Advertisement

ಬರದ ನಾಡಲ್ಲಿ ಚಿನ್ನದ ಬೆಳೆ ತಂದ ಶ್ರೇಷ್ಠ ಕೃಷಿಕರು

04:54 PM Dec 16, 2019 | Naveen |

ರಾಯಚೂರು: ಕೃಷಿ ಎಂದರೆ ದೂರ ಸರಿಯುವ ಸನ್ನಿವೇಶದಲ್ಲೂ ಚಿನ್ನದ ಬೆಳೆ ಬೆಳಯುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಈ ಬಾರಿ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ರಾಯಚೂರು ಕೃಷಿ ವಿವಿ ಪುರಸ್ಕರಿಸಿದೆ.

Advertisement

ಕಡಿಮೆ ನೀರಿನ ಲಭ್ಯತೆಯಲ್ಲೂ ಉತ್ತಮ ಇಳುವರಿ, ಬಹು ಬೆಳೆ ಪದ್ಧತಿ ಮೂಲಕ ನಿರಂತರ ಆದಾಯ, ಕೃಷಿಯಲ್ಲಿ ಸಾವಯವ ಗೊಬ್ಬರ ಬಳಕೆ, ಹೊಸ ಹೊಸ ಪ್ರಯೋಗಗಳಿಂದ ಯಶಸ್ಸು ಕಂಡ ರೈತರನ್ನು ಆರು ಜಿಲ್ಲೆಗಳ ಸಾಧಕ ಕೃಷಿಕರನ್ನು ಆಯ್ಕೆ ಮಾಡಲಾಗಿದೆ. ಕೃಷಿ ಮೇಳದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗಿರೀಶ ಎಂ.ಆರ್‌.: ಬಳ್ಳಾರಿ ತಾಲೂಕಿನ ಸಿದ್ದಾಪುರ ಚಿಕ್ಕಜೋಗಿನಹಳ್ಳಿ ತಾಂಡಾದ ಗಿರೀಶ ಎಂ.ಆರ್‌., ಎಂಟೆಕ್‌ ಪದವಿ ಹೊಂದಿ ವಿದೇಶದಲ್ಲಿ ಕೆಲಸ ಮಾಡಿ ಬಂದಿದ್ದಾರೆ. ಈಗ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. 30 ಎಕರೆ ಜಮೀನಿನಲ್ಲಿ ತೇಗ, ಸಿಲ್ವರ್‌, ವೋಕ, ಮಾವು ಸೇರಿದಂತೆ ಕೃಷಿ, ಅರಣ್ಯ ಬೆಳೆಗಳನ್ನು ಸಮಗ್ರವಾಗಿ ಬೆಳಯುವ ಮೂಲಕ ಯಶಸ್ಸು ಕಂಡಿದ್ದಾರೆ.

ಆರ್‌. ಪಂಪನಗೌಡ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಜಗಿನಾಳದ ಆರ್‌.ಪಂಪನಗೌಡ, ಪಿಯುಸಿ ಓದಿರುವ ಅವರು
ವಿವಿಧ ತೋಟಗಾರಿಕೆ, ಕೃಷಿ, ಅರಣ್ಯ ಬೆಳೆಗಳನ್ನು ಬೆಳೆಯುವ ಮೂಲಕ ಯಶಸ್ಸು ಪಡೆದಿದ್ದಾರೆ. ಬೇವು, ಹೆಬ್ಬೇವು ಕೂಡ ಬೆಳೆಯುತ್ತಿದ್ದಾರೆ. ಹಂಗಾಮಿನಲ್ಲಿ ಹಗರಿ ನದಿಯಿಂದ ಎರಡು ಕಿ.ಮೀ. ನೀರು ಹರಿಸಿಕೊಂಡಿದ್ದಾರೆ. ಎರಡು ಎಕರೆ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ.

ಅಂತೇಶ್ವರ ಚನ್ನಪ್ಪ ವರದ: ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ನೇಳಗಿಯ ಅಂತೇಶ್ವರ ಚನ್ನಪ್ಪ ವರದ, ಕೃಷಿ ಆದಾಯದಿಂದ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈವಿಧ್ಯಮಯ ಬೆಳೆ ಬೆಳೆದು ಮಾದರಿಯಾಗಿದ್ದಾರೆ. ಶುಂಠಿ, ಕಬ್ಬು, ಸೋಯಾ, ತೊಗರಿ, ಹೆಸರು, ಉದ್ದು ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ಸಾವಯವ ಗೊಬ್ಬರಕ್ಕಾಗಿ ಹೈನುಗಾರಿಕೆ ಅಳವಡಿಸಿಕೊಂಡಿದ್ದಾರೆ.

