Advertisement

ಕಲೆ ಜೀವನದ ದಾರಿದೀಪ: ಕರಿಯಪ್ಪ ಮಾಸ್ತರ್‌

03:01 PM Jul 22, 2019 | Team Udayavani |

ರಾಯಚೂರು: ಕಲೆ ಕೇವಲ ಮನೋರಂಜನೆಗೆ ಸೀಮಿತವಾಗಿಲ್ಲ. ವ್ಯಕ್ತಿತ್ವ ರೂಪಿಸಿಕೊಳ್ಳಲು ಹಾಗೂ ಜೀವನದ ದಾರಿ ದೀಪವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಕರಿಯಪ್ಪ ಮಾಸ್ತರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶೃತಿ ಸಂಸ್ಕೃತಿ ಸಂಸ್ಥೆ, ಹಿತಚಿಂತಕ ಫೌಂಡೇಷನ್‌, ದಲಿತ ಕವಿ ಬೋಳಬಂಡೆಪ್ಪ ಸಮಾಜ ಮತ್ತು ಸಾಂಸ್ಕೃತಿಕ ಟ್ರಸ್ಟ್‌, ಶ್ರೀಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್‌ ಹಾಗೂ ಜನನಿ ಕಲಾ ಮತ್ತು ಯುವ ಬಳಗದ ವತಿಯಿಂದ ಹಮ್ಮಿಕೊಂಡ ಮೂರು ದಿನಗಳ ರಂಗಾಯಣ ರಂಗೋತ್ಸವದ ಎರಡನೇ ದಿನದ ನಾಟಕ ಜಾಯ್‌ ಮೈಸ್ನಾಂ ಮಣಿಪುರಂ ಅವರ ಪರಿಕಲ್ಪನೆ ಮತ್ತು ನಿರ್ದೇಶನದ ‘ಇದಕ್ಕೆ ಕೊನೆ ಎಂದು’ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಂಗಾಯಣ ಕಲಾವಿದರಿಂದ ಮೂರು ದಿನಗಳ ರಂಗೋತ್ಸವದಲ್ಲಿ ಸಾಮಾಜಿಕ ಸಮಸ್ಯೆಗಳು ಮತ್ತು ರೈತರ ಸಮಸ್ಯೆಗಳ ಕುರಿತಾದ ಕಥಾವಸ್ತುಗಳಿರುವ ಪ್ರಮುಖ ಮೂರು ನಾಟಕಗಳು ಮನೋರಂಜನೆ ಜತೆಗೆ ಯುವಜನತೆಗೆ ಜೀವನದ ದಾರಿದೀಪವಾಗುವಂತಹ ಸಂದೇಶವನ್ನು ಸಾರುತ್ತಿವೆ ಎಂದು ಹೇಳಿದರು.

ಇತ್ತೀಚಿನ ಚಲನಚಿತ್ರಗಳಲ್ಲಿ ಕೇಡಿನ ವಿಚಾರಗಳನ್ನು ವೈಭವೀಕರಿಸಲಾಗುತ್ತಿದೆ. ಉತ್ತಮ ಸಂದೇಶಗಳನ್ನು ನೀಡುವ ಸದಭಿರುಚಿಯ ಚಿತ್ರಗಳು ಅತೀ ವಿರಳವಾಗಿವೆ. ಆದರೆ, ಯುವಜನತೆ ಸಮಾಜಕ್ಕೆ ಉಪಯೋಗವಾಗುವ ಉತ್ತಮ ಗುಣಗಳನ್ನು ಮಾತ್ರ ಅಳವಡಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿ ಮತ್ತು ನವಯುಗ ಕಾಲೇಜಿನ ವಿದ್ಯಾರ್ಥಿಗಳು ತಬಲ ನುಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

Advertisement

ಕಲಾವಿದ ಡಿಂಗ್ರಿ ನರೇಶ ಮಾತನಾಡಿ, ರೈತರ ಸಮಸ್ಯೆಗಳ ಕುರಿತಾದ ಇದಕ್ಕೆ ಕೊನೆ ಎಂದು ಎಂಬ ನಾಟಕದಲ್ಲಿ ಬರಗಾಲದ ಛಾಯೆ, ರೈತರ ಸಂಕಷ್ಟಗಳು ಮತ್ತು ನೀರಿನ ಸಮಸ್ಯೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ‌ಯಿಲ್ಲದೇ ಪಡುವ ಸಂಕಷ್ಟ ಹಾಗೂ ಪ್ರಕೃತಿಯ ಮುನಿಸು, ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಅಂತ್ಯಗೊಳ್ಳುವ ರೈತನ ಬದುಕು ಕುರಿತಾಗಿ ಬೌದ್ಧಿಕ ಮತ್ತು ದೈಹಿಕ ಆಯಾಮಗಳೊಂದಿಗೆ ರಂಗಾಯಣದ ಕಲಾವಿದರ ನಟನೆ ಎಲ್ಲರನ್ನು ಆಕರ್ಷಿಸಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಕಲಾವಿದರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ನವಯುಗ ಕಾಲೇಜಿನ ಪ್ರ್ರಾಚಾರ್ಯ ವಿಘ್ನೕಶ್ವರ, ಉಪನ್ಯಾಸಕ ಜೆ.ಎಲ್. ಈರಣ್ಣ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ವಾಸುದೇವ ಮೇಟಿ, ಸಾಹಿತಿ ಬಾಬು ಬಂಡಾರಿಗಲ್, ಲಕ್ಷ್ಮಣ ಮಂಡಲಗೇರಾ, ನಾಗೇಶ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next