ರಾಯಚೂರು: ಅಡಿಗಡಿಗೆ ಪೂಜಿಸಲ್ಪಡುವ ವಿಘ್ನೕಶ್ವರನ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಪೂಜೆಗಳಲ್ಲಿ ಅಗ್ರ ಪೂಜೆ ಸಲ್ಲುವ ಗಣೇಶನ ಆರಾಧನೆ ಕೇವಲ ಸಾಮಾನ್ಯರು ಮಾತ್ರವಲ್ಲ ಪೂಜ್ಯರು ಕೂಡ ಶ್ರದ್ಧೆಯಿಂದ ಮಾಡುತ್ತಾರೆ. ಅವರ ಪೂಜೆಗೆ ಮಾತ್ರ ಮಡಿಯಿಂದಲೇ ಗಣೇಶ ಮೂರ್ತಿಗಳನ್ನು ತಯಾರಿಸುವುದು ವಿಶೇಷ.
ತುಮಕೂರು ಮೂಲದ ಜಯಸಿಂಹರಾವ್ ಎನ್ನುವವರು ರಾಜ್ಯದ ಕೆಲ ಪ್ರಮುಖ ಮಠಗಳ ಪೀಠಾಧಿಪತಿಗಳಿಗೆ ಮಡಿಯಿಂದಲೇ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಭಕ್ತಿ ಸೇವೆ ಸಮರ್ಪಿಸುತ್ತಿದ್ದಾರೆ. 1991ರಿಂದ ಈ ರೀತಿ ಗಣೇಶ ಮೂರ್ತಿ ತಯಾರಿಸುತ್ತಿದ್ದು, ಕಳೆದ ಮೂರು ವರ್ಷದಿಂದ ಮಂತ್ರಾಲಯ ಮಠಕ್ಕೂ ಅವರ ಸೇವೆ ವಿಸ್ತಾರಗೊಂಡಿದೆ. ವೃತ್ತಿಯಲ್ಲಿ ವರ್ತಕರಾಗಿರುವ ಜಯಸಿಂಹರಾವ ಪೂರ್ಣಕಾಲಿಕ ಕಲಾವಿದರಲ್ಲ. ಆದರೆ, ಶ್ರೀಗಳಿಗೆ ತಮ್ಮ ಸೇವೆ ಸಂದಲಿ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ. ಯಾವುದೇ ಕೆಮಿಕಲ್, ಬಣ್ಣ ಬಳಸದೆ ಮಣ್ಣಿನಿಂದ ತಯಾರಿಸಿದ ಗಣೇಶಗಳು ಪೂಜೆಗೆ ಶ್ರೇಷ್ಠ ಎನ್ನುವ ಅವರು, ಪ್ರತಿಫಲಾಪೇಕ್ಷೆ ಬಯಸದೆ ಪೀಠಾಧಿಪತಿಗಳಿಗೆ ಈ ರೀತಿ ಸುಂದರ ಗಣೇಶ ಮೂರ್ತಿಗಳನ್ನು ತಯಾರಿಸಿ ಕೊಡುತ್ತಾರೆ.
ಎಲ್ಲೆಲ್ಲಿಗೆ ಭಕ್ತಿ ಸೇವೆ?: ಕೋಲಾರ ಜಿಲ್ಲೆ ಮುಳಬಾಗಿಲಿನ ಶ್ರೀಪಾದರಾಜ ಮಠದ ಶ್ರೀ ಕೇಶವನಿಧಿ ಸ್ವಾಮೀಜಿಗಳಿಗೆ, ವ್ಯಾಸರಾಜರ ಮಠದ ಮೈಸೂರಿನ ಸೋಸಲೆಯ ವಿದ್ಯಾಮನೋಹರ ತೀರ್ಥರಿಗೆ, ಕುಂಭಕೋಣಂನ ವಿದ್ಯಾವಿಜಯ ತೀರ್ಥರಿಗೆ, ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರಿಗೆ ಜಯಸಿಂಹ ಅವರು ಗಣೇಶ ಮೂರ್ತಿಗಳನ್ನು ಮಾಡಿ ಕೊಡುತ್ತಾರೆ. ಈಗ ಚಾತುರ್ಮಾಸ್ಯ ವ್ರತ ನಡೆದಿರುವ ಕಾರಣ ಸ್ವಾಮೀಜಿಗಳು ಎಲ್ಲಿ ವ್ರತಾಚರಣೆ ಕೈಗೊಂಡಿರುವರೋ ಅಲ್ಲಿಗೆ ಹೋಗಿ ಮೂರ್ತಿಗಳನ್ನು ನೀಡಿದ್ದಾಗಿ ತಿಳಿಸುತ್ತಾರೆ ಜಯಸಿಂಹರಾವ್.
