Advertisement

ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ

01:07 PM Jul 10, 2019 | Naveen |

ರಾಯಚೂರು: ಶಿಕ್ಷಕರ ಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು, ಹೊಸ ಪಿಂಚಣಿ ನೀತಿ ರದ್ದುಗೊಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಜಿಲ್ಲೆಯ ಪ್ರಾಥಮಿಕ ಶಾಲೆ ಶಿಕ್ಷಕರು ಮಂಗಳವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾದ್ಯಂತ ಪ್ರಾಥಮಿಕ ಶಾಲೆಗಳಿಗೆ ಬೀಗ ಜಡಿದು ನಗರದ ಡಾ| ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ ಶಿಕ್ಷಕರು ಬಸವೇಶ್ವರ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನವನದಲ್ಲಿ ಧರಣಿ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸರ್ಕಾರ ಕೆಲ ಅನಗತ್ಯ ನಿಯಮಗಳು ಹೇರಿ ಶಿಕ್ಷಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಪದವೀಧರ ಶಿಕ್ಷಕರಿಗೆ ಮಾತ್ರ 5-7ನೇ ತರಗತಿಗೆ ಬೋಧಿಸಲು ಅವಕಾಶ ನೀಡುವುದರಿಂದ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕರ ಬಡ್ತಿಗೆ ಅನ್ಯಾಯವಾಗಲಿದೆ. ಇಲಾಖೆಯ ನಿರ್ದೇಶಕ ಆದೇಶದನ್ವಯ 2014ಕ್ಕಿಂತ ಮುಂಚೆ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 5ನೇ ವರ್ಗಕ್ಕೆ ಸೀಮಿತ ಮಾಡಿರುವುದು ಸರಿಯಲ್ಲ. ಶಿಕ್ಷಕರ ವೇತನ ಶ್ರೇಣಿ ನಿಗದಿಪಡಿಸುವಲ್ಲಿ ಸರ್ಕಾರ ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ ಎಂದು ದೂರಿದರು.

ವರ್ಗಾವಣೆ ಪ್ರಕ್ರಿಯೆ ಕೂಡ ಸಾಕಷ್ಟು ಅವೈಜ್ಞಾನಿಕವಾಗಿದ್ದು, ಇದರಿಂದ ಸಾಕಷ್ಟು ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಕಳೆದ ಮೂರು ವರ್ಷದಿಂದಲೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ಈಗ ಆರಂಭಿಸಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ಅಕ್ಟೋಬರ್‌ನಲ್ಲಿ ಪುನಃ ಕೋರಿಕೆಯ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು. ಶಿಕ್ಷಕರ ಹೆಚ್ಚುವರಿ ನಿಯೋಜನೆ ಪ್ರಕ್ರಿಯೆಯಲ್ಲಿ ನ್ಯೂನ್ಯತೆ ಸರಿಪಡಿಸಿ ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಯೋಜನೆಯನ್ನೇ ಜಾರಿಗೊಳಿಸಬೇಕು. ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

ಶಿಕ್ಷಕರ ವಿದ್ಯಾರ್ಥಿ ಅನುಪಾತ ಗುರುತಿಸುವ ವೇಳೆ ಮುಖ್ಯಶಿಕ್ಷಕರು, ದೈಹಿಕ ಶಿಕ್ಷಕರನ್ನು ಪರಿಗಣಿಸಬಾರದು. ಆರನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕ ಹುದ್ದೆಗಳವರೆಗೂ ಬಡ್ತಿ ನೀಡಬೇಕು. ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ ಆರ್ಥಿಕ ಹಾಗೂ ಇನ್ನಿತರ ಸೇವಾ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

Advertisement

ಈಗಾಗಲೇ ಮೊದಲನೇ ಹಂತದಲ್ಲಿ ಶಿಕ್ಷಕರ ಸಂಘವು ನಡೆಸಿದ ಸಭೆಯ ನಿರ್ಣಯಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದು ಅದಕ್ಕೆ ಸ್ಪಂದನೆ ಸಿಗದ ಕಾರಣ ಎರಡನೇ ಹಂತವಾಗಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಸೆ.5ರಂದು ವಿಧಾನಸೌಧ‌ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ರಂಗಯ್ಯ, ಸದಸ್ಯರಾದ ಬಸನಗೌಡ, ಭಾರತಿ, ಅಶೋಕ ಗಾಜಿ, ಹಂಪಣ್ಣ ಚಂಡೂರು, ಸುಧಾ, ಪ್ರಕಾಶ ಹೊನ್ನಟಗಿ, ತಿಮ್ಮಣ್ಣ ಬಲ್ಲಟಗಿ, ವಿನೋದಕುಮಾರ, ಸೋನಮ್ಮ, ಶಾಂತಮ್ಮ, ಮುದ್ದನಗೌಡ, ಸುರೇಶ ಕುರ್ಡಿ ಸೇರಿ ನೂರಾರು ಶಿಕ್ಷಕ-ಶಿಕ್ಷಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next