ರಾಯಚೂರು: ಜಿಲ್ಲೆಯ ಅಭಿವೃದ್ಧಿ ದಿಸೆಯಲ್ಲಿ ಹೊಸದಾಗಿ ರೂಪಿಸಿದ ಯೋಜನೆಗಳು, ಕಾಮಗಾರಿಗಳ ಮಾಹಿತಿಯನ್ನು ತ್ವರಿತವಾಗಿ ತಿಳಿಸಿದಲ್ಲಿ ಅವುಗಳನ್ನು ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಗಳಡಿ ಸೇರಿಸುವುದಾಗಿ ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ್ ಯಾದವ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬರ, ಪ್ರವಾಹ ಪರಿಸ್ಥಿತಿ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಸಭೆಯಲ್ಲಿ ಅವರು ಮಾತನಾಡಿದರು. ಪ್ರವಾಹದಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ. ಮೂಲ ಸೌಲಭ್ಯಗಳೂ ಇಲ್ಲದಾಗಿದೆ. ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಸಮಸ್ಯೆಯಾಗುತ್ತಿದೆ. ಇಂಥ ವೇಳೆ ಅವುಗಳ ಸಮರ್ಪಕ ಅನುಷ್ಠಾನ ದೃಷ್ಟಿಯಿಂದ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಯಚೂರು ವಲಯದ ಜೆಸ್ಕಾಂ ಇಇ ಮಾತನಾಡಿ, ಪ್ರವಾಹದಿಂದ ಉಭಯ ನದಿಗಳಲ್ಲಿ 879 ವಿದ್ಯುತ್ ಪರಿವರ್ತಕಗಳು ಹಾಳಾಗಿದ್ದು, ಅದರಲ್ಲಿ 658 ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ. ಇನ್ನೂ 221 ಪರಿವರ್ತಕಗಳನ್ನು ಚಾರ್ಜ್ ಮಾಡಿ 2-3 ದಿನಗಳಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಡಾ| ಚೇತನಾ ಪಾಟೀಲ ಮಾತನಾಡಿ, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆಗಸ್ಟ್‌ನಲ್ಲಿ ಶೇ.95ರಷ್ಟು ಮಳೆ ವಾಡಿಕೆ ಇದ್ದು ಶೇ.45ರಷ್ಟು ಮಳೆಯಾಗಿದೆ ಎಂದರು. ತಾಲೂಕುವಾರು ಬೆಳೆಗಳ ಬಗ್ಗೆ ಸವಿವರದ ಮಾಹಿತಿ ಸಿದ್ಧಪಡಿಸಿ ವರದಿ ನೀಡುವಂತೆ ಸುಬೋಧ್ ಯಾದವ್ ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಯ ಇಇ ಗಣಪತಿ ಸಾಕ್ರೆ ಮಾತನಾಡಿ, ಜಿಲ್ಲೆಯ 117 ಗ್ರಾಮಗಳಲ್ಲಿ 148 ಖಾಸಗಿ ಬೋರ್‌ವೆಲ್ ಕೊರೆಸಿದ್ದು, ಲಿಂಗಸುಗೂರು ತಾಲೂಕಿನ 5 ಗ್ರಾಮಗಳಿಗೆ ಮಾತ್ರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು. ಆ ಹಳ್ಳಿಗಳಲ್ಲೂ ಬೋರ್‌ವೆಲ್ ಕೊರೆಯಿಸಿ ಶಾಶ್ವತ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಿ. ಕುಡಿಯುವ ನೀರಿನ ಯೋಜನೆಗಳಿಗೆ ಯಾವುದೇ ಹಣಕಾಸಿನ ತೊಂದರೆ ಇಲ್ಲ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಶರತ್ ಬಿ., ಎಡಿಸಿ ಗೋವಿಂದರೆಡ್ಡಿ, ಎಸಿ ಸಂತೋಷಕುಮಾರ, ಲಿಂಗಸುಗೂರು ಎಸಿ ರಾಜಶೇಖರ ಡಂಬಳ, ತಹಶೀಲ್ದಾರ್ ಡಾ| ಹಂಪಣ್ಣ, ಸಿರವಾರ ತಹಶೀಲ್ದಾರ್ ಶ್ರುತಿ ಕೆ., ಜಿಪಂ ಯೋಜನಾಧಿಕಾರಿ ಶರಣಬಸವ ಸೇರಿ ಅನೇಕರು ಪಾಲ್ಗೊಂಡಿದ್ದರು.
ಪರಿಹಾರ ಕೇಂದ್ರಗಳಲ್ಲಿರುವ ನೆರೆ ಸಂತ್ರಸ್ತರು, ತಮ್ಮ ಸ್ವ ಸ್ಥಾನಕ್ಕೆ ತೆರಳುವ ಮುನ್ನ ಅವರ ಒಪ್ಪಿಗೆ ಪಡೆದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಅಲ್ಲಿ ಅವರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಸ್ಥಳೀಯ ಅಧಿಕಾರಿಗಳು ಒತ್ತು ನೀಡಬೇಕು. ಪ್ರವಾಹದ ವೇಳೆ ಜಲಾವೃತಗೊಂಡ ಸೇತುವೆಗಳು ಜಖಂಗೊಂಡಿದ್ದು, ಜನ ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕ ಸೇತುವೆ ನಿರ್ಮಿಸಬೇಕು. ಬಳಿಕ ಶಾಶ್ವತ ಸೇತುವೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು.
•
ಸುಬೋಧ್ ಯಾದವ್,
ಪ್ರಾದೇಶಿಕ ಆಯುಕ್ತರು