ರಾಯಚೂರು: ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಡಿಸಿ ಕಚೇರಿ ಎದುರಿನ ಉದ್ಯಾನವನದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದ ಪ್ರತಿಭಟನಾಕಾರರು, ಬಳಿಕ ಅಲ್ಲಿಂದ ವೀರಶೈವ ಕಲ್ಯಾಣ ಮಂಟಪ, ಈದ್ಗಾ ಮೈದಾನ, ಬಸವೇಶ್ವರ ವೃತ್ತದ ಮಾರ್ಗವಾಗಿ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೋಲ್ಕತ್ತಾದ ಎನ್‌ಆರ್‌ಎನ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಕರ್ತವ್ಯದ ಮೇಲಿದ್ದ ಡಾ|ಪರಿಬಾಹ ಮುಖರ್ಜಿ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ. ಚಿಕಿತ್ಸೆಗೆ ಬಂದಿದ್ದ 85 ವರ್ಷ ವಯಸ್ಸಿನ ವೃದ್ಧನ ಸಾವಿಗೆ ವೈದ್ಯರೇ ಕಾರಣ ಎಂದು ಸಂಬಂಧಿಗಳು ಈ ರೀತಿ ರಕ್ಕಸ ಧೋರಣೆ ಪ್ರದರ್ಶಿಸಿದ್ದಾರೆ. ದಾಳಿಯಿಂದ ಗಂಭೀರ ಗಾಯಗೊಂಡಿರುವ ವೈದ್ಯ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅನ್ಯರ ಜೀವ ಉಳಿಸಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯರಿಗೆ ರಕ್ಷಣೆ ಇಲ್ಲದಿದ್ದರೆ ನಿರ್ಭಯದಿಂದ ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ವೈದ್ಯರ ಮೇಲೆ ನಿತ್ಯ ಒಂದಲ್ಲ ಒಂದು ಕಡೆ ಇಂಥ ಘಟನೆಗಳು ಮರುಕಳಿಸುತ್ತಿವೆ. ಯಾವ ವೈದ್ಯರು ಕೂಡ ಜೀವ ತೆಗೆಯುವ ಮಟ್ಟಕ್ಕೆ ಕಠೊರವಾಗಿ ವರ್ತಿಸುವುದಿಲ್ಲ. ಎಲ್ಲ ವೈದ್ಯರು ರೋಗಿ ಜೀವ ಉಳಿಸಲು ಹೋರಾಡುತ್ತಾರೆ. ಆದರೆ, ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ ಹೀಗೆ ವೈದ್ಯರ ಮೇಲೆ ದಾಳಿಗಳನ್ನು ಮಾಡಿದರೆ ವೈದ್ಯ ವೃತ್ತಿಗೆ ಸೇರಿದ ಯುವ ಸಮುದಾಯ ಆತಂಕಕ್ಕೊಳಗಾಗಿ ವೃತ್ತಿಗೆ ವಿದಾಯ ಹೇಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ದೂರಿದರು.
ಈ ಕೂಡಲೇ ಘಟನೆಗೆ ಕಾರಣರಾದವರನ್ನು ಬಂಧಿಸಬೇಕು. ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೊಳಿಸಿ ಕರ್ತವ್ಯದಲ್ಲಿರುವ ವೈದ್ಯರ ರಕ್ಷಣೆಗೆ ಮುಂದಾಗಬೇಕು. ಈಗ ರಾಜ್ಯದಲ್ಲಿರುವ ಕಾನೂನಿನ ಪ್ರಕಾರ ಇಂಥ ತಪ್ಪಿಗೆ ಮೂರು ವರ್ಷ ಶಿಕ್ಷೆ ಇದೆ. ಅದನ್ನು ತಿದ್ದುಪಡಿ ಮಾಡಿ ಏಳು ವರ್ಷ ಕಠಿಣ ಶಿಕ್ಷೆಗೆ ಹೆಚ್ಚಿಸಬೇಕು. ಇಲ್ಲವಾದಲ್ಲಿ ವೈದ್ಯರು ವೃತ್ತಿ ಮಾಡುವುದನ್ನು ಬಿಟ್ಟು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಡಾ| ಮಹಾಲಿಂಗಪ್ಪ ಬಿ., ಕಾರ್ಯದರ್ಶಿ ಡಾ| ಅನಿರುದ್ಧ ಸಿ. ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯರಾದ ಡಾ| ಸುರೇಶ ಸಗರದ ಸೇರಿದಂತೆ ವೈದ್ಯರಾದ ಶ್ರೀಧರ ರೆಡ್ಡಿ, ನಾಗರಾಜ ಭಾಲ್ಕಿ, ವಿ.ಎ. ಮಾಲಿಪಾಟೀಲ, ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಅನೇಕರು ಪಾಲ್ಗೊಂಡಿದ್ದರು.