ರಾಯಚೂರು: ಎಲ್ಲರಿಗೂ ಸರ್ಕಾರದಿಂದ ಸಿಗುವ ಪಿಂಚಣಿ ಸಮರ್ಪಕವಾಗಿ ವಿತರಿಸುವ ನಿಟ್ಟಿನಲ್ಲಿ ಇನ್ನು ಮುಂದೆ ಪ್ರತಿ ಹೋಬಳಿಯಲ್ಲೂ ಪಿಂಚಣಿ ಅದಾಲತ್ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯಲ್ಲಿ 2,36,787 ಪಿಂಚಣಿದಾರರಿದ್ದು, ಎಲ್ಲರಿಗೂ ಪಿಂಚಣಿ ಸಿಗುತ್ತದೆಯೇ ಎಂದು ಅವರ ಮನೆಗೇ ಹೋಗಿ ವಿಚಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ರಾಯಚೂರು ಜಿಲ್ಲೆಯಲ್ಲಿ ಪಡಿತರ ಚೀಟಿ ಪಡೆದವರಲ್ಲಿ ಶೇ.99.4ರಷ್ಟು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ. 94ಸಿ, 94ಸಿಸಿ ಸಲ್ಲಿಕೆಯಾಗಿದ್ದ ಅಕ್ರಮ ಸಕ್ರಮ ಅರ್ಜಿಗಳನ್ನೆಲ್ಲ ವಿಲೇವಾರಿ ಮಾಡಲಾಗಿದೆ. ಇತ್ಯರ್ಥಗೊಂಡವರಿಗೆ ಹಕ್ಕುಪತ್ರಗಳನ್ನು ಜಿಲ್ಲಾಡಳಿತ ವಿತರಿಸಿದೆ. ಸರ್ವೇ ಮಾಡಲು ಸಿಬ್ಬಂದಿ ಕೊರತೆ ಇದೆ ಎಂಬುದು ಗೊತ್ತಾಗಿದ್ದು, ಜಿಲ್ಲೆಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ತ್ವರಿತಗತಿಯಲ್ಲಿ ಪೋಡಿಮುಕ್ತ ಗ್ರಾಮಗಳನ್ನು ನಿರ್ಮಿಸಬೇಕು. ಹೊಸ ತಾಲೂಕುಗಳು ರಚನೆಯಾದ ಬಳಿಕ ಕಂದಾಯ ಇಲಾಖೆಯಿಂದ ಮಾತ್ರ ಅಧಿಕಾರಿಗಳು ಹೋಗಿದ್ದಾರೆ. ಇನ್ನುಳಿದ 14 ಇಲಾಖೆಗಳಿಂದಲೂ ಅಧಿಕಾರಿಗಳನ್ನು ನಿಯೋಜಿಸಬೇಕಿದೆ. ಮಿನಿ ವಿಧಾನಸೌಧ ನಿರ್ಮಿಸಲು ಸ್ಥಳ ಸಿದ್ಧವಿದ್ದಲ್ಲಿ 10 ಕೋಟಿ ರೂ. ಅನುದಾನ ಕೂಡಲೇ ನೀಡುವುದಾಗಿ ತಿಳಿಸಿದರು.
ಈಗ ರಾಜ್ಯದಲ್ಲಿ ಬರವಿದ್ದು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಈವರೆಗೂ ಸಮರ್ಪಕ ಮಳೆ ಬಿದ್ದಿಲ್ಲ. ಆದರೆ, ಇಲಾಖೆ ಮಾತ್ರ ಬಿತ್ತನೆ ಬೀಜ ರಸಗೊಬ್ಬರ ಸಿದ್ಧಪಡಿಸಿಕೊಂಡಿದೆ. ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ 43,282 ರೈತರ 183.35 ಕೋಟಿ ರೂ., ಸಹಕಾರಿ ಬ್ಯಾಂಕಿನಲ್ಲಿ 18,356 ರೈತರ 76,64 ಕೋಟಿ ರೂ. ಸಾಲ ಮನ್ನಾ ಆಗಿದೆ. ಎಲ್ಲ ಜಿಲ್ಲೆಗಳಲ್ಲೂ ಸಾಲಮನ್ನಾ ಆದರೂ ಬಿಜೆಪಿ ವಿನಾಕಾರಣ ಆರೋಪ ಮಾಡುತ್ತಿದೆ. ನಯಾಪೈಸೆ ಬಂದಿಲ್ಲ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶಕ್ಕಾಗಿ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಎಸಿ ಶಿಲ್ಪಾ ಶರ್ಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ| ಚೇತನಾ ಪಾಟೀಲ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಅಶೋಕ ಕೊಳ್ಳ, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ಎಂ.ಎಸ್.ಗೋನಾಳ ಇತರರು ಉಪಸ್ಥಿತರಿದ್ದರು.