Advertisement

ರಾಯಚೂರು ಏರ್‌ಪೋರ್ಟ್‌ ಜಾಗ ಪರಭಾರೆ!

12:32 PM Jan 17, 2020 | Naveen |

ರಾಯಚೂರು: ಯರಮರಸ್‌ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆಂದು ಹಲವು ದಶಕಗಳಿಂದ ಮೀಸಲಿಟ್ಟ “ಚಿನ್ನದ ಬೆಲೆ’ಯ ಭೂಮಿ ಒತ್ತುವರಿಗೆ ಒಳಪಟ್ಟಿದೆ. ಸುಮಾರು 398 ಎಕರೆ ಪ್ರದೇಶವನ್ನು ವಿಮಾನ ನಿಲ್ದಾಣಕ್ಕೆಂದು ಸ್ವಾದೀನಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಮುಖ್ಯವಾಗಿ ಏಗನೂರು ವ್ಯಾಪ್ತಿಗೆ ಸೇರಿದ 366 ಎಕರೆ ಜಮೀನು ಇದ್ದರೆ, ಯರಮರಸ್‌ ವ್ಯಾಪ್ತಿಯ 32 ಎಕರೆ ಜಮೀನಿದೆ. ಅದರ ಜತೆಗೆ ಕಂಟೋನ್ಮೆಂಟ್‌ ಭೂಮಿ ಕೂಡ ಇದ್ದು, ಅದೂ ಒತ್ತುವರಿಯಾಗಿದೆ. ಯರಮರಸ್‌ ದಂಡ್‌ ಇದೇ ವ್ಯಾಪ್ತಿಗೆ ಒಳಪಡಲಿದ್ದು, ಅಲ್ಲಿ ಕೆಲವರು ಈ ಭೂಮಿಯನ್ನೂ ತಮ್ಮ ಹೆಸರಿಗೆ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ.

Advertisement

ಸುಮಾರು ವರ್ಷಗಳ ಹಿಂದೆ ಈ ಜಮೀನು ಸ್ವಾಧೀನ ಮಾಡಿಕೊಂಡಿದ್ದು, ಇಂದಿಗೂ ಸರ್ಕಾರ ಅಲ್ಲಿ ಯಾವುದೇ ರಕ್ಷಣಾ ಕ್ರಮ ಕೈಗೊಂಡಿಲ್ಲ. ಸುತ್ತಲೂ ಬಟಾಬಯಲಿದ್ದು, ಯಾರು ಏನು ಬೇಕಾದರೂ ಮಾಡಬಹುದು ಎನ್ನುವಂತಿದೆ ಪರಿಸ್ಥಿತಿ.

ಏಗನೂರು ಬೆಳೆದಂತೆಲ್ಲ ಅಲ್ಲಿನ ಕೆಲವರು ಸರ್ಕಾರದ ಸ್ವಾಧಿಧೀನಕ್ಕೆ ಒಳಪಟ್ಟ ಜಮೀನಿನಲ್ಲೇ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಸರ್ಕಾರಕ್ಕೆ ಜಮೀನು ಮಾರಿದ್ದರೂ ಇಂದಿಗೂ ಕೃಷಿ ಮಾಡಿಕೊಂಡು ಬರಲಾಗುತ್ತಿದೆ. ಗೈರಾಣಿ ಜಮೀನು ಎಂದು ಕೆಲವರು ಉಳುಮೆ ಮಾಡಿದರೆ, ಪಿತ್ರಾರ್ಜಿತ ಆಸ್ತಿ ಎಂದು ಇನ್ನೂ ಕೆಲವರು ಕೃಷಿ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಇದು ಕೆಂಪು ಮಣ್ಣಾಗಿರುವ ಕಾರಣ ಮರಂಗಾಗಿ ಬೇಕಾಬಿಟ್ಟಿಯಾಗಿ ಭೂಮಿ ಅಗೆಯಲಾಗಿದೆ. ಇದರಿಂದ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ತೋಡಲಾಗಿದೆ. ಮುಂದೆ ಈ ಗುಂಡಿಗಳನ್ನು ಮುಚ್ಚಬೇಕಾದರೂ ಸರ್ಕಾರ ಹಣ ಖರ್ಚು ಮಾಡಬೇಕಿದೆ. ಹೀಗೆ ಹಲವು ಕಾರಣಗಳಿಗೆ ಈ ಭೂಮಿ ಬಳಕೆಯಾಗುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಇದೇ ಸ್ಥಳದಲ್ಲಿ ಚಿಕ್ಕ ದೇವಸ್ಥಾನ ಕೂಡ ನಿರ್ಮಿಸಲಾಗಿದೆ.

ಅದನ್ನು ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಿದ್ದು, ಮುಂದೊಂದು ದಿನ ದೇವಸ್ಥಾನದ ತೆರವಿನ ವೇಳೆ ಜಟಿಲ ಸಮಸ್ಯೆ ತಲೆದೋರಿದರೂ ಅಚ್ಚರಿ ಪಡಬೇಕಿಲ್ಲ.

ತ್ಯಾಜ್ಯ ವಿಲೇವಾರಿ ತಾಣ: ಕೆಲವೊಂದು ತ್ಯಾಜ್ಯ ವಿಲೇವಾರಿಗೂ ಈ ಭೂಮಿ ಬಳಕೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಆಕ್ಷೇಪ ವ್ಯಕ್ತಪಡಿಸಿದರೂ ಪ್ರಯೋಜನವಾಗಿಲ್ಲ. ಹಿಂದೆ ಸೆಪ್ಟಿಕ್‌ ಟ್ಯಾಂಕ್‌ ವಾಟರ್‌ ಬಿಡಲಾಗುತ್ತಿತ್ತು. ಅದಕ್ಕೆ ವಿರೋಧ ಬಂದ ಕಾರಣ ಈಗ ಕಡಿಮೆಯಾಗಿದೆ. ಆದರೆ ಮೆಡಿಕಲ್‌ ತ್ಯಾಜ್ಯ, ಹತ್ತಿ ತ್ಯಾಜ್ಯ, ಘನ ತ್ಯಾಜ್ಯ, ಕಟ್ಟಡ ತ್ಯಾಜ್ಯಗಳನ್ನು ಆಗಾಗ ಈ ಭಾಗದಲ್ಲೇ ವಿಲೇವಾರಿ ಮಾಡಲಾಗುತ್ತಿದೆ. ನಿರುಪಯುಕ್ತ ಹತ್ತಿ ತಂದು ಸುಡಲಾಗುತ್ತದೆ. ಇದರಿಂದ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

Advertisement

„ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next