ಶ್ರದ್ಧೆ-ನಿಷ್ಠೆಯ ಮೂರ್ತಿ: ಗಣೇಶ ಹಬ್ಬ ಬಂದರೆ ಎಲ್ಲಿ ಬೇಕಾದಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಜೋರಾಗಿರುತ್ತದೆ. ಇಂಥ ಕಡೆ ಪೂಜೆ, ಪುನಸ್ಕಾರ, ನಿಯಮಗಳ ಪಾಲನೆ ಕಟ್ಟುನಿಟ್ಟಾಗಿ ಆಗುವುದಿಲ್ಲ. ಆದರೆ, ಸ್ವಾಮೀಜಿಗಳು, ಪೀಠಾಧಿಪತಿಗಳು ಮಾತ್ರ ಶ್ರದ್ಧೆಯಿಂದ ಪೂಜೆ ಮಾಡುತ್ತಾರೆ. ಕೇವಲ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಬಳಿಕ ವಿಸರ್ಜಿಸುವುದು ಶಿಷ್ಟಾಚಾರ. ಹೀಗಾಗಿ ಅವರ ಈ ಪೂಜೆಗೆ ಯಾವುದೇ ಚ್ಯುತಿ ಬಾರದಂತೆ ಕಲಾವಿದರು ಕೂಡ ಅಷ್ಟೇ ಶ್ರದ್ಧೆ, ನಿಷ್ಠೆ ವಹಿಸಿ ಮಡಿಯಿಂದಲೇ ಮೂರ್ತಿಗಳನ್ನು ತಯಾರಿಸಿಕೊಡುತ್ತಾರೆ.
ಮುಕ್ಕಾಗದಂತೆ ಎಚ್ಚರ: ಗಣೇಶ ಮೂರ್ತಿಗಳನ್ನು ಚಿನ್ನ, ಬೆಳ್ಳಿ, ಇನ್ನಿತರ ಲೋಹ, ಮರ ಇಲ್ಲವೇ ಮಣ್ಣಿನಿಂದ ತಯಾರಿಸಿ ಪೂಜೆಗೆ ಬಳಸುತ್ತಾರೆ. ಗಣೇಶ ಚತುರ್ಥಿಗಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕಿರುವ ಕಾರಣ ಸಾಮಾನ್ಯವಾಗಿ ಮಣ್ಣಿನಿಂದಲೇ ತಯಾರಿಸಲಾಗುತ್ತದೆ. ಮಣ್ಣಿನ ಮೂರ್ತಿಗಳು ಒಣಗಿದಾಗ ಬಿರುಕು ಬಿಡುವುದು, ಮುಕ್ಕಾಗುವ ಸಾಧ್ಯತೆಗಳಿರುತ್ತವೆ. ಆದರೆ, ಅಂಥ ಮೂರ್ತಿಗಳು ಪೂಜೆಗೆ ಅರ್ಹವಲ್ಲ. ಹೀಗಾಗಿ ಮಣ್ಣನ್ನು ಚೆನ್ನಾಗಿ ಹದ ಮಾಡಿ ನೆರಳಿನಲ್ಲಿ ಒಣಗಿಸಲಾಗುತ್ತದೆ. ಮುಕ್ಕಾಗದ, ಸುಂದರ ಮೂರ್ತಿಗಳನ್ನು ಮಾತ್ರ ಶ್ರೀಗಳಿಗೆ ಸಮರ್ಪಿಸುವುದಾಗಿ ತಿಳಿಸುತ್ತಾರೆ ಮೂರ್ತಿ ತಯಾರಕ ಜಯಸಿಂಹರಾವ್.