Advertisement

ಡಿಸಿ ವರ್ಗಾವಣೆಗೆ ರೈತ ಸಂಘ ಆಗ್ರಹ

11:27 AM Aug 25, 2019 | Team Udayavani |

ರಾಯಚೂರು: ಜಿಲ್ಲೆಯ ರೈತರ ಹಿತಾಸಕ್ತಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಜಿಲ್ಲಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗುವುದು. ಈ ಕುರಿತು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಿ ತಾಕೀತು ಮಾಡುವುದಾಗಿ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ರೈತರು ಒಂದೆಡೆ ಬರದಿಂದ, ಮತ್ತೂಂದೆಡೆ ನೆರೆ ಹಾವಳಿಯಿಂದ ತತ್ತರಿಸಿದ್ದಾರೆ. ಇಂಥ ವೇಳೆ ವಿಮೆ ಕಟ್ಟಿದ ಹಣ ಬಂದಿಲ್ಲ ಎಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ಹೋದರೆ ಜಿಲ್ಲಾಧಿಕಾರಿ ಕನಿಷ್ಠ ಸೌಜನ್ಯಕ್ಕೂ ಬರಲಿಲ್ಲ. ಇದರಿಂದ ನಮಗೂ ಸಿಟ್ಟು ಬಂದು ಕಚೇರಿಗೆ ನುಗ್ಗಲೆತ್ನಿಸಿದ್ದೆವು. ಈ ವೇಳೆ ಪೊಲೀಸರು ನಮ್ಮನ್ನು ಬಂದಿಸಿ ಬಿಡುಗಡೆ ಮಾಡಿದರು ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಈ ರೀತಿ ನಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಟಿಎಲ್ಬಿಸಿ ಕೊನೆ ಭಾಗದ ರೈತರ ಸಮಸ್ಯೆ ಹೊತ್ತು ಬಂದರೆ ಕನಿಷ್ಠ 5 ನಿಮಿಷ ಕೂಡ ಮಾತನಾಡಲಿಲ್ಲ. ಕೊನೆಗೆ ದೂರವಾಣಿ ಮೂಲಕ ಸಂಪರ್ಕಿಸಿದರೆ 2-3 ದಿನಗಳಲ್ಲಿ ಸಭೆ ಮಾಡುವುದಾಗಿ ಹೇಳಿದ್ದರು. 10 ದಿನ ಕಳೆದರೂ ಆ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.

ಜಿಲ್ಲೆಯ ರೈತರನ್ನು ಅವರು ತುಚ್ಛವಾಗಿ ಕಾಣುತ್ತಿದ್ದಾರೆ. ಅವರಿಗೆ ಇಲ್ಲಿ ಕೆಲಸ ಮಾಡಲು ಮನಸಿಲ್ಲದಿದ್ದರೆ ಬೇರೆಡೆಗೆ ಹೋಗಲಿ. ನೆರೆ ಹಾವಳಿಯಿಂದ ನದಿ ಪಾತ್ರದ ಪಂಪ್‌ಸೆಟ್‌ಗಳು ಹಾಳಾಗಿವೆ. ಟಿಸಿಗಳು ಕಿತ್ತು ಹೋಗಿವೆ. ಭತ್ತದ ಬೆಳೆ ಹಾನಿಯಾಗಿದೆ. ಇತ್ತ ಬರದಿಂದ ಮಳೆ ಇಲ್ಲದೇ ಬೆಳೆ ಒಣಗುತ್ತಿವೆ. ಟಿಎಲ್ಬಿಸಿ ಕೊನೆ ಭಾಗಕ್ಕೆ ನೀರೇ ತಲುಪಿಲ್ಲ. ಸಿರವಾರ ಯರಮರಸ್‌ ಡಿವಿಜನ್‌ಗೆ 12 ಪಾಯಿಂಟ್ ನೀರು ಕಡಿಮೆ ಬರುತ್ತಿದೆ. ಈವರೆಗೂ ಸಾಕಷ್ಟು ರೈತರಿಗೆ ಫಸಲ್ ಬಿಮಾ ಪರಿಹಾರ ಸಿಕ್ಕಿಲ್ಲ. ಇಷ್ಟೆಲ್ಲ ಸಮಸ್ಯೆಗಳಿಂದ್ದರೂ ಜಿಲ್ಲಾಧಿಕಾರಿ ಈ ರೀತಿ ವರ್ತಿಸುವುದು ಖಂಡನೀಯ ಎಂದರು.

