ರಾಯಚೂರು: ಹೆಚ್ಚುತ್ತಿರುವ ಮನೆಗಳ್ಳತನ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯಿಂದ ಲಾಕ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರು ಇದನ್ನು ಬಳಸುವ ಮೂಲಕ ಸಹಕರಿಸಬೇಕು ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ತಿಳಿಸಿದರು.
ನಗರದ ಸದರ್ ಬಜಾರ್ ಠಾಣೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳವು ತಡೆಯಲು ಈ ಅಪ್ಲಿಕೇಶನ್ ರಚಿಸಲಾಗಿದೆ. ಮನೆ ಮಾಲೀಕರು ಊರಿಗೆ ತೆರಳುವ ಮುನ್ನ ಈ ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಬೇಕು. ಇದರಿಂದ ಇಲಾಖೆ ಮನೆ ಕಡೆ ನಿಗಾ ವಹಿಸಲು, ಪೊಲೀಸರು ಗಸ್ತು ತಿರುಗಲು ಅನುಕೂಲವಾಗಲಿದೆ ಎಂದು ಹೇಳಿದರು.
ನಾನು ಜಿಲ್ಲೆಗೆ ಬಂದ ಕೂಡಲೇ ಕೆಲ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದು, ಮರಳು ಗಣಿಗಾರಿಕೆ, ನಗರದಲ್ಲಿನ ಸಂಚಾರ ಸಮಸ್ಯೆ ಸೇರಿ ಕೆಲವೊಂದು ವಿಚಾರಗಳು ತಿಳಿದಿವೆ. ಜಿಲ್ಲೆಗೆ ಬಂದಾಗಿನಿಂದ ಎಲ್ಲ ಠಾಣೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಜನರಿಗೆ ಉತ್ತಮ ಸೇವೆ ಸಿಗಬೇಕು ಎಂಬುದಷ್ಟೇ ನಮ್ಮ ನಿರೀಕ್ಷೆ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.
ರಸ್ತೆ ನಿಯಮ ಉಲ್ಲಂಘನೆ ಕುರಿತು ಈಗಾಗಲೇ ಜಿಲ್ಲೆಯಲ್ಲಿ 680 ಪ್ರಕರಣ ದಾಖಲಿಸಿದ್ದು, 95,400 ರೂ. ದಂಡ ವಿಧಿಸಲಾಗಿದೆ. ರಸ್ತೆ ನಿಯಮಗಳ ಕಡ್ಡಾಯ ಪಾಲನೆ ಎಲ್ಲರ ಜವಾಬ್ದಾರಿಯಾಗಿದೆ. ನಾವು ಕೂಡ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಸಾರ್ವಜನಿಕರು ಯಾರಿಗೆ ಎಲ್ಲಿಯೇ ಅನ್ಯಾಯವಾಗಲಿ ಯಾವುದೇ ಠಾಣೆಯಲ್ಲಾದರೂ ದೂರು ಸಲ್ಲಿಸಬಹುದು. ಕಾರಣಾಂತರಗಳಿಂದ, ಸಮರ್ಪಕ ಮಾಹಿತಿ ಕೊರತೆಯಿಂದ ಕೆಲವೊಮ್ಮೆ ಪ್ರಕರಣ ದಾಖಲಿಸಲು ಪೊಲೀಸರು ಹಿಂಜರಿಯಬಹುದು. ಕಡ್ಡಾಯವಾಗಿ ದೂರು ದಾಖಲಿಸುಕೊಳ್ಳುವಂತೆಯೂ ಪೊಲೀಸರಿಗೆ ತಿಳಿಸಲಾಗಿದೆ ಎಂದರು.
ಇನ್ನು ಇಲಾಖೆ ಸಿಬ್ಬಂದಿಗೂ ಯಾವುದೇ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರುವಂತೆ ತಿಳಿಸಲಾಗಿದೆ. ಸರ್ಕಾರದ ಸೌಲಭ್ಯಗಳ ವಿಚಾರದಲ್ಲಿ ಅವರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಲಾಗಿದೆ ಎಂದರು.
ಪಿಎಸ್‌ಐಗಳಾದ ಉಮೇಶ, ಉಮೇಶ ಕಾಂಬ್ಳೆ ಇದ್ದರು. ಬಳಿಕ ಕಚೇರಿ ಆವರಣದಲ್ಲಿಯೇ ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ ಸಸಿ ನೆಟ್ಟು ನೀರುಣಿಸಿದರು.