ರಾಯಚೂರು: ಲಾಕ್‌ಡೌನ್ ಜಾರಿಯಿಂದ ಬಾಕಿ ಉಳಿದುಕೊಂಡಿದ್ದ ದ್ವಿತೀಯ ಪಿಯು ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಕಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 19397 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 36 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ.
1303 ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಿಂದ ಆಗಮಿಸಿದ್ದು, ಜಿಲ್ಲೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಕೋರಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುವ ಕಾರಣ ಸರ್ಕಾರದ ನಿರ್ದೇಶನದ ಮೇರೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಾಕಷ್ಟು ಸಿದ್ಧತೆ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಮುಖ್ಯವಾಗಿ ಸಾಮಾಜಿಕ ಅಂತರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈ ಮೊದಲು ಒಂದು ಕೋಣೆಯಲ್ಲಿ 35 ವಿದ್ಯಾರ್ಥಿಗಳನ್ನು ಕೂಡಿಸಲಾಗುತ್ತಿತ್ತು. ಆದರೆ, ಈಗ 18-20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೆಚ್ಚುವರಿ ವಿದ್ಯಾರ್ಥಿಗಳಿಗೆ ಸಮೀಪದ ಶಾಲೆ ಕಾಲೇಜುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ 29 ಹೆಚ್ಚುವರಿ ವಲಯಗಳನ್ನು ರೂಪಿಸಲಾಗಿದೆ. ಈ ಮೊದಲು ನಡೆದ ಪರೀಕ್ಷೆಯಲ್ಲಿ 622 ಕೊಠಡಿಗಳಿದ್ದರೆ ಈಗ 939 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.
ಮಾಸ್ಕ್ ಸ್ಯಾನಿಟೈಸರ್ ಕಡ್ಡಾಯ: ಪರೀಕ್ಷೆಗೆ ಬರುವ ಪ್ರತಿ ವಿದ್ಯಾರ್ಥಿ ಕೂಡ ಮಾಸ್ಕ್ ಧರಿಸುವುದು ಕಡ್ಡಾಯ. ಅದರ ಜತೆಗೆ ಆಯಾ ಪರೀಕ್ಷಾ ಕೊಠಡಿಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. 200 ವಿದ್ಯಾರ್ಥಿಗಳಿಗೆ ಒಂದರಂತೆ ಥರ್ಮಲ್ ಸ್ಕ್ರೀನರ್ ನೀಡಲಾಗಿದೆ. ಒಂದು ವೇಳೆ ವಿದ್ಯಾರ್ಥಿಗಳು ಮಾಸ್ಕ್ ಮರೆತು ಬಂದಲ್ಲಿ ಪರೀಕ್ಷಾ ಕೇಂದ್ರಗಳಲ್ಲೇ ವಿತರಿಸಲು ಮಾಸ್ಕ್ ಸಂಗ್ರಹಿಸಲಾಗಿದೆ. ಈಗಾಗಲೇ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೇಶನ್ ಮಾಡುವ ಮೂಲಕ ಸ್ವಚ್ಛಗೊಳಿಸಲಾಗಿದೆ. ಅಗ್ನಿ ಶಾಮಕ ದಳಕ್ಕೆ ಈ ಹೊಣೆ ನೀಡಿದ್ದು, ಅವರು ಬೆಂಕಿ ನಂದಿಸಲು ಬಳಸುವ ವಾಹನಗಳನ್ನೇ ಬಳಸಿ ಕೇಂದ್ರಗಳನ್ನು ಸ್ವಚ್ಛಗೊಳಿಸಿದ್ದಾರೆ. ವಿದ್ಯಾರ್ಥಿಗಳಿಗೂ ಊಟ, ನೀರು ಮನೆಯಿಂದಲೇ ತರುವಂತೆ ಸೂಚನೆ ನೀಡಲಾಗಿದೆ.
ಉಚಿತ ಸಾರಿಗೆ ಸೌಲಭ್ಯ: ಇನ್ನೂ ಪರೀಕ್ಷಾ ಕೇಂದ್ರಕ್ಕೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಉಚಿತ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹಾಲ್ ಟಿಕೆಟ್ ತೋರಿಸಿದರೆ ಸಾಕು ವಿದ್ಯಾರ್ಥಿಗಳಿಗೆ ಪ್ರಯಾಣಕ್ಕೆ ಅನುವು ಮಾಡುವಂತೆ ತಿಳಿಸಲಾಗಿದೆ. ಅಲ್ಲದೇ, ಶಿಕ್ಷಣ ಇಲಾಖೆ ಈಗಾಗಲೇ ಯಾವ ಕೇಂದ್ರಗಳಿಗೆ ಎಲ್ಲಿಂದ ಮಕ್ಕಳು ಬರುತ್ತಾರೆ ಎಂಬ ಮಾರ್ಗ ಸೂಚಿಯುಳ್ಳ ನೀಲನಕ್ಷೆಯನ್ನು ಸಾರಿಗೆ ನಿಗಮಕ್ಕೆ ಸಲ್ಲಿಸಿದ್ದಾರೆ. ಅದರನ್ವಯ ಬಸ್ ಸಂಚಾರಕ್ಕೆ ಅವಕಾಶ ಮಾಡಲಾಗುತ್ತಿದೆ.
ತಂಡ ರಚನೆ: ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಪ್ರತಿ ತಾಲೂಕಿಗೆ ಇಬ್ಬರು ಸದಸ್ಯರನ್ನು ಒಳಗೊಂಡ ತಂಡ ರಚಿಸಲಾಗಿದೆ. ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಅವರೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಈಗಾಗಲೇ ಪ್ರಶ್ನೆಪತ್ರಿಕೆ ಸರಬರಾಜಾಗಿದ್ದು, ಪರೀಕ್ಷೆ ದಿನದಂದು ಪೂರೈಸಲಾಗುತ್ತಿದೆ. ಅದಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ.