳಾಗಿದ್ದು, 26 ಕಿಮೀ ಹದಗೆಟ್ಟಿದೆ. ಜಿಲ್ಲಾ ಧಿಕಾರಿ 36 ಲಕ್ಷ ರೂ. ಗೆ ಅನುಮೋದನೆ ನೀಡಿದ್ದು, ಈಗಾಗಲೇ 19.5 ಲಕ್ಷ ರೂ. ನೀಡಿದ್ದಾರೆ. ನೆರೆ ಜತೆಗೆ ಹೆಚ್ಚು ಮಳೆಯಾಗಿದ್ದರಿಂದ ವಿಶೇಷ ಸರ್ವೇ ಮಾಡಲಾಗಿದೆ. ಅದರೆ ಜತೆಗೆ ಹೆಚ್ಚುವರಿ ಅನುದಾನಕ್ಕೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಆಂಜನೇಯ,
ಇಇ, ಜಿಪಂ ಪಂಚಾಯತ್‌ ರಾಜ್‌
ಇಂಜಿನಿಯರಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next