Advertisement

ಬಿಸಿಲೂರು ಶಾಸಕರು ದೂರ?

04:12 PM Jul 03, 2019 | Naveen |

ರಾಯಚೂರು: ಒಂದು ಕಾಲದಲ್ಲಿ ಆಪರೇಷನ್‌ ಕಮಲಕ್ಕೆ ನಾಂದಿ ಹಾಡಿದ್ದ ರಾಯಚೂರು ಜಿಲ್ಲೆಯಲ್ಲೀಗ ಆ ಪ್ರಕರಣದ ಸದ್ದಡಗಿದೆ. ಹಿಂದೆ ಬಹುವಾಗಿ ಹೆಸರು ಕೇಳಿ ಬಂದಿದ್ದ ಇಬ್ಬರು ಶಾಸಕರು ಈಗ ತಟಸ್ಥ ನಿಲುವು ಪ್ರದರ್ಶಿಸಿದ್ದಾರೆ ಎನ್ನಲಾಗುತ್ತಿದೆ.

Advertisement

ಈ ಹಿಂದೆ ಆಪರೇಷನ್‌ ಕಮಲದ ಪ್ರಹಸನ ನಡೆದಾಗ ಜಿಲ್ಲೆಯ ಕಾಂಗ್ರೆಸ್‌ ಶಾಸಕರಾದ ಪ್ರತಾಪಗೌಡ ಪಾಟೀಲ, ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಹೆಸರು ಕೇಳಿ ಬಂದಿತ್ತು. ಅದು ಪದೇಪದೆ ಕೇಳಿ ಬಂದಿದ್ದರಿಂದ ಅನುಮಾನಕ್ಕೆಡೆ ಮಾಡಿತ್ತು. ಅಲ್ಲದೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಜಿಲ್ಲೆಗೆ ಬಂದು ತಂಗಿದ್ದಾಗ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಇಬ್ಬರು ಶಾಸಕರಿಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ನಿಗಮ ಮಂಡಳಿ ಕರುಣಿಸಿದ್ದರು. ಅದಾಗಿ ಸಾಕಷ್ಟು ತಿಂಗಳ ಬಳಿಕ ಈಗ ಮತ್ತೆ ಅಂಥದ್ದೇ ಪ್ರಹಸನ ಶುರುವಾಗಿದೆ. ಆದರೆ, ಅದರಲ್ಲಿ ಜಿಲ್ಲೆಯ ಈ ಇಬ್ಬರು ಶಾಸಕರು ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.

ಪ್ರತಾಪಗೌಡ್ರ ಖಡಕ್‌ ನಿಲವು: ಪದೇಪದೆ ಹೆಸರು ಪ್ರಸ್ತಾಪವಾದ ಕಾರಣ ಇರಿಸುಮುರಿಸುಗೊಂಡಿದ್ದ ಶಾಸಕ ಪ್ರತಾಪಗೌಡ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದರು. ಆದರೆ, ಅವರು ಮಾನಸಿಕವಾಗಿ ಬಿಜೆಪಿಯತ್ತ ವಾಲಿದ್ದು ನಿಜ ಎಂದು ಹೇಳುತ್ತಾರೆ ಅವರ ಬೆಂಬಲಿಗರು. ಆದರೆ, ನಿಗಮ ಮಂಡಳಿ ಸಿಕ್ಕ ಮೇಲೆ ಅವರು ತಟಸ್ಥ ನಿಲುವು ತೋರಿದ್ದಾರೆ. ಒಂದು ವೇಳೆ ಸರ್ಕಾರ ಕೆಡವಲು ಬೇಕಾಗುವಷ್ಟು ಶಾಸಕರು ರಾಜೀನಾಮೆ ನೀಡುವುದಾದರೆ ಕೊನೆಯದು ನನ್ನದೇ ಎಂಬ ಅಭಯ ಕೂಡ ನೀಡಿದ್ದರು ಎನ್ನುತ್ತವೆ ಮೂಲಗಳು. ಆದರೆ, ಅವರ ನೀಡಿದ ಮಾತು ನಿಜವೇ ಆಗಿದ್ದರೆ ಈಗ ಅವರ ನಿಲವು ಯಾರ ಕಡೆ ಎಂಬ ಅನುಮಾನವಂತೂ ಇದ್ದೇ ಇದೆ. ಈಗಂತೂ ಅವರು ಕಾಂಗ್ರೆಸ್‌ ತೆಕ್ಕೆಯಲ್ಲಿದ್ದಾರೆ ಎನ್ನುತ್ತವೆ ಮೂಲಗಳು.

ಗದ್ದಲದಿಂದ ದದ್ದಲ್ ದೂರ: ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಕೂಡ ಹಿಂದೆ ಆಪರೇಷನ್‌ ಪ್ರಹಸನಕ್ಕೆ ಮುಂದಾಗಿದ್ದರು. ಆದರೆ, ನಿಗಮದ ಜತೆಗೆ ಕ್ಷೇತ್ರಕ್ಕೆ ಉತ್ತಮವಾಗಿ ಅನುದಾನ ಹರಿದು ಬಂದಿರುವ ಕಾರಣ ಅವರು ಈಗ ತಟಸ್ಥ ನಿಲುವು ಪ್ರದರ್ಶಿಸುತ್ತಾರೆ ಎನ್ನುತ್ತವೆ ಮೂಲಗಳು.

ಮೊದಲನೇ ಬಾರಿಗೆ ಗೆದ್ದರೂ ಅವರು ಬಿಜೆಪಿಯತ್ತ ಮುಖ ಮಾಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಸತತ ನಾಲ್ಕಾರು ದಿನ ಮೊಬೈಲ್ ಸ್ವಿಚ್ ಆಫ್‌ ಮಾಡಿದ್ದರಿಂದ ಈ ಅನುಮಾನಗಳಿಗೆ ಪುಷ್ಠಿ ಸಿಕ್ಕಿತ್ತು. ಅದರ ಫಲವೆನ್ನುವಂತೆ ನಿಗಮ ಮಂಡಳಿ ಒಲಿಯುವ ಮೂಲಕ ವರವಾಗಿ ಪರಿಣಮಿಸಿತು. ಆದರೆ, ಪದೇಪದೆ ಹೆಸರು ಕೇಳಿ ಬರುವ ಕಾರಣ ಕ್ಷೇತ್ರದಲ್ಲಿ ತಮ್ಮ ಬಗ್ಗೆ ಅಪನಂಬಿಕೆ ಮೂಡುವ ಸಾಧ್ಯತೆ ಇದ್ದು, ಈ ಬಾರಿ ತಟಸ್ಥ ನಿಲುವು ತೋರಿದ್ದಾರೆ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next