ಜಿಲ್ಲಾಧಿಕಾರಿ ವಿಡಿಯೋ ಕಾನ್ಫ್ರೆನ್ಸ್‌ ನಲ್ಲಿ ಇದ್ದ ಕಾರಣ ಬಂದಿಲ್ಲ ಎಂಬುದು ಸುಳ್ಳು. ನಾವು ಸುಮಾರು ಮೂರು ಗಂಟೆಗಳ ಹೋರಾಟ ಮಾಡಿದ್ದೇವೆ. ಅವರು ಬ್ಯುಸಿ ಇದ್ದಲ್ಲಿ ನಮಗೆ ಸಮಯ ನಿಗದಿ ಮಾಡಬೇಕಿತ್ತು. ಆದರೆ, ದುರುದ್ದೇಶಪೂರ್ವಕವಾಗಿ ಬರದೆ ಈಗ ಇಲ್ಲದ ನೆಪ ಹೇಳುತ್ತಿದ್ದಾರೆ ಎಂದು ದೂರಿದರು.

Advertisement

ಜಿಲ್ಲಾಧಿಕಾರಿ ಕೂಡಲೇ ರೈತರ ಕ್ಷಮೆಯಾಚಿಸಬೇಕು. ಇಂಥ ಜಿಲ್ಲಾಧಿಕಾರಿ ಯನ್ನು ಕೂಡಲೇ ವರ್ಗಾವಣೆ ಮಾಡಿಸುವಂತೆ ಜಿಲ್ಲೆಯ ಜನಪ್ರತಿನಿಧಿ ಗಳಿಗೂ ಮನವಿ ಸಲ್ಲಿಸಲಾಗುವುದು ಎಂದರು.

ಎಡಿಸಿ ವಿರುದ್ಧವೂ ಆರೋಪ: ಜಿಲ್ಲಾಧಿಕಾರಿ ಆರಂಭದಲ್ಲಿ ಚನ್ನಾಗಿ ಸ್ಪಂದಿಸುತ್ತಿದ್ದರು. ಆದರೆ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಸದಿರುವುದಕ್ಕೆ ಎಡಿಸಿ ಕೂಡ ಕಾರಣರು. ಹೀಗಾಗಿ ಅವರನ್ನು ಕೂಡ ಕೂಡಲೇ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಮುಖಂಡರಾದ ದೇವರಾಜ ನಾಯಕ, ಹುಲಿಗೆಪ್ಪ ಜಾಲಿಬೆಂಚಿ, ಜಯಪ್ಪಸ್ವಾಮಿ ಉಡುಮಗಲ್, ಸೂಗೂರಯ್ಯ ಸ್ವಾಮಿ, ಬಸವರಾಜ ಮಾಲಿಪಾಟೀಲ, ಬೂದಯ್ಯ ಸ್ವಾಮಿ, ಮಲ್ಲಿಕಾರ್ಜುನ ಮಮದಾಪುರ ಸೇರಿ ಇತರರು ಇದ್ದರು.

ಆ.27ರಂದು ಬಾಗಲಕೋಟೆಯ ಜಮಖಂಡಿಯಲ್ಲಿ ರೈತರ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಕೇಂದ್ರ ಸರ್ಕಾರ ನೆರೆಪೀಡಿತರಿಗೆ ನೀಡಿದ ಪರಿಹಾರದ ಬಗ್ಗೆ ಚರ್ಚಿಸಲಾಗುವುದು. ಅಲ್ಲದೇ, ಆ.26ರಂದು ಸಿಎಂ ಯಡಿಯೂರಪ್ಪ ರೈತರ ಸಭೆ ಕರೆದಿದ್ದಾರೆ. ಜಿಲ್ಲಾಧಿಕಾರಿ ವಿರುದ್ಧ ದೂರು ನೀಡಲಾಗುವುದು. ಅದರ ಜತೆಗೆ ಸಾಲಮನ್ನಾ ಅವೈಜ್ಞಾನಿಕವಾಗಿ ಜಾರಿಯಾಗಿದ್ದು, ಸರಿಯಾಗಿ ಅನುಷ್ಠಾನ ಮಾಡುವಂತೆ ಆಗ್ರಹಿಸಲಾಗುವುದು.
ಚಾಮರಸ ಮಾಲಿಪಾಟೀಲ,
ರೈತ ಸಂಘದ ರಾಜ್ಯ ಗೌರವಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next