Advertisement

ಶೀಲುಬಾಯಿ ಹೊಸಮನಿ: ಕಲಬುರಗಿ ಜಿಲ್ಲೆಯ ಮಾಲಗತ್ತಿ ಗ್ರಾಮದ ಶೀಲುಬಾಯಿ ವಿಠಲ್‌ ಹೊಸಮನಿ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಣೆ ಹಾಗೂ ಕೋಳಿ ಸಾಕಣೆ ಮಾಡುತ್ತಿದ್ದಾರೆ. 8 ಎಕರೆ ಜಮೀನಿನಲ್ಲಿ ಅಣುಜೀವಿ ಗೊಬ್ಬರದ ಜತೆಗೆ, ಎರೆಹುಳು, ಹಸಿರೆಲೆ ಗೊಬ್ಬರ ಬಳಸಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಅದರ ಜತೆಗೆ ಸೇವಂತಿ, ಸುಗಂಧರಾಜ, ಗುಲಾಬಿ, ಗಲಾಟೆ ಹೂ ಮತ್ತು ಚಂಡು ಹೂ ಬೆಳೆಯುವ ಮೂಲಕ ನಿರಂತರ ಆದಾಯ ಮಾಡಿಕೊಂಡಿದ್ದಾರೆ.

ವಾರ್ಷಿಕ ಸರಾಸರಿ 4.5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಸುರೇಶ ಚೌಡಕಿ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿಯ ಸುರೇಶ ಚೌಡಕಿ ಸಣ್ಣಪ್ಪ, 14 ಎಕರೆ ಜಮೀನಿನಲ್ಲಿ ಸಿರಿಧಾನ್ಯ, ತೋಟಗಾರಿಕೆ, ತರಕಾರಿ ಬೆಳೆ, ದ್ವಿದಳ ಧಾನ್ಯಗಳು, ಜೇನು ಸಾಕಣೆ, ಕುರಿ ಹಸು ಸಾಕಣೆ ಹಾಗೂ ಸಾವಯವ ಗೊಬ್ಬರ ಮತ್ತು ಕೀಟನಾಶಕ ಘಟಕ ಹೊಂದಿದ್ದಾರೆ. ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಇವರ ಸಾಧನೆಯಾಗಿದೆ.

ಅಮರೇಶ ಕೋಟೆ: ಮಾನ್ವಿ ತಾಲೂಕಿನ ಜಕ್ಕಲದಿನ್ನಿಯ ಅಮರೇಶ ಕೋಟೆ, 12 ಎಕರೆ ಜಮೀನಿನಲ್ಲಿ ಕೃಷಿ, ತೋಟಗಾರಿಕೆ, ಮೇವು, ಎರೆಹುಳು ಗೊಬ್ಬರ ಇತ್ಯಾದಿ ಕಸುಬುಗಳಲ್ಲಿ ವಿಶಿಷ್ಟ ಸಾಧನೆಗೈದು ಮಾದರಿ ಎನಿಸಿದ್ದಾರೆ.

ತೊಗರಿ ಹತ್ತಿ, ಜೋಳ, ಭತ್ತ, ಸಜ್ಜೆ, ಮೆಕ್ಕೆಜೋಳ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೃಷಿ ಸಲಕರಣೆಗಳನ್ನು ತಾವೇ ಆವಿಷ್ಕರಿಸಿ ಯಶಸ್ಸು ಕಂಡಿದ್ದಾರೆ. ರಸಗೊಬ್ಬರ ಬಿತ್ತುವ ಎಳಕುಂಟೆ ಕೈ ಚಾಲಿತ ಯಂತ್ರೋಪಕರಣ ಸೇರಿದಂತೆ ವಿವಿಧ ಯಂತ್ರಗಳು ಗಮನ ಸೆಳೆಯುತ್ತವೆ. ದೇವರಾಜ ರಾಠೊಡ: ಯಾದಗಿರಿ ಜಿಲ್ಲೆಯ ಧೋರನಹಳ್ಳಿ ತಾಂಡಾದ ದೇವರಾಜ ರಾಠೊಡ, ಸತತ ಬರದಲ್ಲೂ ಕೃಷಿ, ತೋಟಗಾರಿಕೆ ವಿವಿಧ ಬೆಳೆಗಳನ್ನು ಬೆಳೆದು ಮಾದರಿ ರೈತರೆನಿಸಿಕೊಂಡಿದ್ದಾರೆ. 35 ಎಕರೆ ಜಮೀನಿನಲ್ಲಿ 6 ಎಕರೆಯಲ್ಲಿ ರೆಡ್‌ ಲೇಡಿ ತಳಿಯ ಪಪ್ಪಾಯ, ದಾಳಿಂಬೆ, 20 ಗುಂಟೆ ಸುಗಂಧ ರಾಜ, ಮಲ್ಲಿಗೆ ಹೂ, ಗುಲಾಬಿ, ಚಂಡು ಹೂ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಗಮನ ಸೆಳೆದಿದ್ದಾರೆ. ಇದರ ಜತೆಗೆ ಕೊರಲೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next