Advertisement

ನಗರಸಭೆಯಿಂದ ಶೇ.83.11 ತೆರಿಗೆ ವಸೂಲಿ

04:03 PM May 04, 2019 | Naveen |

ರಾಯಚೂರು: ನಗರಸಭೆ ತೆರಿಗೆ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಿರುವುದು ತೆರಿಗೆ ವಸೂಲಿಗೆ ಪೂರಕವಾಗಿ ಪರಿಣಮಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.83.11 ತೆರಿಗೆ ವಸೂಲಿಯಾಗಿರುವುದು ವಿಶೇಷ.

Advertisement

ಕಳೆದ ಎರಡು ವರ್ಷಗಳ ಕೆಳಗೆ ತೆರಿಗೆಯನ್ನು ನಗರಸಭೆ ಸಿಬ್ಬಂದಿ ಕೈಯಿಂದ ಬರೆದು ಪಾವತಿಸಿಕೊಳ್ಳುತ್ತಿದ್ದರು. ಇದರಿಂದ ತೆರಿಗೆ ಪಾವತಿ ಶೇ.70ರ ಗಡಿ ದಾಟುತ್ತಿರಲಿಲ್ಲ. ಆದರೆ, ಕಳೆದೆರಡು ವರ್ಷಗಳಿಂದ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಿದ್ದು, ಶೇ.80ರ ಗುರಿ ದಾಟಿದೆ. ಮುಂದೆ ಇನ್ನೂ ಸುಧಾರಿಸುವ ಸಾಧ್ಯತೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ನಗರಸಭೆ ಸಿಬ್ಬಂದಿ.

ಈ ವರ್ಷದಲ್ಲಿ ರಾಯಚೂರು ನಗರಸಭೆಗೆ ಶೇ.83.11 ಆಸ್ತಿ ತೆರಿಗೆ ಪಾವತಿಯಾಗಿದ್ದು, ಶೇ.16.89 ಬಾಕಿ ಇದೆ. ನಗರದ ಕಟ್ಟಡಗಳು, ಮಳಿಗೆಗಳು, ನಿವೇಶನಗಳು ಆಸ್ತಿ ತೆರಿಗೆಯ ವ್ಯಾಪ್ತಿಗೆ ಬರುತ್ತಿದ್ದು, 2017-18ನೇ ಸಾಲಿನ ಆಸ್ತಿ ತೆರಿಗೆ ವಸೂಲಾತಿಯಲ್ಲಿ 58.78 ಲಕ್ಷ ಬಾಕಿ ಇತ್ತು. 887.91 ಲಕ್ಷ ಬೇಡಿಕೆ ಸೇರಿ ಒಟ್ಟು 946.69 ಲಕ್ಷ ವಸೂಲಿ ಮಾಡುವ ಗುರಿ ಇತ್ತು. ಅದರಲ್ಲಿ 793.30 ಲಕ್ಷ ರೂ.ಪಾವತಿಯಾಗಿದ್ದು, 153.39 ಲಕ್ಷ ರೂ. ಬಾಕಿ ಇದೆ. ಕಳೆದ ವರ್ಷ ಶೇ.83.80 ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಶೇ.16.20 ಬಾಕಿ ಇತ್ತು.

ಪಾರದರ್ಶಕತೆಯಿಂದ ಹೆಚ್ಚಳ: ನಗರಸಭೆ ಆನ್‌ಲೈನ್‌ ಪದ್ಧತಿ ಮೂಲಕ ತೆರಿಗೆ ಪಾವತಿಗೆ ಪಾದರ್ಶಕತೆ ತೋರಿದ್ದು, ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ. ಮುಂಚೆ ಕೈಯಿಂದ ಬರೆದು ಪಾವತಿಸಬೇಕಿದ್ದು, ಸಾಕಷ್ಟು ಅಚಾತುರ್ಯಗಳು ನಡೆಯುತ್ತಿದ್ದವು. ನಗರಸಭೆಗೆ ಲೆಕ್ಕಪತ್ರದಲ್ಲಿ ಗೊಂದಲ ಮೂಡುತ್ತಿತ್ತು. ಆದರೆ, ಈಗ ಎಲ್ಲವೂ ಆನ್‌ಲೈನ್‌ ಆಗಿದೆ. ತೆರಿಗೆಯನ್ನು ಜನ ಬ್ಯಾಂಕ್‌ನಲ್ಲಿ ಪಾವತಿಸಿ, ನಗರಸಭೆ ಬಂದು ರಶೀದಿ ನೀಡಿದರೆ ಸಾಕು. ಇಲ್ಲಿ ಯಾವುದೇ ಅಕ್ರಮಗಳಿಗೆ ಆಸ್ಪದ ಇಲ್ಲದಂತಾಗಿದೆ.

ಶೇ.5ರಷ್ಟು ರಿಯಾಯಿತಿ: ಏಪ್ರಿಲ್ ತಿಂಗಳಿನಿಂದ ಹೊಸ ತೆರಿಗೆ ಪಾವತಿ ಆರಂಭವಾಗುವುದರಿಂದ ಆ ತಿಂಗಳು ಸರ್ಕಾರ ಶೇ.5 ತೆರಿಗೆ ವಿನಾಯಿತಿ ನೀಡಿದೆ. ಅಂದರೆ ಬಾಕಿ ಉಳಿಸಿಕೊಂಡ ತೆರಿಗೆ ಸಮೇತ ಈ ವರ್ಷದ ತೆರಿಗೆ ಪಾವತಿಸುವವರಿಗೆ ಶೇ.5 ರಿಯಾಯಿತಿ ಸಿಗಲಿದೆ. ಈ ಅವಕಾಶ ಒಂದು ತಿಂಗಳು ಇರಲಿದ್ದು, ಹಣ ಉಳಿಸಲು ಜನ ಇದೇ ತಿಂಗಳಲ್ಲಿ ಹೆಚ್ಚು ತೆರಿಗೆ ಪಾವತಿಸುತ್ತಿದ್ದಾರೆ. ಆದರೆ, ಇನ್ನೂ ಶೇ.17 ಜನ ತೆರಿಗೆ ಪಾವತಿಸದಿರುವುದು ನಗರಸಭೆಗೆ ಆರ್ಥಿಕ ಹೊರೆ ಎಂದೇ ಹೇಳಬಹುದು. ನಗರಸಭೆ ಇನ್ನೂ ಹೆಚ್ಚು ಶ್ರಮ ವಹಿಸಿದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಬಹುದು.

Advertisement

2018-19ನೇ ಸಾಲಿನ ಆಸ್ತಿ ತೆರಿಗೆ ಪಾವತಿ ಅವಧಿ ಮುಗಿದಿದ್ದು, ಶೇ.83.11 ಕರ ವಸೂಲಾಗಿದೆ. ಒಟ್ಟು 1058.99 ಗುರಿಯಲ್ಲಿ 880.11 ಲಕ್ಷ ರೂ. ವಸೂಲಾಗಿದೆ. ಪ್ರಸಕ್ತ ವರ್ಷ 178.88 ಲಕ್ಷ ರೂ. ಬಾಕಿ ಉಳಿದಿದೆ. ಆನ್‌ಲೈನ್‌ ಪದ್ಧತಿ ಜಾರಿಯಾದ ಬಳಿಕ ಆಸ್ತಿ ತೆರಿಗೆ ವಸೂಲಿಯಲ್ಲಿ ಏರಿಕೆ ಕಂಡಿದೆ.
ಮುನಿಸ್ವಾಮಿ,
ನಗರಸಭೆ ಕಂದಾಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next